ಖ್ಯಾತ ಲೇಖಕಿ ಅರುಂಧತಿ ರಾಯ್ ಅವರ ‘ಮದರ್ ಮೇರಿ ಕಮ್ಸ್ ಟು ಮಿ’ ಪುಸ್ತಕದ ಮುಖಪುಟ ಚಿತ್ರದ ಪ್ರಸಾರದ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಸುಪ್ರಿಂ ಕೋರ್ಟ್ ಶುಕ್ರವಾರ ತಿರಸ್ಕರಿಸಿದೆ. ಏಕೆಂದರೆ, ಲೇಖಕರು ಧೂಮಪಾನವನ್ನು ಪ್ರಚಾರ ಮಾಡಿಲ್ಲ ಅಥವಾ ಜಾಹೀರಾತು ಮಾಡಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯನ್ನು, “ನಿಜವಾದ ಸಾರ್ವಜನಿಕ ಕಾಳಜಿಯ ವಿಷಯಕ್ಕಿಂತ ಸ್ವಯಂ ಪ್ರಚಾರವನ್ನು ಗಳಿಸುವ ಪ್ರಯತ್ನ’ ಎಂದು ಪರಿಗಣಿಸಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಅವರನ್ನೊಳಗೊಂಡ ಪೀಠವು, ಪುಸ್ತಕ ನಿಷೇಧ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಹಿಂದೆ ವಜಾಗೊಳಿಸಿದ್ದ ಕೇರಳ ಹೈಕೋರ್ಟ್ ಆದೇಶಕ್ಕೆ ಸವಾಲನ್ನು ಪರಿಗಣಿಸಿತು. ಪುಸ್ತಕದ ಮುಖಪುಟ ಚಿತ್ರವು ಅದನ್ನು ಸ್ವಇಚ್ಛೆಯಿಂದ ಖರೀದಿಸಿದ ಓದುಗರಿಗೆ ಮಾತ್ರ ಸೀಮಿತವಾಗಿರುವುದರಿಂದ ಮತ್ತು ಸಾರ್ವಜನಿಕ ಪ್ರಚಾರದ ಯಾವುದೇ ಅಂಶವನ್ನು ಹೊಂದಿರದ ಕಾರಣ, ಹೈಕೋರ್ಟ್‌ನ ಹಿಂದಿನ ನಿರ್ಧಾರದಲ್ಲಿ ಹಸ್ತಕ್ಷೇಪ ಮಾಡಲು ಯಾವುದೇ ಆಧಾರವಿಲ್ಲ ಎಂದು ಕೋರ್ಟ್ ಅಭಿಪ್ರಾಯಪಟ್ಟಿದೆ.
ಆಗಸ್ಟ್ 28 ರಂದು ಪುಸ್ತಕ ಬಿಡುಗಡೆಯಾದ ನಂತರ, ವಕೀಲರೊಬ್ಬರು ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಮುಖಪುಟದ ಫೋಟೋ 2003 ರ ಸಿಗರೇಟ್, ಇತರ ತಂಬಾಕು ಉತ್ಪನ್ನಗಳ ಕಾಯ್ದೆ ಮತ್ತು 2008 ರ ನಿಯಮಗಳ ನಿಬಂಧನೆಗಳನ್ನು ಉಲ್ಲಂಘಿಸುತ್ತದೆ ಎಂದು ಆರೋಪಿಸಿ, ಧೂಮಪಾನದ ಚಿತ್ರಣಗಳು ಗೋಚರಿಸುವ ಆರೋಗ್ಯ ಎಚ್ಚರಿಕೆಗಳನ್ನು ಹೊಂದಿರಬೇಕು ಎಂದು ಅರ್ಜಿ ಸಲ್ಲಿಸುವ ಮೂಲಕ ವಿವಾದ ಪ್ರಾರಂಭವಾಯಿತು.
ಮುಖಪುಟದಲ್ಲಿ, ತಂಬಾಕು ಬಳಕೆಯ ಕುರತ ಎಚ್ಚರಿಕೆಗಳ ಅನುಪಸ್ಥಿತಿಯು ಆ ಉತ್ಪನ್ನಗಳ ಪರೋಕ್ಷ ಜಾಹೀರಾತಿಗೆ ಸಮನಾಗಿರುತ್ತದೆ. ಆದ್ದರಿಂದ, ಧೂಮಪಾನ ಸಂಬಂಧಿತ ಪ್ರಚಾರವನ್ನು ತಡೆಯಲು ಉದ್ದೇಶಿಸಲಾದ ಶಾಸನಬದ್ಧ ಚೌಕಟ್ಟನ್ನು ಉಲ್ಲಂಘಿಸುತ್ತದೆ ಎಂದು ಅವರು ವಾದಿಸಿದರು.
