ಸ್ಮಾರ್ಟ್‌ಫೋನ್ ತಯಾರಕರು ಎಲ್ಲಾ ಹೊಸ ಮೊಬೈಲ್ ಫೋನ್‌ಗಳಲ್ಲಿ ಸರ್ಕಾರಿ ಸ್ವಾಮ್ಯದ ‘ಸಂಚಾರ್ ಸಾಥಿ’ ಆ್ಯಪ್ ಪ್ರಿ ಇನ್‌ಸ್ಟಾಲ್ (Pre-Install) ಮಾಡಬೇಕು ಮತ್ತು ಬಳಕೆದಾರರು ಅದನ್ನು ಡಿಲಿಟ್ ಮಾಡದಂತೆ ನೋಡಿಕೊಳ್ಳಬೇಕು ಎಂಬ ಕೇಂದ್ರ ಸರ್ಕಾರದ ಆದೇಶವನ್ನು ವಿರೋಧಿಸಲು ಆ್ಯಪಲ್ ಕಂಪನಿ ಮುಂದಾಗಿದೆ ಎಂದು ಸುದ್ದಿ ಸಂಸ್ಥೆ ರಾಯಿಟರ್ಸ್ ಮಂಗಳವಾರ (ಡಿ.2) ವರದಿ ಮಾಡಿದೆ.
“ಆ್ಯಪಲ್ ಕಂಪನಿ ಕೇಂದ್ರದ ಆದೇಶವನ್ನು ಪಾಲಿಸದಿರಲು ಯೋಜಿಸಿದೆ. ಈ ಬಗ್ಗೆ ತನ್ನ ಕಳವಳಗಳನ್ನು ಕಂಪನಿ ಕೇಂದ್ರ ಸರ್ಕಾರಕ್ಕೆ ತಿಳಿಸಲಿದೆ” ಎಂದು ಮೂರು ಮೂಲಗಳು ಹೇಳಿರುವುದಾಗಿ ರಾಯಿಟರ್ಸ್ ಹೇಳಿದೆ.
90 ದಿನಗಳ ಒಳಗೆ ಎಲ್ಲಾ ಹೊಸ ಮೊಬೈಲ್ ಫೋನ್‌ಗಳಲ್ಲಿ ‘ಸಂಚಾರ್ ಸಾಥಿ’ ಆ್ಯಪ್ ಪ್ರಿ ಲೋಡ್ ಮಾಡಲು ಆ್ಯಪಲ್, ಸ್ಯಾಮ್‌ಸಂಗ್, ಶಿವೋಮಿ ಸೇರಿದಂತೆ ಮೊಬೈಲ್ ಕಂಪನಿಗಳಿಗೆ ಕೇಂದ್ರ ಸರ್ಕಾರ ಆದೇಶಿಸಿದೆ.
ಕದ್ದ ಫೋನ್‌ಗಳನ್ನು ಪತ್ತೆಹಚ್ಚಲು, ಅವುಗಳನ್ನು ನಿರ್ಬಂಧಿಸಲು ಮತ್ತು ದುರುಪಯೋಗವಾಗದಂತೆ ತಡೆಯಲು ಈ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿಲಾಗುತ್ತಿದೆ ಎಂದು ಸರ್ಕಾರ ಹೇಳಿಕೊಂಡಿದೆ.
ಸ್ಮಾರ್ಟ್ ಫೋನ್ ತಯಾರಕರು ‘ಸಂಚಾರ್ ಸಾಥಿ’ ಆ್ಯಪ್ ಅನ್ನು ಮೊಬೈಲ್ ಬಳಕೆದಾರರು ಡಿಲಿಟ್ ಮಾಡದಂತೆ ಮಾಡಬೇಕು. ಈಗಾಗಲೇ ಪೂರೈಕೆ ಸರಪಳಿಯಲ್ಲಿರುವ ಫೋನ್‌ಗಳಿಗೆ ತಯಾರಕರು ಸಾಫ್ಟ್‌ವೇರ್ ಅಪ್ಡೇಟ್ ಮೂಲಕ ಅಪ್ಲಿಕೇಶನ್ ಅನ್ನು ತಳ್ಳಬೇಕು ಎಂದು ಸರ್ಕಾರ ಆದೇಶದಲ್ಲಿ ಹೇಳಿರುವುದಾಗಿ ಸೋಮವಾರ (ಡಿ.1) ರಾಯಿಟರ್ಸ್ ವರದಿ ಮಾಡಿದೆ.
