ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು. ಇಂದು, ಕೊಲೆ ಮಾಡಿದ ತಂಡವನ್ನು ಪೊಲೀಸರು ಬಂಧಿಸಿದ್ದಾರೆ.
ಅಪಘಾತ ಸ್ಥಳದಲ್ಲಿದ್ದ ಬುಲೆರೋ ವಾಹನ ಚಾಲಕನನ್ನು ಹಿಡಿದು ಪೊಲೀಸರು ವಿಚಾರಣೆ ನಡೆಸಿದಾಗ ಈ ಸುಪಾರಿ ಗ್ಯಾಂಗ್ ಕೊಲೆ ಮಾಡಿರುವುದಾಗಿ ತಿಳಿದು ಬಂದಿದೆ. ಗ್ಯಾಂಗ್ ನ್ನು ವಶಪಡಿಸಿಕೊಂಡು ವಿಚಾರಣೆ ನಡೆಸಿ ತನಿಖೆ ಮಾಡಿದಾಗ, ನಂದಿನ್ನಿ ಗ್ರಾಮದ ರೈಸ್ ಮಿಲ್ ಮಾಲೀಕರಾದ ಮಿಲ್ ಈರಣ್ಣ ಈ ಹತ್ಯೆ ಮಾಡಿಸಿದ್ದಾರೆ ಎನ್ನುವುದು ತಿಳಿದುಬಂದಿದೆ.
ಮಿಲ್ ಈರಣ್ಣ, ರಾಯಲಸೀಮಾ ಸುಪಾರಿ ಗ್ಯಾಂಗ್ ಜೊತೆ 15 ಲಕ್ಷ ರೂಪಾಯಿಗೆ ಒಪ್ಪಂದ ಮಾಡಿಕೊಂಡು ಕೊಲೆ ಮಾಡಲು ಸಂಚು ರೂಪಿಸಿದ್ದರು. ಸುಪಾರಿ ಗ್ಯಾಂಗ್ ಒಂದು ವಾರದಿಂದ ಭೀಮರಾಯನ ಬೆನ್ನುಹತ್ತು, ಆತ ಒಬ್ಬಂಟಿಯಾಗಿ ಇರುವ ಸಂದರ್ಭ ನೋಡಿ ಅಪಘಾತ ಮಾಡಿಸಿ ಕೊಲೆ ಮಾಡಿದ್ದಾರೆ.
ಕಳೆದ ಶುಕ್ರವಾರದಿಂದ ವಿಚಾರಣೆ ನಡೆಸಿದ ಪೊಲೀಸರು, ಇಂದು ಹತ್ತು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 8 ಲಕ್ಷ 50 ಸಾವಿರ ರುಪಾಯಿ ಹಣ, ನಾಲ್ಕು ಕಾರು, ಒಂದು ಫೋರ್ ವಿಲ್ಹರ್ ಬೊಲೆರೋ ವಾಹನ, ಎರಡು ದ್ವಿಚಕ್ರ ವಾಹನ, ಹನ್ನೊಂದು ಮೊಬೈಲ್ ಫೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಜೊತೆಗೆ, ಪ್ರಮುಖ ಆರೋಪಿಗಳನ್ನು ಬಂಧಿಸಿ ಪೋಲಿಸ್ ಕಸ್ಟಡಿಗೆ ಹಾಕಲಾಗಿದೆ ಎಂದು ಜಿಲ್ಲಾ ಎಸ್.ಪಿ ಟಿ. ಶ್ರೀನಿವಾಸ್ ರಾವ್ ತಿಳಿಸಿದ್ದಾರೆ.
ಕೊಲೆಯ ಬಳಿಕ ಮೃತ ದೇಹ ಗದ್ವಾಲದಿಂದ ಗ್ರಾಮಕ್ಕೆ ತಂದಾಗ ಅಪಾರ ಅಭಿಮಾನಿಗಳು ಗ್ರಾಮದಲ್ಲಿ ನೆರೆದಿದ್ದರು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಇದೇ ಸಂದರ್ಭದಲ್ಲಿ ಮೃತ ದೇಹ ಒಂದು ಕಡೆಯಾದರೆ ಇನ್ನೊಂದು ಕಡೆ ರೈಸ್ ಮಿಲ್ಲಿನ ಮೇಲೆ ಕಲ್ಲು ಎಸೆದು ಗದ್ದಲ ನಡೆದಾಗ
ಗ್ರಾಮದಲ್ಲಿ ಉದ್ವಿಗ್ನ ಪರಿಸ್ಥಿತಿ ಸಂಭವಿಸಿತ್ತು.
ಪೊಲೀಸರು ಮಧ್ಯೆಪ್ರವೇಶಿಸಿ, ಅಂತ್ಯ ಸಂಸ್ಕಾರ ಆಗುವವರೆಗೂ ರೈಸ್ ಮಿಲ್ಲಿನ ಸುತ್ತಾ ಸರ್ಪಗಾವಲಾಗಿದ್ದರು. ಮತ್ತೆ ದಾಳಿ ನಡೆಯಬಹುದು, ಗಲಾಟೆಗಳು ನಡೆಯಬಹುದು ಎಂದು ಗ್ರಾಮದಲ್ಲಿ ಪೊಲೀಸರು ಕಾವಲಾಗಿ ನಿಂತಿದ್ದಾರೆ.


