ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು ‘ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ’ ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು ಅನುಸರಿಸುತ್ತಿರುವ ‘ಸ್ವಯಂ ನಿಯಂತ್ರಣ’ ಮಾದರಿಯ ಪರಿಣಾಮಕಾರಿತ್ವದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದೆ.
“ಇಂಡಿಯಾಸ್ ಗಾಟ್ ಲೇಟೆಂಟ್” ಕಾರ್ಯಕ್ರಮದಲ್ಲಿನ ಅಶ್ಲೀಲ ವಿಷಯಕ್ಕೆ ಸಂಬಂಧಿಸಿದ ಎಫ್‌ಐಆರ್‌ಗಳನ್ನು ಪ್ರಶ್ನಿಸಿ ಪಾಡ್‌ಕ್ಯಾಸ್ಟರ್ ರಣವೀರ್ ಅಲಹಾಬಾದಿಯಾ ಮತ್ತು ಇತರರು ಸಲ್ಲಿಸಿದ್ದ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.
ಈ ಪ್ರಕರಣ ಇಂಡಿಯಾಸ್ ಗಾಟ್ ಲೇಟೆಂಟ್ ಕಾರ್ಯಕ್ರಮಕ್ಕೆ ಸಂಬಂಧಿಸಿದ್ದರೂ, ಪ್ರಕರಣದ ವ್ಯಾಪ್ತಿಯನ್ನು ವಿಸ್ತರಿಸುವ ಸುಪ್ರೀಂ ಕೋರ್ಟ್, ಇಡೀ ದೇಶದ ಆನ್‌ಲೈನ್ ಅಶ್ಲೀಲತೆಯನ್ನು ತಡೆಗಟ್ಟುವ ಸಂಬಂಧ ಮಾರ್ಗಸೂಚಿ ರೂಪಿಸುವ ಕುರಿತು ಚರ್ಚೆ ಆರಂಭಿಸಿದೆ.
ಗುರುವಾರ ವಿಚಾರಣೆಯ ವೇಳೆ ಭಾರತದ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಮತ್ತು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ಕೇಂದ್ರ ಸರ್ಕಾರ ಕೆಲವು ಹೊಸ ಮಾರ್ಗಸೂಚಿಗಳನ್ನು ಪ್ರಸ್ತಾಪಿಸಿದೆ ಮತ್ತು ಪಾಲುದಾರರೊಂದಿಗೆ ಸಮಾಲೋಚನೆ ನಡೆಸುತ್ತಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದ್ದಾರೆ.
ಇದು ಕೇವಲ ‘ಅಶ್ಲೀಲತೆ’ಗೆ ಸೀಮಿತವಾಗಿಲ್ಲ, ಬದಲಾಗಿ ಇಂಟರ್‌ನೆಟ್ ಬಳಕೆದಾರರು ರಚಿಸಿದ ವಿಷಯಗಳಲ್ಲಿನ ‘ವಿಕೃತತೆಗೂ ಸಂಬಂಧಿಸಿದೆ. ಜನರು ತಮ್ಮದೇ ಆದ ಯೂಟ್ಯೂಬ್ ಚಾನೆಲ್‌ಗಳು ಅಥವಾ ಇತರ ಪ್ಲಾಟ್‌ಫಾರ್ಮ್‌ಗಳಲ್ಲಿ ಅವುಗಳನ್ನು ಪ್ರಕಟಿಸುತ್ತಾರೆ ಎಂದು ಸಾಲಿಸಿಟರ್ ಜನರಲ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸಿಜೆಐ ಕಾಂತ್, ಅಂತಹ ವಿಷಯ ರಚನೆಕಾರರಿಗೆ ಯಾವುದೇ ನಿಯಂತ್ರಣವಿಲ್ಲ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈಗ ನಾನು ನನ್ನದೇ ಚಾನೆಲ್ ರಚಿಸಿ ಏನು ಬೇಕಾದರೂ ಅಪ್ಲೋಡ್ ಮಾಡಬಹುದೇ? ಅದಕ್ಕೆ ನಿಯಂತ್ರಣವಿಲ್ಲವೇ? ನಿಯಂತ್ರಿಸುವವರು ಬೇಕಲ್ಲವೇ ಎಂದಿದ್ದಾರೆ.
ಇದಕ್ಕೆ ಉತ್ತರಿಸಿದ ಸಾಲಿಸಿಟರ್ ಜನರಲ್, ಅಭಿವ್ಯಕ್ತಿ ಸ್ವಾತಂತ್ರ್ಯ ತುಂಬಾ ಮೌಲ್ಯಯುತವಾದ ಹಕ್ಕು, ಆದರೆ ಆ ಸ್ವಾತಂತ್ರ್ಯ ವಿಕೃತಿ ಮನೋಭಾವಕ್ಕೆ ದಾರಿ ಮಾಡಿಕೊಡಬಾರದು ಎಂದಿದ್ದಾರೆ.
