ಪೂರ್ಣ ಪ್ರಮಾಣದ ಒಳಮೀಸಲಾತಿ ಜಾರಿಗೆ ಆಗ್ರಹಿಸಿ ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ’ ನಡೆಸುತ್ತಿದ್ದ ಹೋರಾಟಕ್ಕೆ ಜಿಲ್ಲಾ ಪೊಲೀಸರು ಅನುಮತಿ ನಿರಾಕರಿಸಿದ್ದು, ಸಿದ್ದರಾಮನಹುಂಡಿಯಿಂದ ಮೈಸೂರಿಗೆ ಇಂದು ಪಾದಯಾತ್ರೆ ಆರಂಭಿಸಿದ ಹೋರಾಟಗಾರರನ್ನು ಪೊಲೀಸರು ಬಂಧಿಸಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾ ದಂಡಾಧಿಕಾರಿಗಳು, ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 24 ಗಂಟೆಗಳ ಕಾಲ ನಿಷೇಧಾಜ್ಞೆ ಜಾರಿಗೊಳಿಸಿದ್ದಾರೆ.
ಮೈಸೂರು ಜಿಲ್ಲಾಧಿಕಾರಿಗಳು ಹೊರಡಿಸಿರುವ ಆದೇಶ ಪ್ರತಿ ‘ನಾನುಗೌರಿ.ಕಾಮ್‘ಗೆ ಲಭ್ಯವಾಗಿದ್ದು, “ಮೈಸೂರು ಜಿಲ್ಲೆ ಪೊಲೀಸ್ ಅಧೀಕ್ಷಕರ ಕೋರಿಕೆಯ ಮೇರೆಗೆ, ದಿನಾಂಕ: 06.12.2025 ರಿಂದ 07.12.2025 ರವರೆಗೆ ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಪರ ಮತ್ತು ವಿರೋಧ ಪ್ರತಿಭಟನಾ ಸಮಾವೇಶಗಳು ನಡೆಯುವ ಸಂಭವಿರುವ ಹಿನ್ನಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಹಾಗೂ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ, ಈ ಕೆಳಕಂಡ ಎಲ್ಲಾ ಚಟುವಟಿಕೆಗಳನ್ನು ನಿರ್ಬಂಧಿಸಿ ಮೈಸೂರು ಜಿಲ್ಲೆಯ, ವರುಣಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ, ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ 2023 ಸೆಕ್ಷನ್ 163 ರೀತ್ಯಾ ನಿರ್ಬಂಧಿತ ಪ್ರದೇಶವೆಂದು ಘೋಷಿಸಿ ಆದೇಶಿಸಿರುತ್ತೇನೆ” ಎಂದು ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.
ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ, ಈ ಅವಧಿಯಲ್ಲಿ, “ಯಾವುದೇ ಮೆರವಣಿಗೆ, ಪ್ರತಿಭಟನೆ, ಯಾವುದೇ ರೀತಿಯ ರ‍್ಯಾಲಿ ನಡೆಸುವುದು, ಪರ-ವಿರೋಧ ಘೋಷಣೆ ಕೂಗುವುದು, ಐದು ಜನರಿಗಿಂತ ಹೆಚ್ಚು ಜನ ಸೇರುವುದು, ಸಭೆ-ಸಮಾರಂಭಗಳನ್ನು ನಡೆಸುವುದು, ಯಾವುದೇ ಬಹಿರಂಗ ಸಭೆ ಸಮಾರಂಭಗಳನ್ನು ನಡೆಸುವುದು. ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಪ್ರಚಾರ, ಧ್ವನಿವರ್ಧಕ ಬಳಸುವುದು, ಫ್ಲೆಕ್ಸ್ ಬ್ಯಾನರ್ ಅಳವಡಿಸುವುದು, ಕರಪತ್ರಗಳನ್ನು ಹಂಚುವುದು. ಯಾವುದೇ ಗುಪ್ತ ಹಾಗೂ ಒಳಾಂಗಣ ಸಭೆ ನಡೆಸುವಂತಿಲ್ಲ” ಎಂದು ಆದೇಶ ಮಾಡಲಾಗಿದೆ.
“ಈ ಆದೇಶವನ್ನು ಪೊಲೀಸ್ ಅಧೀಕ್ಷಕರು, ಮೈಸೂರು ಜಿಲ್ಲೆ ಮತ್ತು ತಾಲ್ಲೂಕು ದಂಡಾಧಿಕಾರಿಗಳು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು, ಆದೇಶ ಉಲ್ಲಂಘಿಸುವವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು” ಎಂದು ಆದೇಶ ನೀಡಿದ್ದಾರೆ.
