ಕೇರಳದ ಪಾಲಕ್ಕಾಡ್ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ದ ಅತ್ಯಾಚಾರದ ಆರೋಪ ಹೊರಿಸಿದ ಮಹಿಳೆಯ ಗುರುತು ಬಹಿರಂಗಪಡಿಸಿ, ಅಪಮಾನ ಮಾಡಿದ ಆರೋಪದ ಮೇಲೆ ಪುರುಷ ಹಕ್ಕುಗಳ ಕಾರ್ಯಕರ್ತ ಮತ್ತು ಟಿವಿ ನಿರೂಪಕ ರಾಹುಲ್ ಈಶ್ವರ್ ಅವರನ್ನು ಭಾನುವಾರ (ನ.30) ತಿರುವನಂತಪುರದಲ್ಲಿ ಬಂಧಿಸಲಾಗಿದೆ. ಹಲವಾರು ಗಂಟೆಗಳ ವಿಚಾರಣೆಯ ನಂತರ ಭಾನುವಾರ ತಡರಾತ್ರಿ ಅವರ ಬಂಧನವನ್ನು ಖಚಿತಪಡಿಸಲಾಗಿದೆ.
ರಾಹುಲ್ ಈಶ್ವರ್ ಅವರನ್ನು ಭಾನುವಾರ ರಾತ್ರಿ ವೈದ್ಯಕೀಯ ತಪಾಸಣೆಗೆ ಕರೆದೊಯ್ಯಲಾಗಿದ್ದು, ಸೋಮವಾರ (ಡಿ.1) ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ವರದಿಗಳು ಹೇಳಿವೆ.
ರಾಹುಲ್ ಈಶ್ವರ್ ವಿರುದ್ಧ ಮಹಿಳೆಯ ಘನತೆಗೆ ಧಕ್ಕೆ ತಂದಿರುವ ಆರೋಪ ಮತ್ತು ಬಿಎನ್ಎಸ್ ಸೆಕ್ಷನ್ 75 (3) ರ ಲೈಂಗಿಕ ಕಿರುಕುಳದ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತಿರುವನಂತಪುರಂ ಸೈಬರ್ ಪೊಲೀಸರಿಗೆ ಮಹಿಳೆ ನೀಡಿದ್ದ ದೂರು ಆಧರಿಸಿ ಈಶ್ವರ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈಶ್ವರ್ ಮತ್ತು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಂದೀಪ್ ವಾರಿಯರ್ ಸಾಮಾಜಿಕ ಮತ್ತು ಇತರ ಮಾಧ್ಯಮಗಳಲ್ಲಿ ತನ್ನನ್ನು ಪದೇ ಪದೇ ಗುರಿಯಾಗಿಸಿಕೊಂಡು, ತನ್ನ ಸಮಗ್ರತೆಯನ್ನು ಪ್ರಶ್ನಿಸಿ, ಗುರುತಿನ ಬಗ್ಗೆ ಸುಳಿವು ನೀಡಿದ್ದಾರೆ ಎಂದು ಸಂತ್ರಸ್ತೆ ಆರೋಪಿಸಿದ್ದಾರೆ.
ಪೊಲೀಸರ ಪ್ರಕಾರ, ಪತ್ತನಂತಿಟ್ಟ ಮಹಿಳಾ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಂಜಿತಾ ಪುಲಿಕ್ಕಲ್, ವಕೀಲೆ ದೀಪಾ ಜೋಸೆಫ್, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಸಂದೀಪ್ ವಾರಿಯರ್ ಮತ್ತು ರಾಹುಲ್ ಈಶ್ವರ್ ಸೇರಿದಂತೆ ನಾಲ್ವರ ವಿರುದ್ಧ ಸಂತ್ರಸ್ತೆಯನ್ನು ಅವಮಾನಿಸಿ, ಅವರ ಗುರುತು ತಿಳಿಯಬಹುದಾದ ವಿವರಗಳನ್ನು ಆನ್‌ಲೈನ್‌ನಲ್ಲಿ ಹಂಚಿಕೊಂಡಿದ್ದಕ್ಕಾಗಿ ಪ್ರಕರಣ ದಾಖಲಿಸಲಾಗಿದೆ.
ಆರೋಪಿಗಳ ವಿರುದ್ಧ ಐಟಿ ಕಾಯ್ದೆಯ ಸೆಕ್ಷನ್ 43 ಮತ್ತು 66 ಹಾಗೂ ಬಿಎನ್‌ಎಸ್‌ನ ಸೆಕ್ಷನ್ 72 (ಸಂತ್ರಸ್ತರ ಗುರುತನ್ನು ಬಹಿರಂಗಪಡಿಸುವುದು) ಮತ್ತು 79 (ಮಹಿಳೆಯ ಗೌರವಕ್ಕೆ ಅವಮಾನ) ಅಡಿಯಲ್ಲಿ ಆರೋಪಗಳನ್ನು ಹೊರಿಸಲಾಗಿದೆ.
ಈ ನಡುವೆ ರಾಹುಲ್ ಮಾಂಕೂಟತ್ತಿಲ್ ವಿರುದ್ಧದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಭಾನುವಾರ ಪಾಲಕ್ಕಾಡ್‌ನಲ್ಲಿರುವ ಅವರ ಫ್ಲಾಟ್‌ನಲ್ಲಿ ಶೋಧ ನಡೆಸಿದ್ದಾರೆ. ರಾಹುಲ್ ಎಲ್ಲಿದ್ದಾರೆ ಎಂಬುವುದು ಇನ್ನೂ ಗೊತ್ತಾಗಿಲ್ಲ.
ಸಂತ್ರಸ್ತೆಯ ಬಗ್ಗೆ ಮಾಹಿತಿ ಪ್ರಸಾರ ಮಾಡುವ ಎಲ್ಲರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ಪೊಲೀಸರು ಕಠಿಣ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ಈ ಕುರಿತು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಅಂತಹ ವಿಷಯವನ್ನು ಹರಡಲು ಬಳಸುವ ಡಿಜಿಟಲ್ ಸಾಧನಗಳನ್ನು ವಶಪಡಿಸಿಕೊಳ್ಳಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.