ಈ ವೇಳೆ ಪ್ರತಿಕ್ರಿಯಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ಅಭಿವ್ಯಕ್ತಿ ಹಕ್ಕನ್ನು ಗೌರವಿಸಲೇ ಬೇಕು. ಆದರೆ ಒಂದು ವೇಳೆ ಯಾವುದಾದರೂ ಕಾರ್ಯಕ್ರಮದಲ್ಲಿ ವಯಸ್ಕರಿಗೆ ಮಾತ್ರ ಸೂಕ್ತವಾದ (adult) ವಿಷಯ ಇದ್ದರೆ, ಅದನ್ನು ಪ್ರಸಾರ ಮಾಡುವ ಮೊದಲು ಸ್ಪಷ್ಟವಾದ ಎಚ್ಚರಿಕೆ ಕೊಡಲೇ ಬೇಕು. ಪ್ರೇಕ್ಷಕರಿಗೆ ಮುಂಚಿತವಾಗಿ ತಿಳಿಸಬೇಕು ಎಂದು ಹೇಳಿದ್ದಾರೆ.
ಓಟಿಟಿ ಪ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಇತ್ಯಾದಿಗಳನ್ನೊಳಗೊಂಡಿರುವ ಇಂಡಿಯನ್ ಬ್ರಾಡ್‌ಕಾಸ್ಟ್ ಅಂಡ್ ಡಿಜಿಟಲ್ ಫೌಂಡೇಷನ್ ಪರವಾಗಿ ವಾದಿಸಿದ ಹಿರಿಯ ವಕೀಲ ಅಮಿತ್ ಸಿಬಲ್ ಅವರು, ಈಗಾಗಲೇ ಆನ್‌ಲೈನ್ ವಿಷಯಗಳ ನಿಯಂತ್ರಣಕ್ಕೆ 2021ರ ಐಟಿ ರೂಲ್ಸ್ (Information Technology (Intermediary Guidelines and Digital Media Ethics Code) Rules, 2021) ಇವೆ. ಈ ನಿಯಮಗಳನ್ನು ಪ್ರಸ್ತುತ ದೆಹಲಿ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ ಮತ್ತು ಅನೇಕ ಅರ್ಜಿಗಳು ಅಲ್ಲಿಗೆ ವರ್ಗಾಯಿಸಲಾಗಿದೆ ಎಂದು ತಿಳಿಸಿದ್ದಾರೆ.
ಈ ನಿಯಮಗಳ ಕೆಲವು ಸೆಕ್ಷನ್‌ಗಳ ಮೇಲೆ ತಡೆಯಾಜ್ಞೆ ಇದ್ದರೂ ಸಹ, ಓಟಿಟಿ ಪ್ಲಾಟ್‌ಫಾರ್ಮ್‌ಗಳು ಸ್ವಯಂಪ್ರೇರಿತವಾಗಿ (voluntarily) ಡಿಜಿಟಲ್ ಮೀಡಿಯಾ ಎಥಿಕ್ಸ್ ಕೋಡ್ ಅನ್ನು ಪಾಲಿಸುತ್ತಿವೆ. ಜನರ ದೂರುಗಳನ್ನು ಪರಿಹರಿಸಲು ಒಂದು ಸ್ವತಂತ್ರ ಸಂಸ್ಥೆ ಇದೆ. ಈ ಸಂಸ್ಥೆಯ ಅಧ್ಯಕ್ಷೆಯಾಗಿ ನಿವೃತ್ತ ನ್ಯಾಯಮೂರ್ತಿ ಗೀತಾ ಮಿತ್ತಲ್ ಅವರು ಇದ್ದಾರೆ. ಯಾರಿಗಾದರೂ ಯಾವುದಾದರೂ ಒಂದು ಶೋ/ಸಿನಿಮಾ ಅಡೆತಡೆಯಿಲ್ಲದೆ ಅಶ್ಲೀಲ ಎನಿಸಿದರೆ ಅಲ್ಲಿಗೆ ದೂರು ಸಲ್ಲಿಸಬಹುದು ಮತ್ತು ಅದನ್ನು ಪರಿಶೀಲಿಸಿ ತೀರ್ಪು ನೀಡಲಾಗುತ್ತದೆ ಎಂದಿದ್ದಾರೆ.
ಈ ಹಂತದಲ್ಲಿ, ಸಿಜೆಐ ಕಾಂತ್ ಸ್ವಯಂ-ನಿಯಂತ್ರಕ ಕಾರ್ಯವಿಧಾನದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು ಮತ್ತು ಶಾಸನಬದ್ಧ ನಿಯಂತ್ರಣದ ಅಗತ್ಯವನ್ನು ವ್ಯಕ್ತಪಡಿಸಿದ್ದಾರೆ.


