ದಕ್ಷಿಣ ಏಷ್ಯಾದ ನಾಲ್ಕು ದೇಶಗಳಾದ ಶ್ರೀಲಂಕಾ, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಥೈಲ್ಯಾಂಡ್‌ನಲ್ಲಿ ಉಂಟಾದ ಭಾರೀ ಪ್ರವಾಹ ಮತ್ತು ಭೂಕುಸಿತ ಘಟನೆಗಳಿಂದ ಸಾವನ್ನಪ್ಪಿದವರ ಸಂಖ್ಯೆ ಒಂದು ಸಾವಿರ ದಾಟಿದೆ ಎಂದು ಸೋಮವಾರ (ಡಿಸೆಂಬರ್ 1) theguardian.com ವರದಿ ಮಾಡಿದೆ.
ದಿತ್ವಾ ಚಂಡುಮಾರುತ ಸೇರಿದಂತೆ ಹವಾಮಾನದಲ್ಲಿ ಉಂಟಾದ ಪ್ರತ್ಯೇಕ ವೈಪರೀತ್ಯಗಳಿಂದ ಸಂಪೂರ್ಣ ಶ್ರೀಲಂಕಾ, ಇಂಡೋನೇಷ್ಯಾದ ಸುಮಾತ್ರಾ ದ್ವೀಪದ ಹೆಚ್ಚಿನ ಭಾಗಗಳು, ದಕ್ಷಿಣ ಥೈಲ್ಯಾಂಡ್ ಮತ್ತು ಉತ್ತರ ಮಲೇಷ್ಯಾದಲ್ಲಿ ಭಾರೀ ಮಳೆಯಾಗಿದೆ. ಪರಿಣಾಮ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ದೊಡ್ಡ ಪ್ರಮಾಣದ ಭೂಕುಸಿತ ಸಂಭವಿಸಿದೆ.
ಶ್ರೀಲಂಕಾ ಮತ್ತು ಇಂಡೋನೇಷ್ಯಾ ದೇಶಗಳು ಪ್ರಕೃತಿ ವಿಕೋಪದ ಸಂತ್ರಸ್ತರ ಸಹಾಯಕ್ಕೆ ಸೇನಾ ಸಿಬ್ಬಂದಿಯನ್ನು ನಿಯೋಜಿಸಿದೆ.
ಸೋಮವಾರ ಉತ್ತರ ಸುಮಾತ್ರಕ್ಕೆ ಇಂಡೋನೇಷ್ಯಾದ ಅಧ್ಯಕ್ಷ ಪ್ರಬೋವೊ ಸುಬಿಯಾಂಟೊ ಭೇಟಿ ನೀಡಿದ್ದು, “ಅಪಾಯದ ಪರಿಸ್ಥಿತಿ ಕೊನೆಗೊಂಡಿದೆ. ಈಗ ಸಂತ್ರಸ್ತರಿಗೆ ನೆರವು ನೀಡುವುದು ಸರ್ಕಾರದ ಮುಖ್ಯ ಆದ್ಯತೆಯಾಗಿದೆ. ಕೆಲ ದುರ್ಗಮ ಪ್ರದೇಶದ ಹಳ್ಳಿಗಳ ಕಡೆಗೆ ಹೆಚ್ಚಿನ ಗಮನಹರಿಸಬೇಕಿದೆ” ಎಂದು ಹೇಳಿದ್ದಾರೆ.
ಇಂಡೋನೇಷ್ಯಾದಲ್ಲಿ ಪ್ರವಾಹ ಮತ್ತು ಭೂಕುಸಿತಗಳಿಂದ ಕನಿಷ್ಠ 442 ಜನರು ಸಾವನ್ನಪ್ಪಿದ್ದು, ನೂರಾರು ಜನರು ಕಾಣೆಯಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಬೋವೊ ಸರ್ಕಾರದ ಮೇಲೆ ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸುವಂತೆ ಒತ್ತಡ ಹೆಚ್ಚುತ್ತಿದೆ.
2018ರ ಬೃಹತ್ ಭೂಕಂಪ ಮತ್ತು ನಂತರದ ಸುನಾಮಿಯಿಂದ ಸುಲವೇಸಿಯಲ್ಲಿ 2,000ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ ನಂತರ ಇಂಡೋನೇಷ್ಯಾದಲ್ಲಿ ಸಂಭವಿಸಿದ ನೈಸರ್ಗಿಕ ವಿಕೋಪದಲ್ಲಿ ಇದು ಅತ್ಯಂತ ಭೀಕರವಾಗಿದೆ.