ಸರ್ಕಾರದ ನಡೆ ಖಂಡಿಸಿದ ಹೋರಾಟಗಾರರು:
ನ್ಯಾಯ ಕೇಳಲು ಶಾಂತಿಯುತವಾಗಿ ಪಾದಯಾತ್ರೆ ನಡೆಸುವವರನ್ನು ಬಂಧಿಸಿದ ಸರ್ಕಾರದ ನಡೆಯನ್ನು ಹೋರಾಟಗಾರರು ಖಂಡಿಸಿದ್ದಾರೆ. ಪರಿಶಿಷ್ಟ ಜಾತಿ (ಎಸ್‌ಸಿ) ಸಮಗ್ರ ಒಳಮೀಸಲಾತಿ ಜಾರಿಗೆ ಸರ್ಕಾರ ವಿಳಂಬ ಮಾಡುತ್ತಿದೆ ಎಂದು ಆಗ್ರಹಿಸಿ, ‘ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಹೋರಾಟ ಸಮಿತಿ’ ಮತ್ತು ಹಲವು ದಲಿತ ಪರ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸ್ವಗ್ರಾಮವಾದ ಸಿದ್ದರಾಮನಹುಂಡಿಯಿಂದ ಮೈಸೂರಿನವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆಯನ್ನು ಪೊಲೀಸರು ಇಂದು ಬೆಳಗ್ಗೆ ಬಂಧಿಸುವ ಮೂಲಕ ಹತ್ತಿಕ್ಕಿದ್ದಾರೆ.
ಇಂದು ಬೆಳಗ್ಗೆ ಬಂಧಿಸಿದ ಹೋರಾಟಗಾರರನ್ನು ಪೊಲೀಸರು ಈವರೆಗೆ ಬಿಡುಗಡೆ ಮಾಡಿಲ್ಲ. ಆದರೂ ನಾಳೆಯಿಂದ ಪಾದಯಾತ್ರೆ ಮುಂದುವರಿಯಲಿದೆ ಎಂದು ಹೋರಾಗಾರರು ‘ನಾನುಗೌರಿ.ಕಾಮ್‘ಗೆ ತಿಳಿಸಿದ್ದಾರೆ.
ಬಂಧನ ಬಳಿಕ ನಾನುಗೌರಿ.ಕಾಮ್ ಮಾತನಾಡಿದ ಒಳಮೀಸಲಾತಿ ಹಿರಿಯ ಹೋರಾಟಗಾರ ಎಸ್.ಮಾರೆಪ್ಪ, “ದುರುದ್ದೇಶದಿಂದ ಪೊಲೀಸರು ಪಾದಯಾತ್ರೆಗೆ ಅನುಮತಿ ನಿರಾಕರಿಸಿ ಈಗ ನಮ್ಮನ್ನು ಬಂಧಿಸಿದ್ದಾರೆ. ನಮ್ಮ ಸಮುದಾಯದ ಜನರ ಸಮಸ್ಯೆ ಕುರಿತು ಚರ್ಚಿಸಲು ನಮ್ಮದೇ ಸಮುದಾಯದ ನಾಯಕರ ಬಳಿಗೆ ಹೋಗುತ್ತಿರುವಾಗ ಬಂಧಿಸಿರುವುದು ಮೊದಲು. ಈಗ ನಾವು ಯಾರನ್ನು ಕೇಳಬೇಕು? ಈ ರೀತಿ ನಡೆದಿರುವುದು ಕರ್ನಾಟಕದ ಚರಿತ್ರಿಯಲ್ಲೇ ಮೊದಲು. ಸಿದ್ದರಾಮಯ್ಯ ಅವರ ಸರ್ಕಾರ ಹೀಗೆಲ್ಲಾ ಮಾಡುತ್ತಿರುವುದು ಸರಿಯಲ್ಲ” ಎಂದು ಆಕ್ರೋಶ ಹೊರಹಾಕಿದರು.