ಸರ್ಕಾರದ ಆದೇಶದ ವಿರುದ್ದ ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಹಲವರು ಕಳವಳ ವ್ಯಕ್ತಪಡಿಸಿದ್ದಾರೆ. ಇದು ಮೊಬೈಲ್ ಫೋನ್ ಬಳಕೆದಾರರ ಮೇಲೆ ಕಣ್ಗಾವಲು ಇಡಲು ಸರ್ಕಾರ ಮಾಡಿರುವ ತಂತ್ರವಾಗಿದೆ. ಸರ್ಕಾರದ ಆದೇಶದ ಸಂವಿಧಾನದ 21ನೇ ವಿಧಿಯಡಿ ಖಾತ್ರಿಪಡಿಸಿದ ಗೌಪ್ಯತೆಯ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿದ್ದಾರೆ.
ವಿರೋಧಗಳು ಹೆಚ್ಚಾಗುತ್ತಿದ್ದಂತೆ ಕೇಂದ್ರ ದೂರ ಸಂಪರ್ಕ ಖಾತೆ ಸಚಿವ ಜೋತಿರಾಧಿತ್ಯ ಎಂ. ಸಿಂಧಿಯಾ ಪ್ರತಿಕ್ರಿಯಿಸಿದ್ದಾರೆ. “ಸಂಚಾರ್ ಸಾಥಿ ಅಪ್ಲಿಕೇಶನ್ ‘ಸ್ವಯಂಪ್ರೇರಿತ ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆ’ಯನ್ನು ಹೊಂದಿದೆ. ಬಳಕೆದಾರರು ಅದನ್ನು ಸಕ್ರಿಯಗೊಳಿಸಬಹುದು ಮತ್ತು ಯಾವುದೇ ಸಮಯದಲ್ಲಿ ಅದನ್ನು ತಮ್ಮ ಫೋನ್‌ನಿಂದ ಸುಲಭವಾಗಿ ಅಳಿಸಬಹುದು ಎಂದು ಹೇಳಿದ್ದಾರೆ.
ಪ್ರಸ್ತುತ ಬಳಕೆದಾರರು ಅಪ್ಲಿಕೇಶನ್ ಅನ್ನು ಅಳಿಸಬಹುದು ಎಂದು ಮಾತ್ರ ಸಚಿವ ಸಿಂಧಿಯಾ ಹೇಳಿದ್ದಾರೆ. ಸ್ಮಾರ್ಟ್‌ಫೋನ್ ತಯಾರಕರು ಅದನ್ನು ಪ್ರಿ ಲೋಡ್ ಮಾಡಬೇಕು. ಅದು ನಿಷ್ಕ್ರಿಯಗೊಂಡಿಲ್ಲ ಅಥವಾ ನಿರ್ಬಂಧಿಸಿಲ್ಲ ಎಂದು ಖಚಿತಪಡಿಸಿಕೊಳ್ಳಬೇಕು ಎಂಬ ನವೆಂಬರ್ 28ರ ಗೌಪ್ಯ ನಿರ್ದೇಶನದ ಬಗ್ಗೆ ಸಿಂಧಿಯಾ ಯಾವುದೇ ಪ್ರತಿಕ್ರಿಯೆ ಅಥವಾ ಸ್ಪಷ್ಟನೆ ಕೊಟ್ಟಿಲ್ಲ ಎಂದು ರಾಯಿಟರ್ಸ್ ವರದಿ ಹೇಳಿದೆ.
