ಉತ್ತರಾಖಂಡದ ದೂರದ ಜೌನ್ಸರ್-ಬವಾರ್ ಪ್ರದೇಶದ ಬಿಜ್ನು ಬಿಜ್ನಾಡ್ ಗ್ರಾಮದ ದಲಿತ ಸಮುದಾಯವು ಸುಮಾರು 150 ವರ್ಷಗಳಲ್ಲಿ ಮೊದಲ ಬಾರಿಗೆ ತನ್ನದೇ ಆದ ‘ಸೈನಾ’ (ಗ್ರಾಮದ ಮುಖ್ಯಸ್ಥ) ಆಯ್ಕೆ ಮಾಡುವ ಮೂಲಕ ಐತಿಹಾಸಿಕ ಹೆಜ್ಜೆ ಇಟ್ಟಿದೆ. ಈ ಕ್ರಮವು ದಲಿತರನ್ನು ಗ್ರಾಮ ನಾಯಕತ್ವದಿಂದ ದೂರವಿಟ್ಟ ದೀರ್ಘಕಾಲದ ಸಾಮಾಜಿಕ ಕಟ್ಟುಪಾಡುಗಳನ್ನು ಮುರಿದಿದೆ.
ತಲೆಮಾರುಗಳಿಂದ, ಈ ಪ್ರದೇಶದ ಹಳ್ಳಿಗಳು ಪ್ರಬಲ ಮತ್ತು ಶ್ರೀಮಂತ ರಜಪೂತ ಕುಟುಂಬಗಳಿಂದ ಮಾತ್ರ ನಾಯಕರು ಆಯ್ಕೆಯಾಗಿದ್ದರು. ಗ್ರಾಮದ ಸಮಸ್ಯೆಗಳು ಮತ್ತು ವಿವಾದಗಳನ್ನು ಮಧ್ಯಸ್ಥಿಕೆ ವಹಿಸುವಲ್ಲಿ ‘ಸೈನಾ’ ಪ್ರಮುಖ ಪಾತ್ರ ವಹಿಸುತ್ತಿದ್ದರೂ, ದಲಿತರನ್ನು ಎಂದಿಗೂ ಈ ಸ್ಥಾನಕ್ಕೆ ಪರಿಗಣಿಸಲಾಗುತ್ತಿರಲಿಲ್ಲ. ಜಾತಿ ಶ್ರೇಣಿಯಲ್ಲಿ ಬೇರೂರಿರುವ ಈ ವ್ಯವಸ್ಥೆಯು ಬ್ರಿಟಿಷ್ ಯುಗದಿಂದ ಇಂದಿನವರೆಗೂ ಮುಂದುವರೆಯಿತು.
“ಈ ಹಿಂದೆ, ಇಡೀ ಗ್ರಾಮಕ್ಕೆ ಏಕೈಕ ಸೈನಾ ಇತ್ತು. ಈಗ, ನಮಗೆ ಎರಡು ಇರುತ್ತದೆ” ಎಂದು ಚುನಾವಣೆಯಲ್ಲಿ ಭಾಗವಹಿಸಿದ ನಿವಾಸಿಯೊಬ್ಬರು ತಿಳಿಸಿದ್ದಾರೆ ಎಂದು ‘ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್’ ವರದಿ ಮಾಡಿದೆ. ಹೊಸದಾಗಿ ಆಯ್ಕೆಯಾದ ದಲಿತ ಸೈನಾವನ್ನು ಮರದ ಆನೆಯ ಮೇಲೆ ಸಾಂಪ್ರದಾಯಿಕ ಮೆರವಣಿಗೆಯೊಂದಿಗೆ ಸಂಭ್ರಮಿಸಲಾಯಿತು.
ಈ ನಿರ್ಧಾರವು ಆಳವಾಗಿ ಬೇರೂರಿದ್ದ ಸಾಮಾಜಿಕ ವ್ಯವಸ್ಥೆಯನ್ನು ಪ್ರಶ್ನಿಸಿದ್ದರಿಂದ, ಪ್ರಬಲ ಗುಂಪುಗಳ ಪ್ರತಿರೋಧವಿಲ್ಲದೆ ಶಾಂತಿಯುತವಾಗಿ ಪರಿವರ್ತನೆ ಆಗುವುದನ್ನು ಖಚಿತಪಡಿಸಿಕೊಳ್ಳಲು 35 ದಲಿತ ಕುಟುಂಬಗಳಿಗೆ ಸ್ಥಳೀಯ ಪೊಲೀಸರು ಬೆಂಬಲ ನೀಡಿದರು.
ಹತ್ತಿರದ ಪಂಚಾಯತ್‌ನ ಮಾಜಿ ಪ್ರಧಾನ್ ಮತ್ತು ಸಾಮಾಜಿಕ ಕಾರ್ಯಕರ್ತ ಭರತ್ ಸಿಂಗ್ ರಾಣಾ, ಸಮುದಾಯದ ನಿರ್ಧಾರವು ಕನಿಷ್ಠ 150 ರಿಂದ 200 ವರ್ಷಗಳಿಂದ ಅಸ್ತಿತ್ವದಲ್ಲಿದ್ದ ವ್ಯವಸ್ಥೆಯನ್ನು ರದ್ದುಗೊಳಿಸುತ್ತದೆ ಎಂದು ಹೇಳಿದರು.
“ದಲಿತರನ್ನು ಯಾವಾಗ ಹೊರಗಿಡಲಾಯಿತು ಎಂದು ನಿಖರವಾಗಿ ಹೇಳುವುದು ಕಷ್ಟ. ಏಕೆಂದರೆ, ಅದು ಲಿಖಿತ ಕಾನೂನಿನಲ್ಲ, ಪದ್ಧತಿ ಮತ್ತು ಶ್ರೇಣಿಯನ್ನು ಆಧರಿಸಿದೆ. ನಾವು ಬ್ರಿಟಿಷ್ ಅವಧಿಯನ್ನು ಆರಂಭಿಕ ಹಂತವೆಂದು ಪರಿಗಣಿಸಿದರೆ, ಈ ಹೆಜ್ಜೆ ತಲೆಮಾರುಗಳಿಂದ ಜಾರಿಯಲ್ಲಿರುವ ರಚನೆಯನ್ನು ಪ್ರಶ್ನಿಸುತ್ತದೆ” ಎಂದರು.
ಆಧುನಿಕ ಭಾರತದ ಸಂದರ್ಭದಲ್ಲಿ ಈ ಕ್ರಮವು ಇನ್ನೂ ಹೆಚ್ಚಿನ ಅರ್ಥವನ್ನು ಹೊಂದಿದೆ ಎಂದು ರಾಣಾ ಹೇಳಿದರು. “ಮೀಸಲಾತಿ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡುವ ದೇಶದಲ್ಲಿ, ಈ ನಿರ್ಧಾರವು ಸ್ವಾತಂತ್ರ್ಯದ ನಂತರವೂ ಮುಂದುವರಿದ 75 ವರ್ಷಗಳಷ್ಟು ಹಳೆಯದಾದ ಅಸಮಾನತೆಯನ್ನು ಮುರಿಯುವ ಪ್ರಮುಖ ಪ್ರಯತ್ನವಾಗಿದೆ” ಎಂದು ಅವರು ಹೇಳಿದರು.