ಅರ್ಜಿದಾರರು, ‘ಪೆಂಗ್ವಿನ್ ಇಂಡಿಯಾ’ದಿಂದ ಹಿಂಬದಿಯ ಮುಖಪುಟದಲ್ಲಿ ಮುದ್ರಿಸಲಾದ ಹಕ್ಕು ನಿರಾಕರಣೆಯ ಉಲ್ಲೇಖ ಸಂಬಂಧಿತ ಸಂಗತಿಗಳನ್ನು ನಿರ್ಲಕ್ಷ್ಯಿಸಿದ್ದರಿಂದ, ಸಾರ್ವಜನಿಕ ಹಿತಾಸಕ್ತಿಗಿಂತ ವೈಯಕ್ತಿಕ ಪ್ರಚಾರದಿಂದ ಈ ಅರ್ಜಿಯು ಪ್ರೇರಿತವಾಗಿದೆ ಎಂದು ಗಮನಿಸಿ, ಅಕ್ಟೋಬರ್ 13 ರಂದು ಹೈಕೋರ್ಟ್ ಅರ್ಜಿಯನ್ನು ವಜಾಗೊಳಿಸಿತು.
ಅರುಂತಿ ರಾಯ್ ಅವರು ಪ್ರಸಿದ್ಧ ಸಾಹಿತಿಯಾಗಿದ್ದು, ಅವರ ಬರವಣಿಗೆ ಅಥವಾ ಪ್ರಕಾಶಕರ ನಡವಳಿಕೆಯು ಧೂಮಪಾನವನ್ನು ಪ್ರೋತ್ಸಾಹಿಸುವ ಯಾವುದೇ ಪ್ರಯತ್ನವನ್ನು ಸೂಚಿಸುವುದಿಲ್ಲ ಎಂದು ನ್ಯಾಯಾಲಯ ಗಮನಿಸಿದೆ. ಸಾರ್ವಜನಿಕರ ಮೇಲೆ ಪ್ರಭಾವ ಬೀರುವ ಅಥವಾ ಹೊಸ ಧೂಮಪಾನಿಗಳನ್ನು ಆಕರ್ಷಿಸುವ ದೊಡ್ಡ ಪ್ರಮಾಣದ ಹೊರಾಂಗಣ ಜಾಹೀರಾತುಗಳ ಮೂಲಕ ಪುಸ್ತಕವನ್ನು ಮಾರಾಟ ಮಾಡಲಾಗುತ್ತಿಲ್ಲ ಎಂದು ಒತ್ತಿ ಹೇಳಿದೆ. ಏಕೆಂದರೆ, ಪುಸ್ತಕದ ಮುಖಪುಟವನ್ನು ಅದರ ವಿಷಯ ಮತ್ತು ಲೇಖಕರ ಖ್ಯಾತಿಯ ಆಧಾರದ ಮೇಲೆ ಖರೀದಿಸಲು ಆಯ್ಕೆ ಮಾಡಿದವರು ಮಾತ್ರ ವೀಕ್ಷಿಸಬಹುದು ಎಂದು ಹೇಳಿದೆ.
ಪಿಐಎಲ್‌ನಲ್ಲಿ ಯಾವುದೇ ಸತ್ವವಿಲ್ಲ, ಹೈಕೋರ್ಟ್ ಅದನ್ನು ವಜಾಗೊಳಿಸುವಲ್ಲಿ ಸರಿಯಾಗಿ ಕಾರ್ಯನಿರ್ವಹಿಸಿದೆ ಎಂದು ತೀರ್ಮಾನಿಸಿದ ಸುಪ್ರೀಂ ಕೋರ್ಟ್, ನಾವು ಮಧ್ಯಪ್ರವೇಶಿಸಲು ಯಾವುದೇ ಕಾರಣವಿಲ್ಲ ಎಂದು ಕಂಡುಕೊಂಡಿತು. ಹೈಕೋರ್ಟ್‌ನ ಆದೇಶವನ್ನು ಉಳಿಸಿಕೊಳ್ಳಲು ಅವಕಾಶ ಮಾಡಿಕೊಟ್ಟಿತು.