“ಆ್ಯಪಲ್ ಕಂಪನಿ ಸರ್ಕಾರದ ನಿರ್ದೇಶನ ಪಾಲಿಸದಿರಲು ಯೋಜಿಸಿದೆ. ಏಕೆಂದರೆ, ಅದರಿಂದ ಕಂಪನಿಯ ಐಒಎಸ್ ಪರಿಸರ ವ್ಯವಸ್ಥೆಗೆ ಹಲವಾರು ಗೌಪ್ಯತೆ ಮತ್ತು ಭದ್ರತಾ ಸಮಸ್ಯೆಗಳು ಉಂಟಾಗಲಿದೆ. ಜಗತ್ತಿನಲ್ಲಿ ಎಲ್ಲಿಯೂ ಇಂತಹ ಆದೇಶಗಳನ್ನು ಪಾಲಿಸುತ್ತಿಲ್ಲ ಎಂದು ಸರ್ಕಾರಕ್ಕೆ ಕಂಪನಿ ತಿಳಿಸಲಿದೆ” ಎಂದು ಆ್ಯಪಲ್‌ನ ಕಳವಳಗಳನ್ನು ತಿಳಿದಿರುವ ಎರಡು ಉದ್ಯಮ ಮೂಲಗಳು ತಿಳಿಸಿವೆ ಎಂದು ರಾಯಿಟರ್ಸ್ ವರದಿ ವಿವರಿಸಿದೆ.
“ಇದು (ಸರ್ಕಾರದ ಆದೇಶ) ಕೇವಲ ದೊಣ್ಣೆ ಹೊಡೆತವಲ್ಲ, ಡಬಲ್ ಬ್ಯಾರೆಲ್ ಗನ್‌ನಂತಿದೆ” ಎಂದು ಆ ಮೂಲ ಹೇಳಿರುವುದಾಗಿ ವರದಿ ತಿಳಿಸಿದೆ.
ಆ್ಯಪಲ್ ಕಂಪನಿಯ ನಿರ್ಧಾರದ ಕುರಿತು ಕಂಪನಿಯಾಗಲಿ, ದೂರಸಂಪರ್ಕ ಸಚಿವಾಲಯವಾಗಲಿ ಇದುವರೆಗೆ ಅಧಿಕೃತ ಪ್ರತಿಕ್ರಿಯೆಗೆ ಸಿಕ್ಕಿಲ್ಲ ಎಂದು ವರದಿ ಹೇಳಿದೆ.
ಆ್ಯಪಲ್ ಕಂಪೆನಿ ತನ್ನ ಆ್ಯಪ್ ಸ್ಟೋರ್ ಮತ್ತು ಐಒಎಸ್ ಸಾಫ್ಟ್‌ವೇರ್‌ನ್ನು ತುಂಬಾ ಕಟ್ಟುನಿಟ್ಟಾಗಿ ನಿಯಂತ್ರಿಸುತ್ತದೆ. ಇದು ಆ್ಯಪಲ್‌ಗೆ ವರ್ಷಕ್ಕೆ ಸುಮಾರು 100 ಬಿಲಿಯನ್ ಡಾಲರ್ (ಸುಮಾರು 8 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು) ಆದಾಯ ತಂದುಕೊಡುವ ಅತಿ ಮುಖ್ಯವಾದ ಸೇವೆಗಳ ವ್ಯವಹಾರವಾಗಿದೆ.
ಆದರೆ, ಗೂಗಲ್‌ನ ಆಂಡ್ರಾಯ್ಡ್ ತಂತ್ರಾಂಶವು ಓಪನ್-ಸೋರ್ಸ್ (ಯಾರು ಬೇಕಾದರೂ ಉಚಿತವಾಗಿ ಬದಲಾಯಿಸಬಹುದಾದ) ಆಗಿರುವುದರಿಂದ, ಸ್ಯಾಮ್‌ಸಂಗ್, ಶಿವೋಮಿ ಇತ್ಯಾದಿ ಮೊಬೈಲ್ ತಯಾರಕರು ತಮ್ಮ ಇಚ್ಛೆಯಂತೆ ಆಂಡ್ರಾಯ್ಡ್ ಸಾಫ್ಟ್‌ವೇರ್‌ನ್ನು ಬದಲಾಯಿಸಿ, ತಮ್ಮದೇ ಆವೃತ್ತಿಯನ್ನು ಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಅವರಿಗೆ ಹೆಚ್ಚು ಸ್ವಾತಂತ್ರ್ಯ ಇದೆ.