ಪ್ರಬೋವೊ ಸರ್ಕಾರ ಇದುವರೆಗೆ ಅಂತಾರಾಷ್ಟ್ರೀಯ ನೆರವು ಕೋರಿಲ್ಲ.
ಪ್ರವಾಹ, ಭೂಕುಸಿತ ಸಂಭವಿಸಿದ ಕೆಲ ಪ್ರದೇಶಗಳಿಗೆ ರಸ್ತೆ ಮೂಲಕ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆ ಸರ್ಕಾರ ನೆರವು ಹೊತ್ತ ಮೂರು ಯುದ್ಧನೌಕೆಗಳು ಮತ್ತು ಎರಡು ಆಸ್ಪತ್ರೆ ಹಡಗುಗಳನ್ನು ಆ ಪ್ರದೇಶಗಳಿಗೆ ಕಳುಹಿಸಿದೆ ಎಂದು ವರದಿಯಾಗಿದೆ.
ಶ್ರೀಲಂಕಾದಲ್ಲಿ ಭಾರೀ ಹಾನಿ
ದಿತ್ವಾ ಚಂಡುಮಾರುತದ ಪರಿಣಾಮ ತೀವ್ರ ಮಳೆಯಾದ ಕಾರಣ ಶ್ರೀಲಂಕಾದಲ್ಲಿ ಭಾರೀ ಪ್ರವಾಹ ಮತ್ತು ಭೂಕುಸಿತ ಉಂಟಾಗಿದೆ. ನೂರಾರು ಜನರು ಪ್ರಾಣ ಕಳೆದುಕೊಂದ್ದಾರೆ ಮತ್ತು ಸಾವಿರಾರು ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.
ಶ್ರೀಲಂಕಾ ಸರ್ಕಾರ ಈಗಾಗಲೇ ಅಂತಾರಾಷ್ಟ್ರೀಯ ನೆರವು ಕೋರಿದೆ. ಪ್ರವಾಹ ಮತ್ತು ಭೂಕುಸಿತ ಉಂಟಾದ ಪ್ರದೇಶಗಳಲ್ಲಿ ಸಿಲುಕಿರುವ ಜನರನ್ನು ತಲುಪಲು ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ಬಳಸಿಕೊಂಡಿದೆ.
ಕನಿಷ್ಠ 340 ಜನರು ಸಾವನ್ನಪ್ಪಿದ್ದಾರೆ ಎಂದು ಶ್ರೀಲಂಕಾ ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಇನ್ನೂ ಅನೇಕರು ಕಾಣೆಯಾಗಿದ್ದಾರೆ. ಹಾಗಾಗಿ, ಸಾವಿನ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ. ರಾಜಧಾನಿ ಕೊಲಂಬೊದಲ್ಲಿ ಭಾನುವಾರ ರಾತ್ರಿಯಿಡೀ ಪ್ರವಾಹ ನೀರು ತುಂಬಿತ್ತು. ಸೋಮವಾರ ಬೆಳಿಗ್ಗೆ ಮಳೆ ನಿಂತಿರುವುದರಿಂದ ನೀರು ಕಡಿಮೆಯಾಗುವ ಭರವಸೆ ಇದೆ. ಚಂಡಮಾರುತದ ಆರ್ಭಟ ಸ್ವಲ್ಪ ತಣ್ಣಗಾದ ಹಿನ್ನೆಲೆ ಕೆಲ ಅಂಗಡಿಗಳು ಮತ್ತು ಕಚೇರಿಗಳು ಬಾಗಿಲು ತೆರೆಯಲು ಪ್ರಾರಂಭಿಸಿವೆ ಎಂದು ವರದಿಗಳು ಹೇಳಿವೆ.
ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡಗಳು ಉರುಳಿ ಬಿದ್ದಿರುವ ಮರಗಳು ಮತ್ತು ಕುಸಿದ ಮಣ್ಣು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಡುತ್ತಿವೆ. ಹೆಚ್ಚು ಹಾನಿಗೊಳಗಾದ ಕೇಂದ್ರ ಪ್ರದೇಶದಲ್ಲಿನ ಹಾನಿಯ ಪ್ರಮಾಣವು ಈಗ ಬಹಿರಂಗಗೊಳ್ಳುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ವಿಪತ್ತನ್ನು ಎದುರಿಸಲು ರಾಷ್ಟ್ರೀಯ ತುರ್ತು ಪರಿಸ್ಥಿತಿ ಘೋಷಿಸಿರುವ ಅಧ್ಯಕ್ಷ ಅನುರಾ ಕುಮಾರ ದಿಸ್ಸನಾಯಕೆ, ದೇಶವನ್ನು ಮತ್ತೆ ನಿರ್ಮಾಣ ಮಾಡುವುದಾಗಿ ಪ್ರತಿಜ್ಞೆ ಮಾಡಿದ್ದಾರೆ. “ನಾವು ನಮ್ಮ ಇತಿಹಾಸದಲ್ಲಿಯೇ ಅತಿದೊಡ್ಡ ಮತ್ತು ಅತ್ಯಂತ ಸವಾಲಿನ ನೈಸರ್ಗಿಕ ವಿಕೋಪವನ್ನು ಎದುರಿಸುತ್ತಿದ್ದೇವೆ” ಎಂದು ಅವರು ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹೇಳಿದ್ದಾರೆ. “ಖಂಡಿತ, ಈ ಹಿಂದಿಗಿಂತ ಚೆನ್ನಾಗಿ ರಾಷ್ಟ್ರವನ್ನು ನಿರ್ಮಿಸುತ್ತೇವೆ” ಎಂದಿದ್ದಾರೆ.
