ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಿರುವ ಗರ್ಭಿಣಿ ಮಹಿಳೆ ಸುನಾಲಿ ಖಾತೂನ್ ಮತ್ತು ಅವರ 8 ವರ್ಷದ ಮಗ ಸಬೀರ್ ಅವರನ್ನು ಮಾನವೀಯ ನೆಲೆಯಲ್ಲಿ ಭಾರತಕ್ಕೆ ಮರಳಿ ಕರೆತರುವುದಾಗಿ ಕೇಂದ್ರ ಸರ್ಕಾರ ಬುಧವಾರ (ಡಿ.3) ಸುಪ್ರೀಂ ಕೋರ್ಟ್ ಮುಂದೆ ವಾಗ್ದಾನ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರಿದ್ದ ಪೀಠದ ಮುಂದೆ ಭಾರತದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಈ ಹೇಳಿಕೆ ನೀಡಿದ್ದಾರೆ.
"ಮಾನವೀಯ ನೆಲೆಯಲ್ಲಿ ಸುನಾಲಿ ಖಾತೂನ್ ಮತ್ತು ಅವರ ಮಗ ಸಬೀರ್ ಅವರನ್ನು ಭಾರತಕ್ಕೆ ವಾಪಸ್ ಕರೆ ತರಲಾಗುವುದು. ಆದರೆ, ಇದು ಕೇವಲ ಮಾನವೀಯ ಆಧಾರದ ಮೇಲೆ ಮಾತ್ರ. ಇದರಿಂದ ನಮ್ಮ ಮೂಲ ವಾದ (merits of the case)ಅಥವಾ ಹಕ್ಕುಗಳ ಮೇಲೆ ಯಾವುದೇ ಪ್ರಭಾವ ಬೀರುವುದಿಲ್ಲ. ಪ್ರಕರಣದಲ್ಲಿ ನಮ್ಮ ಅಧಿಕೃತ ನಿಲುವು ಬದಲಾಗುವುದಿಲ್ಲ, ಅವರನ್ನು ಭಾರತಕ್ಕೆ ಕರೆತಂದ ನಂತರ ನಾವು ಅವರ ಮೇಲೆ ನಿಗಾ (surveillance)ಇರಿಸುವ ಹಕ್ಕನ್ನೂ ಬಿಟ್ಟುಕೊಡುತ್ತಿಲ್ಲ" ಎಂದು ಸಾಲಿಸಿಟರ್ ಜನರಲ್ ನ್ಯಾಯಾಲಯದಲ್ಲಿ ಹೇಳಿದ್ದಾರೆ.
ಸುನಾಲಿ ಖಾತೂನ್ ಮತ್ತು ಅವರ ಮಗನನ್ನು ಮಾನವೀಯ ಆಧಾರದ ಮೇಲೆ ಭಾರತಕ್ಕೆ ಮರಳಿ ಕರೆತರಬಹುದೇ? ಎಂದು ಸೋಮವಾರ ನ್ಯಾಯಾಲಯವು ಸರ್ಕಾರವನ್ನು ಕೇಳಿತ್ತು. ಇದಕ್ಕೆ ಪ್ರತಿಕ್ರಿಯಿಸಿದ್ದ ಎಸ್‌ಜಿ ತುಷಾರ್ ಮೆಹ್ತಾ, ಸರ್ಕಾರದಿಂದ ಸೂಚನೆಗಳನ್ನು ಪಡೆಯುವುದಾಗಿ ಹೇಳಿದ್ದರು. ಅದರಂತೆ ಕೇಂದ್ರ ಸರ್ಕಾರದಿಂದ ಸೂಚನೆಗಳನ್ನು ಪಡೆದು ಇಬ್ಬರನ್ನು ವಾಪಸ್ ಕರೆತರುಲು ಒಪ್ಪಿಕೊಂಡಿದ್ದಾರೆ.
"ಮಾನವೀಯ ನೆಲೆಯಲ್ಲಿ ಸುನಾಲಿ ಖಾತೂನ್ ಮತ್ತು ಆಕೆಯ 8 ವರ್ಷದ ಮಗ ಸಬೀರ್ ಅವರನ್ನು ಭಾರತಕ್ಕೆ ವಾಪಸ್ ಕರೆತರುವುದಾಗಿ ಸಾಲಿಸಿಟರ್ ಜನರಲ್ ಹೇಳಿದ್ದಾರೆ. ಇಬ್ಬರನ್ನೂ ದೆಹಲಿಯಲ್ಲಿ ವಶಕ್ಕೆ ಪಡೆದ ಕಾರಣ ಅವರನ್ನು ದೆಹಲಿಗೇ ವಾಪಸ್ ಕರೆತರುವುದಾಗಿ ತಿಳಿಸಿದ್ದಾರೆ. ಆದರೆ, ಅರ್ಜಿದಾರರ ಪರ ವಕೀಲರು ಮಹಿಳೆ ಮತ್ತು ಮಗನನ್ನು ಆಕೆಯ ತಂದೆ ವಾಸಿಸುವ ಪಶ್ವಿಮ ಬಂಗಾಳದ ಬಿರ್ಭೂಮ್ ಜಿಲ್ಲೆಯ ಪಟ್ಟಣಕ್ಕೆ ಸ್ಥಳಾಂತರಿಸುವುದು ಸೂಕ್ತ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ" ಎಂದು ಸುಪ್ರೀಂ ಕೋರ್ಟ್ ವಿವರಿಸಿದೆ.
