ಸರ್ಕಾರಿ ಕಚೇರಿಗಳು, ಗಾರ್ಮೆಂಟ್ಸ್, ಬಹುರಾಷ್ಟ್ರೀಯ ಕಂಪನಿಗಳು, ಐಟಿ ಮತ್ತು ಇತರ ಖಾಸಗಿ ಕೈಗಾರಿಕೆಗಳು ಸೇರಿ ಎಲ್ಲಾ ವಲಯಗಳಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಪ್ರತಿ ತಿಂಗಳು ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ ನೀಡುವ ರಾಜ್ಯ ಸರ್ಕಾರದ ಆದೇಶದ ವಿರುದ್ದ ಬೆಂಗಳೂರು ಹೋಟೆಲ್‌ಗಳ ಸಂಘ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
ಕೇರಳ, ಒಡಿಶಾ, ಬಿಹಾರ ಮತ್ತು ಸಿಕ್ಕಿಂ ರಾಜ್ಯಗಳ ಇರುವಂತೆ ಮಹಿಳಾ ಉದ್ಯೋಗಿಗಳಿಗೆ ವೇತನ ಸಹಿತ ಮುಟ್ಟಿನ ರಜೆ ನೀಡುವ ಆದೇಶಕ್ಕೆ 2025ರ ಅಕ್ಟೋಬರ್ 9ರಂದು ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದೆ.
“ನಾಡಿನ ಲಕ್ಷಾಂತರ ಹೆಣ್ಣುಮಕ್ಕಳು, ಮಹಿಳೆಯರಿಗೆ ಋತುಚಕ್ರದ ಸಂದರ್ಭದಲ್ಲಿ ಕೆಲಸದ ಸ್ಥಳದಲ್ಲಿ ಎದುರಾಗುವ ಸವಾಲುಗಳು, ಅವರು ಅನುಭವಿಸುವ ಮಾನಸಿಕ ಹಾಗೂ ದೈಹಿಕ ನೋವು, ಸಂಕಟವನ್ನು ಅರಿತು ಈ ವೇಳೆ ಅವರಿಗೆ ಮಾಸಿಕ 1 ದಿನ ವೇತನ ಸಹಿತ ರಜೆ ನೀಡುವ ತೀರ್ಮಾನವನ್ನು ಸರ್ಕಾರವು ಕೈಗೊಂಡಿದೆ” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ನವೆಂಬರ್ 12ರಂದು ರಾಜ್ಯ ಸರ್ಕಾರವು, 1948ರ ಕಾರ್ಖಾನೆ ಕಾಯ್ದೆ, 1961ರ ಕರ್ನಾಟಕ ಅಂಗಡಿಗಳು ಮತ್ತು ವಾಣಿಜ್ಯ ಸ್ಥಾಪನೆ ಕಾಯ್ದೆ, 1951ರ ಪ್ಲಾಂಟೇಶನ್ ಕಾರ್ಮಿಕ ಕಾಯ್ದೆ, 1966ರ ಬೀಡಿ ಮತ್ತು ಸಿಗಾರ್ ಕಾರ್ಮಿಕರ ಕಾಯ್ದೆ ಮತ್ತು 1961ರ ಮೋಟಾರ್ ಸಾರಿಗೆ ಕಾರ್ಮಿಕರ ಕಾಯ್ದೆಯಡಿಯಲ್ಲಿ ನಡೆಯುವ ಎಲ್ಲಾ ಸಂಸ್ಥೆಗಳಿಗೆ ಮೇಲೆ ತಿಳಿಸಿದ ನೀತಿಯನ್ನು ಅನುಸರಿಸಲು ನಿರ್ದೇಶನ ನೀಡುವ ಅಧಿಸೂಚನೆಯನ್ನು ಹೊರಡಿಸಿದೆ ಎಂದು ಹೋಟೆಲ್‌ಗಳ ಸಂಘವು ಹೇಳಿಕೆಯಲ್ಲಿ ತಿಳಿಸಿದೆ.
ಸರ್ಕಾರವು ಪಾಲುದಾರರಿಂದ ಅಭಿಪ್ರಾಯಗಳನ್ನು ಕೇಳುವ ಯಾವುದೇ ಸೂಚನೆಯನ್ನು ನೀಡಿಲ್ಲವಾದ್ದರಿಂದ, ಅಧಿಸೂಚನೆಯು ನೈಸರ್ಗಿಕ ನ್ಯಾಯಕ್ಕೆ ವಿರುದ್ಧವಾಗಿದೆ ಎಂದು ಹೋಟೆಲ್ ಸಂಘವು ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ಹೇಳಿದೆ. ಈ ಕಾನೂನುಗಳು (ಮೇಲೆ ಉಲ್ಲೇಖಿಸಿದ ವಿವಿಧ ಕಾಯ್ದೆಗಳು) ಸರ್ಕಾರ ಈ ರೀತಿ ರಜೆಯನ್ನು (ಮುಟ್ಟಿನ ರಜೆ) ಕಡ್ಡಾಯಗೊಳಿಸುವ ಆದೇಶವನ್ನು ಹೊರಡಿಸಲು ಅನುವು ಮಾಡಿಕೊಡುವ ನಿಬಂಧನೆಗಳನ್ನು ಹೊಂದಿಲ್ಲ. ಆದ್ದರಿಂದ ಸರ್ಕಾರ ಅಂತಹ ಕಾರ್ಯಕಾರಿ ಆದೇಶವನ್ನು ಹೊರಡಿಸಲು ಸಾಧ್ಯವಿಲ್ಲ ಎಂದು ವಾದಿಸಿದೆ.
ಈ ರೀತಿಯ ರಜೆ ನೀಡುವುದು ಉದ್ಯೋಗದಾತರ ಸ್ವತಂತ್ರ ಅಧಿಕಾರಕ್ಕೆ ಸಂಬಂಧಿಸಿದೆ. ಇದನ್ನು ಸಂಸ್ಥೆಗಳ ಮಾನವ ಸಂಪನ್ಮೂಲ ವಿಭಾಗ (ಹೆಚ್‌ಆರ್) ನಿರ್ಧರಿಸುತ್ತದೆ. ಹಾಗಾಗಿ, ಸರ್ಕಾರ ಇಂತಹ ಆಡಳಿತಾತ್ಮಕ ವಿಷಯಗಳಲ್ಲಿ ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ. ಅಲ್ಲದೆ, ಮಹಿಳೆಯರಿಗೆ ಅತ್ಯಧಿಕ ಉದ್ಯೋಗ ನೀಡುವ ಸರ್ಕಾರವೇ ತನ್ನ ಉದ್ಯೋಗಿಗಳಿಗೆ ಮಾಸಿಕ ಮುಟ್ಟಿನ ರಜೆಗಳನ್ನು ನೀಡಿಲ್ಲ. ಹೀಗಿರುವಾಗ, ಸರ್ಕಾರದ ಅಧಿಸೂಚನೆ ತಾರತಮ್ಯದಿಂದ ಕೂಡಿದೆ ಮತ್ತು ಮನಬಂದಂತೆ ಹೊರಡಿಸಿದಂತೆ ಕಾಣುತ್ತಿದೆ” ಎಂದು ಹೋಟೆಲ್ ಸಂಘ ಹೇಳಿದೆ.
ಈ ಅರ್ಜಿಯ ವಿಚಾರಣೆ ದಿನಾಂಕವನ್ನು ಹೈಕೋರ್ಟ್ ಇನ್ನೂ ನಿಗದಿಪಡಿಸಿಲ್ಲ.