2004ರ ವಿನಾಶಕಾರಿ ಏಷ್ಯನ್ ಸುನಾಮಿಯ ನಂತರ ಶ್ರೀಲಂಕಾದಲ್ಲಿ ಸಂಭವಿಸಿದ ಅತ್ಯಂತ ಭೀಕರ ನಷ್ಟ ಮತ್ತು ಹಾನಿ ಇದಾಗಿದೆ. 2004ರ ಸುನಾಮಿಯಲ್ಲಿ ಸುಮಾರು 31,000 ಜನರು ಬಲಿಯಾಗಿ, ಒಂದು ಮಿಲಿಯನ್‌ಗಿಂತಲೂ ಹೆಚ್ಚು ಜನರು ನಿರಾಶ್ರಿತರಾಗಿದ್ದರು.
ಭಾನುವಾರ ಮಧ್ಯಾಹ್ನದ ಹೊತ್ತಿಗೆ ಶ್ರೀಲಂಕಾದಾದ್ಯಂತ ಮಳೆ ಕಡಿಮೆಯಾದರೂ, ರಾಜಧಾನಿಯ ತಗ್ಗು ಪ್ರದೇಶಗಳು ಜಲಾವೃತಗೊಂಡಿತ್ತು. ಅಧಿಕಾರಿಗಳು ಪ್ರಮುಖ ಪರಿಹಾರ ಕಾರ್ಯಾಚರಣೆಗೆ ಸಿದ್ಧತೆ ನಡೆಸುತ್ತಿದ್ದರು ಎಂದು theguardian.com ವರದಿ ಮಾಡಿದೆ.
ಅಪಾಯದಲ್ಲಿ ಸಿಲುಕಿರುವ ಜನರನ್ನು ಸಾಗಿಸಲು ಮತ್ತು ಆಹಾರ ತಲುಪಿಸಲು ಮಿಲಿಟರಿ ಹೆಲಿಕಾಪ್ಟರ್‌ಗಳನ್ನು ನಿಯೋಜಿಸಲಾಗಿದೆ. ಹೀಗೆ ನಿಯೋಜಿಸಿದ ಒಂದು ಹೆಲಿಕಾಫ್ಟರ್ ಭಾನುವಾರ ಸಂಜೆ ಕೊಲಂಬೊದ ಉತ್ತರದಲ್ಲಿ ಅಪಘಾತಕ್ಕೀಡಾಗಿದೆ ಎಂದು ವರದಿ ಹೇಳಿದೆ.
ಏಷ್ಯಾದ ಹೆಚ್ಚಿನ ಭಾಗವು ವಾರ್ಷಿಕ ಮಾನ್ಸೂನ್ ಋತುವಿನಲ್ಲಿದೆ. ಇದರಿಂದ ಆಗಾಗ್ಗೆ ಭಾರೀ ಮಳೆಯಾಗುತ್ತಿದೆ. ಪರಿಣಾಮ ಭೂಕುಸಿತ ಮತ್ತು ಹಠಾತ್ ಪ್ರವಾಹಗಳು ಸಂಭವಿಸುತ್ತಿದೆ.
ಇಂಡೋನೇಷ್ಯಾ, ಥೈಲ್ಯಾಂಡ್ ಮತ್ತು ಮಲೇಷ್ಯಾದಲ್ಲಿ ಉಂಟಾದ ಪ್ರವಾಹವು, ವಿಶೇಷವಾಗಿ ಸುಮಾತ್ರಾ ದ್ವೀಪದಲ್ಲಿ ಭಾರೀ ಮಳೆಗೆ ಕಾರಣವಾದ ಅಪರೂಪದ ಉಷ್ಣವಲಯದ ಚಂಡಮಾರುತ ದಿತ್ವಾದಿಂದ ಸಂಭವಿಸಿದೆ.


