“ನಾನು ಸಂವಿಧಾನವನ್ನು ಅನುಸರಿಸುತ್ತೇನೆ, ಜಾತ್ಯತೀತ ರಾಜಕೀಯ ಮಾಡುತ್ತೇನೆ. ನಮ್ಮ ಸರ್ಕಾರ ರಾಜ್ಯದಲ್ಲಿ ಬಂಧನ ಕೇಂದ್ರಗಳನ್ನು ಸ್ಥಾಪಿಸುವುದಿಲ್ಲ” ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮಂಗಳವಾರ (ಡಿ.2) ಹೇಳಿದ್ದಾರೆ.
ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆಯಿಂದ (ಎಸ್‌ಐಆರ್) ಸಾರ್ವಜನಿಕರು ತೊಂದರೆ ಅನುಭವಿಸುವುದು ನಮಗೆ ಇಷ್ಟವಿಲ್ಲ. ಹಾಗಾಗಿ, ‘ಬ್ರಿಟಿಷರಂತೆ’ ರಾಜ್ಯ ಸರ್ಕಾರಿ ಅಧಿಕಾರಿಗಳಿಗೆ ಬಲವಂತದ ಸೂಚನೆಗಳನ್ನು ನೀಡಬೇಡಿ ಎಂದು ಕೇಂದ್ರ ಸರ್ಕಾರವನ್ನು ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ನೀವು ಸೂಚನೆಗಳನ್ನು ನೀಡುವುದಾದರೆ ರಾಜ್ಯ ಸರ್ಕಾರಕ್ಕೆ ನೀಡಿ, ಅಧಿಕಾರಿಗಳಿಗೆ ನೀಡಬೇಡಿ. ಇಲ್ಲದಿದ್ದರೆ ನಾವು ನಮ್ಮ ಅಧಿಕಾರಿಗಳನ್ನು ರಕ್ಷಿಸಬೇಕಾಗುತ್ತದೆ ಎಂದು ಮಮತಾ ಬ್ಯಾನರ್ಜಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಎರಡನೇ ಹಂತದಲ್ಲಿ ಮೂರು ಕೇಂದ್ರಾಡಳಿತ ಪ್ರದೇಶಗಳು ಮತ್ತು ಒಂಭತ್ತು ರಾಜ್ಯಗಳಲ್ಲಿ ಭಾರತೀಯ ಚುನಾವಣಾ ಆಯೋಗ ಎಸ್‌ಐಆರ್ ನಡೆಸುತ್ತಿದೆ. 9 ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳ ಒಳಗೊಂಡಿದೆ. ಈ ರಾಜ್ಯಗಳು ಚುನಾವಣಾ ಆಯೋಗದ ಕ್ರಮವನ್ನು ತೀವ್ರವಾಗಿ ವಿರೋಧಿಸಿವೆ.
ತಮಿಳುನಾಡು, ಕೇರಳ ಎಸ್‌ಐಆರ್ ವಿರುದ್ದ ಈಗಾಗಲೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಕೇರಳದಲ್ಲಿ ಬೂತ್ ಮಟ್ಟದ ಅಧಿಕಾರಿಗಳ (ಬಿಎಲ್‌ಒ) ಸರಣಿ ಸಾವು ಈ ರಾಜ್ಯಗಳ ಎಸ್‌ಐಆರ್ ವಿರೋಧಿ ವಾದಕ್ಕೆ ಪುಷ್ಠಿ ನೀಡಿದೆ.
2019ರಲ್ಲಿ ಅಸ್ಸಾಂನಲ್ಲಿ ರಾಷ್ಟ್ರೀಯ ನಾಗರಿಕರ ನೋಂದಣಿ (ಎನ್‌ಆರ್‌ಸಿ) ನಡೆಸಲಾಗಿದೆ. ಈ ವೇಳೆ ಸುಮಾರು 19 ಲಕ್ಷ ಜನರನ್ನು ಭಾರತೀಯ ನಾಗರಿಕರ ಪಟ್ಟಿಯಿಂದ ಹೊರಗಿಡಲಾಗಿದೆ. ಇದೇ ರೀತಿ ಪಶ್ಚಿಮ ಬಂಗಾಳದಲ್ಲೂ ಎನ್‌ಆರ್‌ಸಿ ನಡೆಸಲು ಕೇಂದ್ರ ಸರ್ಕಾರ ಯೋಜಿಸಿದೆ ಎನ್ನಲಾಗ್ತಿದೆ.
ಅಸ್ಸಾಂನಲ್ಲಿ ಎನ್‌ಆರ್‌ಸಿ ಬಳಿಕ ಅನೇಕ ಜನರನ್ನು ಬಂಧನ ಕೇಂದ್ರಗಳಲ್ಲಿ ಇರಿಸಲಾಗಿದೆ. ಪಶ್ಚಿಮ ಬಂಗಾಳದಲ್ಲೂ ಅದೇ ಆತಂಕ ಎದುರಾಗಿದೆ. ಅಸ್ಸಾಂ, ಪಶ್ಚಿಮ ಬಂಗಾಳ ಮಾತ್ರವಲ್ಲದೆ ಎಲ್ಲಾ ರಾಜ್ಯಗಳು ಬಂಧನ ಕೇಂದ್ರಗಳನ್ನು ಸ್ಥಾಪಿಸುವಂತೆ ಕೇಂದ್ರ ಸರ್ಕಾರ ಈಗಾಗಲೇ ಸೂಚನೆ ನೀಡಿದೆ. ಈ ಸೂಚನೆಯನ್ನು ನಾವು ಪಾಲಿಸುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.


