ಸೋಮವಾರ (ಡಿಸೆಂಬರ್ 1) ಸಂಸತ್ತಿನ ಚಳಿಗಾಲದ ಅಧಿವೇಶನ ಆರಂಭಕ್ಕೂ ಮುನ್ನವೇ, ದೇಶದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಕುರಿತು ತುರ್ತು ಚರ್ಚೆ ನಡೆಸಬೇಕೆಂದು ಕೋರಿ ಕಾಂಗ್ರೆಸ್ ನಿಲುವಳಿ ಸೂಚನೆ ಮಂಡಿಸಿದೆ.
ಕಾಂಗ್ರೆಸ್ ಸಂಸದರಾದ ಕೆ.ಸಿ ವೇಣುಗೋಪಾಲ್, ಮಾಣಿಕಂ ಟ್ಯಾಗೋರ್, ಗೌರವ್ ಗೊಗೊಯ್, ವಿಜಯ್ ಕುಮಾರ್, ರೇಣುಕಾ ಚೌಧರಿ ನಿಲುವಳಿ ಸೂಚನೆ ಮಂಡಿಸಿದ್ದಾರೆ ಎಂದು ವರದಿಯಾಗಿದೆ.
ಎಸ್‌ಐಆರ್ ಪ್ರಕ್ರಿಯೆ ‘ಪೂರ್ವ ಯೋಜಿತ ಅಲ್ಲ ಮತ್ತು ಏಕಪಕ್ಷೀಯ’ ಎಂದು ಸಂಸದರು ಹೇಳಿದ್ದಾರೆ. ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಮೇಲೆ ತೀವ್ರ ಒತ್ತಡ ಹೇರಲಾಗಿದ್ದು, ಇದು ಅವರ ಸಾವಿಗೆ ಕಾರಣವಾಗುತ್ತಿದೆ ಎಂದು ಆರೋಪಿಸಿದ್ದಾರೆ.
ನಿಲುವಳಿ ಸೂಚನೆ ಮಂಡಿಸುವ ಮುನ್ನ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿರುವ ಸಂಸದ ಮಾಣಿಕಂ ಟ್ಯಾಗೋರ್, ಬಿಎಲ್‌ಒಗಳ ಸರಣಿ ಆತ್ಮಹತ್ಯೆಗಳನ್ನು ಎತ್ತಿ ತೋರಿಸಿದ್ದು, ಚುನಾವಣಾ ಆಯೋಗ ಎಸ್‌ಐಆರ್ ಹೆಸರಿನಲ್ಲಿ ಮತಗಳ್ಳತನ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಎಸ್‌ಐಆರ್ ಬಗ್ಗೆ ಚರ್ಚೆ ನಡೆಯಬೇಕು ಎಂಬುವುದು ನಮ್ಮ ಆಗ್ರಹವಾಗಿದೆ. ಏಕೆಂದರೆ, ಇದು ಪ್ರಜಾಪ್ರಭುತ್ವದ ಮೇಲಿನ ದಾಳಿಯಾಗಿದೆ. ಎಸ್‌ಐಆರ್ ನಡೆಯುತ್ತಿರುವ 12 ರಾಜ್ಯಗಳಲ್ಲಿ ಬಿಎಲ್‌ಒಗಳು ಸಾಯುತ್ತಿದ್ದಾರೆ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ ಎಂದು ಟ್ಯಾಗೋರ್ ತಿಳಿಸಿದ್ದಾರೆ.
ನಿಲುವಳಿ ಸೂಚನೆ ಮಂಡಿಸಿದವರಲ್ಲಿ ಒಬ್ಬರಾದ ಸಂಸದ ವಿಜಯ್ ಕುಮಾರ್ ವಸಂತ್ ಮಾತನಾಡಿ, ಎಸ್‌ಐಆರ್ ಪ್ರಕ್ರಿಯೆ ತುಂಬಾ ಕಳಪೆಯಾಗಿ ನಡೆಯುತ್ತಿದೆ. ಸಾಕಷ್ಟು ಸಮಾಲೋಚನೆ ನಡೆಸದೆ, ಬೆಂಬಲ ಪಡೆಯದೆ ಎಸ್ಐಆರ್ ಮಾಡಲಾಗುತ್ತಿದೆ ಎಂದಿದ್ದಾರೆ.
ಬಿಎಲ್‌ಒ ಸಾವುಗಳ ಕುರಿತು ತನಿಖೆ ಮಾಡಲು ಅಥವಾ ದತ್ತಾಂಶ ಬಿಡುಗಡೆ ಮಾಡಲು ಚುನಾವಣಾ ಆಯೋಗ ವಿಫಲವಾಗಿದೆ. ಇದು ‘ಸಾಂಸ್ಥಿಕ ಕ್ರೌರ್ಯ’. ಅಲ್ಲದೆ, ಪುನರಾವರ್ತಿತ ಪರಿಶೀಲನೆಯು ಸಾರ್ವಜನಿಕರ ಗೊಂದಲಕ್ಕೆ ಕಾರಣವಾಗುತ್ತಿದೆ. ಜನ ಮತ್ತು ಪ್ರಜಾಪ್ರಭುತ್ವ ವಿರುದ್ದ ಎಸ್‌ಐಆರ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಎಸ್‌ಐಆರ್ ರದ್ದುಗೊಳಿಸಬೇಕು. ಬಿಎಲ್‌ಒಗಳ ಸಾವುಗಳ ಕುರಿತು ತನಿಖೆ ನಡೆಸಬೇಕು. ಅವರ ಕುಟುಂಬಗಳಿಗೆ ಪರಿಹಾರ ನೀಡಬೇಕು. ಚುನಾವಣಾ ಕಾರ್ಯವಿಧಾನಗಳನ್ನು ಸುಧಾರಿಸಬೇಕು ಮತ್ತು ಚುನಾವಣಾ ಆಯೋಗ ತನ್ನ ಕ್ರಮಗಳನ್ನು ವಿವರಿಸಲು ಸಮನ್ಸ್ ಜಾರಿ ಮಾಡಬೇಕು ಎಂದು ಸಂಸದರು ಒತ್ತಾಯಿಸಿದ್ದಾರೆ.


