ರಿಲಯನ್ಸ್ ಪವರ್ ಕಂಪನಿಯು ಭಾರತೀಯ ಸೌರಶಕ್ತಿ ನಿಗಮಕ್ಕೆ (ಎಸ್‌ಇಸಿಐ) ಟೆಂಡರ್ ಪಡೆಯಲು ಸಲ್ಲಿಸಿದ 68 ಕೋಟಿ ರೂಪಾಯಿಗಳ ನಕಲಿ ಬ್ಯಾಂಕ್ ಗ್ಯಾರಂಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ರಿಲಯನ್ಸ್ ಪವರ್ ಲಿಮಿಟೆಡ್ ಮತ್ತು ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ ಮಾಜಿ ಸಿಇಒ ಹಾಗೂ ಕಾರ್ಯನಿರ್ವಾಹಕ ನಿರ್ದೇಶಕ ಮತ್ತು ಅದರ ಮುಖ್ಯ ಹಣಕಾಸು ಅಧಿಕಾರಿ ಸೇರಿದಂತೆ 10 ಇತರರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇಡಿ) ಶನಿವಾರ ತಿಳಿಸಿದೆ.
“ಎಸ್‌ಬಿಐನ ನಕಲಿ ಈ-ಮೇಲ್ ಐಡಿಯಿಂದ ನಕಲಿ ಬ್ಯಾಂಕ್ ಗ್ಯಾರಂಟಿ ಮತ್ತು ಸುಳ್ಳು ಅನುಮೋದನೆಗಳನ್ನು ಎಸ್‌ಇಸಿಐಗೆ ಸಲ್ಲಿಸಲಾಗುತ್ತಿದೆ ಎಂದು ರಿಲಯನ್ಸ್ ಗ್ರೂಪ್ ಅಧಿಕಾರಿಗಳಿಗೆ ಚೆನ್ನಾಗಿ ತಿಳಿದಿತ್ತು. ಎಸ್‌ಇಸಿಐ ವಂಚನೆಯನ್ನು ಪತ್ತೆಹಚ್ಚಿದಾಗ, ಎಸ್‌ಇಸಿಐ ವಂಚನೆಯ ಬಗ್ಗೆ ತಿಳಿಸಿದ ಒಂದು ದಿನದೊಳಗೆ ರಿಲಯನ್ಸ್ ಗ್ರೂಪ್ ಐಡಿಬಿಐ ಬ್ಯಾಂಕಿನಿಂದ ನಿಜವಾದ ಬ್ಯಾಂಕ್ ಗ್ಯಾರಂಟಿಯ ವ್ಯವಸ್ಥೆ ಮಾಡಿತು. ಆದಾಗ್ಯೂ, ನಿಗದಿತ ದಿನಾಂಕದ ನಂತರ ಸಲ್ಲಿಸಲಾಗಿದ್ದರಿಂದ ಹೊಸ ಬ್ಯಾಂಕ್ ಗ್ಯಾರಂಟಿಯನ್ನು ಸ್ವೀಕರಿಸಲು ಎಸ್‌ಇಸಿಐ ನಿರಾಕರಿಸಿತು” ಎಂದು ಪ್ರಾಸಿಕ್ಯೂಷನ್ ದೂರನ್ನು ಉಲ್ಲೇಖಿಸಿ ಇಡಿ ವಕ್ತಾರರು ಹೇಳಿದ್ದಾರೆ.
“ರಿಲಯನ್ಸ್ ಪವರ್‌ನ ಅಂಗಸಂಸ್ಥೆಗಳಾದ, ರಿಲಯನ್ಸ್ ಎನ್‌ಯು ಬಿಇಎಸ್ಎಸ್ ಲಿಮಿಟೆಡ್ ಮತ್ತು ರೋಸಾ ಪವರ್ ಸಪ್ಲೈ ಕಂಪನಿ ಲಿಮಿಟೆಡ್‌ನ ಮಾಜಿ ಸಿಎಫ್‌ಒ ಅಶೋಕ್ ಕುಮಾರ್ ಪಾಲ್, ರಿಲಯನ್ಸ್ ಇನ್ಫ್ರಾಸ್ಟ್ರಕ್ಚರ್‌ನ ಮಾಜಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ಪುನೀತ್ ನರೇಂದ್ರ ಗರ್ಗ್, ಬಿಸ್ವಾಲ್ ಟ್ರೇಡ್‌ಲಿಂಕ್ ಪ್ರೈವೇಟ್ ಲಿಮಿಟೆಡ್ (ಬಿಟಿಪಿಎಲ್) ಮತ್ತು ಅದರ ಕಂಪನಿ ಬಿಟಿಪಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ಪಾರ್ಥ ಸಾರಥಿ ಬಿಸ್ವಾಲ್, ಕೋಲ್ಕತ್ತಾ ಮೂಲದ ಬಯೋಥೇನ್ ಕೆಮಿಕಲ್ಸ್ ಪ್ರೈವೇಟ್ ಲಿಮಿಟೆಡ್‌ನ ಸಲಹೆಗಾರ ಅಮರ್ ನಾಥ್ ದತ್ತಾ, ರವೀಂದರ್ ಪಾಲ್ ಸಿಂಗ್ ಚಡ್ಡಾ ಮತ್ತು ಮನೋಜ್ ಭಯ್ಯಾಸಾಹೇಬ್ ಪೊಂಗ್ಡೆ ವಿರುದ್ಧ ಇಡಿ ಪಟಿಯಾಲ ಹೌಸ್ ನ್ಯಾಯಾಲಯದಲ್ಲಿ ಪೂರಕ ಪ್ರಾಸಿಕ್ಯೂಷನ್ ದೂರು ದಾಖಲಿಸಿದೆ” ಎಂದು ಇಡಿ ವಕ್ತಾರರು ವಿವರಿಸಿದ್ದಾರೆ.
ಶುಕ್ರವಾರ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯಕ್ಕೆ ಅಕ್ರಮ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ) ನಿಬಂಧನೆಗಳ ಅಡಿಯಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