ಮಹಿಳೆ ಗರ್ಭಿಣಿಯಾಗಿರುವ ಹಿನ್ನೆಲೆ ಪಶ್ಚಿಮ ಬಂಗಾಳ ಸರ್ಕಾರ ಆಕೆಗೆ ವೈದ್ಯಕೀಯ ಸೌಲಭ್ಯಗಳನ್ನು ಉಚಿತವಾಗಿ ಒದಗಿಸಬೇಕು. ಅಲ್ಲದೆ, ಆಕೆಯ ಮಗನನ್ನು ಸಹ ನೋಡಿಕೊಳ್ಳಬೇಕು ಎಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಸುನಾಲಿ ಖಾತೂನ್, ಆಕೆಯ ಮಗ ಸಬೀರ್ ಸೇರಿದಂತೆ ಬಾಂಗ್ಲಾದೇಶಕ್ಕೆ ಗಡಿಪಾರು ಮಾಡಲಾಗಿರುವ 6 ಮಂದಿಯನ್ನು ವಾಪಸ್ ಕರೆತರುವಂತೆ ಸೆಪ್ಟೆಂಬರ್ 27ರಂದು ಕಲ್ಕತ್ತಾ ಹೈಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿತ್ತು. ಇದರ ವಿರುದ್ದ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಆ ಆರ್ಜಿಯ ವಿಚಾರಣೆ ನಡೆಯುತ್ತಿದೆ.
ಸುನಾಲಿ ಅವರ ತಂದೆ ಭೋದು ಶೇಖ್ ಕಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದರು. ನನ್ನ ಮಗಳು, ಅಳಿಯ ಮತ್ತು ಮೊಮ್ಮಗನನ್ನು ಸುಳ್ಳು ಆರೋಪದ ಮೇಲೆ ಬಂಧಿಸಿ ಗಡಿಪಾರು ಮಾಡಿದ್ದಾರೆ. ದಯಮಾಡಿ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಎಂದು ಕೇಳಿಕೊಂಡಿದ್ದರು. ನಾನು ಪಶ್ಚಿಮ ಬಂಗಾಳದ ಖಾಯಂ ನಿವಾಸಿ. ನನ್ನ ಮಗಳು, ಅಳಿಯನೂ ಭಾರತದಲ್ಲಿ ಹುಟ್ಟಿ ಬೆಳೆದವರು. ನಮ್ಮ ಕುಟುಂಬ ತಲೆತಲಾಂತರದಿಂದ ಪಶ್ಚಿಮ ಬಂಗಾಳದಲ್ಲೇ ಇದೆ. ಕೆಲಸಕ್ಕಾಗಿ ಮಾತ್ರ ಮಗಳು, ಅಳಿಯ ದೆಹಲಿಗೆ ಹೋಗಿದ್ದರು ಎಂದು ಭೋದು ಶೇಖ್ ಹೇಳಿದ್ದರು.
ಇಂದು, ಪಶ್ಚಿಮ ಬಂಗಾಳ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಗಡಿಪಾರು ಮಾಡಲಾದ ಇತರ ನಾಲ್ವರು ವ್ಯಕ್ತಿಗಳನ್ನು ವಾಪಸ್ ಕರೆ ತರುವ ಬಗ್ಗೆ ಕೇಂದ್ರದಿಂದ ಸೂಚನೆಗಳನ್ನು ಪಡೆಯಬೇಕು ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಎಸ್‌ಜಿ ತುಷಾರ್ ಮೆಹ್ತಾ, ಗಡಿಪಾರಾದವರು ಬಾಂಗ್ಲಾದೇಶಿಗರು, ಅವರನ್ನು ವಾಪಸ್ ಕರೆತರುವುದಕ್ಕೆ ಕೇಂದ್ರ ಸರ್ಕಾರದ ತೀವ್ರ ಆಕ್ಷೇಪವಿದೆ. ಈ ಪ್ರಕರಣದಲ್ಲಿ ರಾಜ್ಯ ಸರ್ಕಾರವೇ ಕೆವಿಯಟ್ (ಮುಂಚಿತ ಎಚ್ಚರಿಕೆ ಅರ್ಜಿ) ಹಾಕಿ, ಆ ವ್ಯಕ್ತಿಗಳಿಗೆ ರಕ್ಷಣೆಯನ್ನು ಕೋರುತ್ತಿರುವುದು ಆಶ್ಚರ್ಯಕರವಾಗಿದೆ ಎಂದಿದ್ದಾರೆ.
ಅರ್ಜಿದಾರ ಬೋಧು ಶೇಕ್ ಪರ ಹಿರಿಯ ವಕೀಲ ಸಂಜಯ್ ಹೆಗ್ಡೆ ವಾದ ಮಂಡಿಸಿದ್ದಾರೆ. ವಿಚಾರಣೆ ವೇಳೆ ನ್ಯಾಯಮೂರ್ತಿ ಬಾಗ್ಚಿ ಅವರು, ಸುನಾಲಿ ಖಾತೂನ್ ಭೋದು ಶೇಖ್ (ಭಾರತೀಯ ಪ್ರಜೆ) ಅವರೊಂದಿಗೆ ಜೈವಿಕ ಸಂಬಂಧವನ್ನು ಸಾಬೀತು ಮಾಡಬಹುದು ಎಂದಾದರೆ, ಅವರು ಭಾರತೀಯ ನಾಗರಿಕತ್ವವನ್ನೂ ಸಾಬೀತು ಮಾಡಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.