“ಒಳಮೀಸಲಾತಿ ಪ್ರಕ್ರಿಯೆ ಜಾರಿಗೆ ಉದ್ದೇಶಪೂರ್ವಕವಾಗಿ ವಿಳಂಬ ಮಾಡಲಾಗುತ್ತಿದೆ. ಅವರ ಈ ವಿಳಂಬ ಧೋರಣೆಗೆ ಪೂರಕವಾಗಿ ಪೊಲೀಸರು ಕೂಡ ಕೆಲಸ ಮಾಡುತ್ತಿದ್ದು, ನಮ್ಮನ್ನು ಬಂಧಿಸಿರುವುದನ್ನು ಖಂಡಿಸುತ್ತೇವೆ. ವಿವಿಧ ಜಿಲ್ಲೆಗಳಿಂದ ಬಂದಿರುವ ಒಳಮೀಸಲಾತಿ ಹೋರಾಟಗಾರರು ಸಿದ್ದರಾಮನಹುಂಡಿಗೆ ನೇರವಾಗಿ ತೆರಳಿ ಪಾದಯಾತ್ರೆ ಆರಂಭಿಸಬೇಕು. ರಾಜ್ಯದ ಜನರು, ಸರ್ಕಾರ ಮತ್ತು ಪೊಲೀಸರ ಈ ನಡೆಯನ್ನು ಖಂಡಿಸಬೇಕು” ಎಂದು ಒಳಮೀಸಲಾತಿ ಹೋರಾಟಗಾರ ಶಿವರಾಜ್ ಅಕ್ಕರಕಿ ಹೇಳಿದರು.
“ಮಾನ್ಯ ಮುಖ್ಯಮಂತ್ರಿಗಳೆ.. ಸಚಿವರಾದ ಎಚ್.ಸಿ. ಮಹದೇವಪ್ಪ ಅವರೇ.. ನಿಮ್ಮ ಸರ್ಕಾರವನ್ನು ಅಧಿಕಾರಕ್ಕೆ ತಂದವರು ನಾವು; ಕೋಮುವಾದಿಗಳನ್ನು ಸೋಲಿಸಿದ್ದು ನಾವು. ರಾಜ್ಯದಲ್ಲಿ ಶಾಂತಿ-ನೆಮ್ಮದಿ ಇರಬೇಕು ಎಂದು ಬಯಸಿದವರು. ನ್ಯಾಯಯುತವಾಗಿ ನಡೆಯುತ್ತಿರುವ ನಮ್ಮ ಹೋರಾಟವನ್ನು ಹತ್ತಿಕ್ಕಿ, ದಿಕ್ಕು ತಪ್ಪಿಸುವ ಕೆಲಸ ನಡೆಯುತ್ತಿದೆ. ಸಮಾಜ ಕಲ್ಯಾಣ ಇಲಾಖೆಯಲ್ಲಿರುವ ಇಡೀ ಆಡಳಿತ ಯಂತ್ರದಲ್ಲಿ ಮೀಸಲಾತಿ ಉದ್ದೇಶವನ್ನೇ ಬುಡಮೇಲು ಮಾಡುವ ಯತ್ನ ನಡೆಯುತ್ತಿದೆ. ನಮ್ಮ ಹೋರಾಟ ಸರ್ಕಾರ ಅಥವಾ ಸಿದ್ದರಾಮಯ್ಯನವರ ವಿರುದ್ಧ ಅಲ್ಲ. ಏಕೆಂದರೆ, ಕೋಮುವಾದಿಗಳು ಅಧಿಕಾರಕ್ಕೆ ಬರಬಾರದು ಎಂದು ಬಯಸಿದವರು ನಾವು. ನಮ್ಮದು ಶಾಂತಿಯುತ ಪಾದಯಾತ್ರೆ. ಆದರೆ, ನಮ್ಮನ್ನು ಪೊಲೀಸರು ಬಂಧಿಸಿ ಕರೆದೊಯ್ಯತ್ತಿದ್ದಾರೆ. ಬೇಕಿದ್ದರೆ ನಮ್ಮನ್ನು ಬಂಧಿಸಿ ಜೈಲಿನಲ್ಲಿಡಿ ಅದಕ್ಕಾಗಿ ನಾವು ತಯಾರಿದ್ದೇವೆ. ಆದರೆ ಒಳಮೀಸಲಾತಿ ವಿಚಾರದಲ್ಲಿ ನಮ್ಮ ಸಮುದಾಯಕ್ಕೆ ನ್ಯಾಯ ಸಿಗಬೇಕು” ಎಂದು ಹಿರಿಯ ಹೋರಾಟಗಾರ ಕರಿಯಪ್ಪ ಗುಡಿಮನಿ ಬೇಸರ ಆಗ್ರಹಿಸಿದರು.


