ಕರೆಯದ ಮದುವೆಗೆ ಊಟಕ್ಕೆ ಹೋದ ಕೊಳಗೇರಿಯ ಬಾಲಕನಿಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಹೆಡ್ ಕಾನ್‌ಸ್ಟೆಬಲ್ ಗುಂಡಿಕ್ಕಿ ಹತ್ಯೆಗೈದ ಆಘಾತಕಾರಿ ಘಟನೆ ದೆಹಲಿಯ ಶಾಹದರಾದಲ್ಲಿ ಶನಿವಾರ (ನವೆಂಬರ್ 29) ಸಂಜೆ ನಡೆದಿದೆ.
ಶಾಹದರಾದ ಮಾನಸರೋವರ್ ಪಾರ್ಕ್‌ನ ಡಿಡಿಎ ಮಾರುಕಟ್ಟೆಯಲ್ಲಿರುವ ಸಮುದಾಯ ಕೇಂದ್ರದ ಬಳಿ ಹೆಡ್ ಕಾನ್‌ಸ್ಟೆಬಲ್ ಮದನ್ ಗೋಪಾಲ್ ತಿವಾರಿ ಎಂಬಾತ ಬಾಲಕನ ಮೇಲೆ ಗುಂಡು ಹಾರಿಸಿದ್ದಾನೆ. ಈತ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಿಯೋಜಿತನಾಗಿದ್ದ. ಮದುವೆಗೆ ಆಗಮಿಸಿದ್ದ ಎಂದು ಅಧಿಕಾರಿಯೊಬ್ಬರು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
ಪ್ರಸ್ತುತ ಮದನ್ ತಿವಾರಿಯನ್ನು ಬಂಧಿಸಲಾಗಿದೆ ಎಂದು ವರದಿ ಹೇಳಿದೆ.
ಮದುವೆ ಕಾರ್ಯಕ್ರಮದಲ್ಲಿ ವರನನ್ನು ಕುದುರೆ ಮೇಲೆ ಕೂರಿಸಿ ಮೆರವಣಿಗೆ ಮಾಡಲಾಗುತ್ತಿತ್ತು. ಈ ವೇಳೆ ಬಾಲಕರ ಗುಂಪೊಂದು ಊಟ ಮಾಡುವ ಆಸೆಯಿಂದ ಮದುವೆಯತ್ತ ಹೋಗಿದೆ. ಇದನ್ನು ಗಮನಿಸಿದ ಹೆಡ್ ಕಾನ್‌ಸ್ಟೆಬಲ್ ಬಾಲಕರನ್ನು ಸ್ಥಳದಿಂದ ಹೋಗುವಂತೆ ಹೇಳಿದ್ದಾನೆ. ಈ ವೇಳೆ ಬಾಲಕರ ಗುಂಪು ಮತ್ತು ಮದನ್ ತಿವಾರಿ ನಡುವೆ ಮಾತಿನ ಚಕಮಕಿ ನಡೆದು, ಮದನ್ ತಿವಾರಿ ಬಾಲಕನಿಗೆ ಗುಂಡಿಕ್ಕಿದ್ದಾನೆ ಎಂದು ವರದಿಗಳು ವಿವರಿಸಿವೆ.
ಸಾವಿಗೀಡಾದ ಬಾಲಕ ನ್ಯೂ ಮಾಡ್ರನ್ ಪ್ರದೇಶದಲ್ಲಿ ವಾಸಿಸುತ್ತಿದ್ದ. ಗುಂಡಿನ ದಾಳಿಗೆ ಒಳಗಾದ ತಕ್ಷಣ ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು ಎಂದು ಶಾಹದಾರ ಉಪ ಪೊಲೀಸ್ ಆಯುಕ್ತ ಪ್ರಶಾಂತ್ ಗೌತಮ್ ತಿಳಿಸಿದ್ದಾರೆ.
ಪ್ರಸ್ತುತ ಆರೋಪಿ ಹೆಡ್‌ಕಾನ್‌ಸ್ಟೆಬಲ್‌ನನ್ನು ಬಂಧಿಸಲಾಗಿದೆ. ಗುಂಡು ಹಾರಿಸಲು ಬಳಸಲಾಗಿದೆ ಎಂದು ಶಂಕಿಸಲಾದ ಪಿಸ್ತೂಲನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಲು ಆರೋಪಿಯನ್ನು ವಿಚಾರಣೆಗೆ ಒಳಪಡಿಸಲಾಗಿದೆ. ಆತ ಗುಂಡು ಹಾರಿಸಲು ಬಳಸಿದ ಪಿಸ್ತೂಲು ವೈಯಕ್ತಿವೇ? ಸೇವಾ ಬಂದೂಕಾ? ಎಂಬ ಮಾಹಿತಿ ಪಡೆಯಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ನಂತರ ಪ್ರತಿಕೃಯಿಸಿರುವ ಮೃತ ಬಾಲಕನ ತಂದೆ, ನನ್ನ ಮಗ ಮದುವೆ ಕಾರ್ಯಕ್ರಮದತ್ತ ಹೋಗಿದ್ದ ಎಂದು ಗೊತ್ತಿರಲಿಲ್ಲ ಎಂದು ಹೇಳಿರುವುದಾಗಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ.
“ನನ್ನ ಮಗ ಮತ್ತು ಇತರ ಮೂವರು ಮದುವೆ ಮೆರವಣಿಗೆ ನಡೆಯುತ್ತಿದ್ದ ಜಾಗಕ್ಕೆ ಹೋಗಿದ್ದರು ಎಂಬುವುದು ನನಗೆ ನಂತರ ತಿಳಿಸಿದರು. ಅವರು ಮದುವೆ ಕಾರ್ಯಕ್ರಮ ನಡೆಯುತ್ತಿದ್ದ ಜಾಗಕ್ಕೆ ಹೋಗಿರಲಿಲ್ಲ. ಬಹುಶಃ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡಲೋ, ಇಲ್ಲ ಸ್ವಲ್ಪ ಆಹಾರ ಸಿಕ್ಕಿದರೆ ತಿನ್ನಲೋ ಹೋಗಿರಬಹುದು. ಅಷ್ಟಕ್ಕೆ ಕೊಲ್ಲುವ ಅಗತ್ಯ ಏನಿತ್ತು?” ಬಾಲಕನ ತಂದೆ ಪ್ರಶ್ನಿಸಿರುವುದಾಗಿ ವರದಿ ತಿಳಿಸಿದೆ.
“ಇಬ್ಬರು ವ್ಯಕ್ತಿಗಳು ಅವನಿಗೆ (ಮಗನಿಗೆ) ಹೊಡೆಯಲು ಪ್ರಾರಂಭಿಸಿದಾಗ ಮತ್ತು ಕಳ್ಳತನದ ಆರೋಪ ಹೊರಿಸಿದಾಗ ಆತ ಕುದುರೆಯ ಬಳಿ ಇದ್ದ ಎಂದು ಅವನ ಸ್ನೇಹಿತರು ಹೇಳಿದ್ದಾರೆ” ಎಂದು ಬಾಲಕನ ತಂದೆ ವಿವರಿಸಿದ್ದಾರೆ.