ಎರಡನೇ ಮೂಲವು ಆ್ಯಪಲ್ ನ್ಯಾಯಾಲಯಕ್ಕೆ ಹೋಗಲು ಅಥವಾ ಸಾರ್ವಜನಿಕ ನಿಲುವು ತೆಗೆದುಕೊಳ್ಳಲು ಯೋಜಿಸಿಲ್ಲ ಎಂದು ಹೇಳಿದೆ. ಆದರೆ ಭದ್ರತಾ ದೋಷಗಳಿಂದಾಗಿ ಆದೇಶವನ್ನು ಪಾಲಿಸಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ತಿಳಿಸುತ್ತದೆ ಎಂದಿದೆ ಎಂದು ರಾಯಿಟರ್ಸ್ ಹೇಳಿದೆ.
ಪ್ರಸ್ತುತ ಆ್ಯಪಲ್ ಕಂಪೆನಿ ಭಾರತದಲ್ಲಿ ಒಂದು ದೊಡ್ಡ ಕಾನೂನು ಹೋರಾಟ ನಡೆಸುತ್ತಿದೆ. ಭಾರತದ ಸ್ಪರ್ಧಾ ನಿಯಂತ್ರಣ ಸಂಸ್ಥೆ (CCI – Competition Commission of India) ಆ್ಯಪಲ್‌ನ ವಿರುದ್ಧ ದೇಶದ ಏಕಸ್ವಾಮ್ಯ ವಿರೋಧಿ ಕಾನೂನಿನಡಿ ದಂಡ ವಿಧಿಸುವ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ಹೋರಾಡುತ್ತಿದೆ.
ಆ್ಯಪಲ್ ಕಂಪೆನಿ ಹೇಳಿಕೊಂಡಿರುವಂತೆ, ಈ ಪ್ರಕರಣದಲ್ಲಿ ಅದು ಸೋತರೆ ಗರಿಷ್ಠ 38 ಬಿಲಿಯನ್ ಡಾಲರ್ (ಅಂದರೆ ಸುಮಾರು 3.2 ಲಕ್ಷ ಕೋಟಿ ರೂಪಾಯಿಗಿಂತಲೂ ಹೆಚ್ಚು) ದಂಡ ಪಾವತಿಸಬೇಕಾಗಬಹುದು ಎಂಬ ಅಪಾಯ ಇದೆ.
ಸ್ಯಾಮ್‌ಸಂಗ್ ಸೇರಿದಂತೆ ಇತರ ಬ್ರ್ಯಾಂಡ್‌ಗಳು ಆದೇಶವನ್ನು ಪರಿಶೀಲಿಸುತ್ತಿವೆ ಎಂದು ಈ ವಿಷಯದ ಬಗ್ಗೆ ತಿಳಿದಿರುವ ನಾಲ್ಕನೇ ಉದ್ಯಮ ಮೂಲ ತಿಳಿಸಿವೆ. ನಮ್ಮ ಪ್ರಶ್ನೆಗಳಿಗೆ ಸ್ಯಾಮ್‌ಸಂಗ್ ಪ್ರತಿಕ್ರಿಯಿಸಿಲ್ಲ. ಸರ್ಕಾರವು ಉದ್ಯಮದ ಸಮಾಲೋಚನೆಯಿಲ್ಲದೆ ಆದೇಶದ ನೀಡಿದೆ ಎಂದು ಮೂಲಗಳು ಹೇಳಿವೆ ಎಂದು ರಾಯಿಟರ್ಸ್ ವರದಿ ವಿವರಿಸಿದೆ.


