ಒಳಮೀಸಲಾತಿಗೆ ಸಂಬಂಧಿಸಿದಂತೆ ಉಂಟಾಗಿರುವ ಕಗ್ಗಂಟನ್ನು ಎದುರಿಸಲು ಮುಂದಾಗಿರುವ ರಾಜ್ಯ ಸರ್ಕಾರ, ಶೇಕಡ 17ರ ಮೀಸಲಾತಿ ಪ್ರಮಾಣದಲ್ಲೇ ಮುಂದುವರಿಯಲು ತೀರ್ಮಾನಿಸಿರುವುದಾಗಿ ತಿಳಿದುಬಂದಿದೆ.
ಶನಿವಾರ ಸಂಜೆ (ಡಿಸೆಂಬರ್ 6) ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆ ನಡೆಸಿದ್ದು, ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಆಹಾರ ಸಚಿವ ಕೆ.ಎಚ್. ಮುನಿಯಪ್ಪ ಭಾಗಿಯಾಗಿದ್ದಾರೆಂದು ವರದಿಯಾಗಿದೆ.
ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳ (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸೀಟುಗಳು ಮತ್ತು ರಾಜ್ಯಾಧೀನ ಸೇವೆಗಳಲ್ಲಿ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ, 2022ರ ಅಡಿಯಲ್ಲಿ ಒಳ ಮೀಸಲಾತಿ ಹೆಚ್ಚಳವನ್ನು ಜಾರಿಗೊಳಿಸದಂತೆ ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ತಡೆ ನೀಡಿತ್ತು.
ಕಾಯ್ದೆಯ ನಿಬಂಧನೆಗಳನ್ನು ಪ್ರಶ್ನಿಸಿ ಮಹೇಂದ್ರ ಕುಮಾರ್ ಮಿತ್ರ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸೇರಿದಂತೆ ಹಲವಾರು ಅರ್ಜಿಗಳನ್ನು ಆಲಿಸಿದ ನಂತರ, “ಅರ್ಜಿಗಳು ಇತ್ಯರ್ಥವಾಗುವವರೆಗೆ ನೇಮಕಾತಿ ಅಥವಾ ಹೆಚ್ಚಿದ ಮೀಸಲಾತಿ ಆಧಾರದ ಮೇಲೆ ನೇಮಕಾತಿಗಳಿಗೆ ಯಾವುದೇ ಅಧಿಸೂಚನೆಗಳನ್ನು ಹೊರಡಿಸಬಾರದು. ಈಗಾಗಲೇ ಪ್ರಾರಂಭವಾಗಿರುವ ನೇಮಕಾತಿಗಳನ್ನು ಮುಂದುವರಿಸಬಹುದು, ಆದರೆ ಈ ನೇಮಕಾತಿಗಳು ಸದ್ಯ ಸಲ್ಲಿಸಲಾಗಿರುವ ಅರ್ಜಿಗಳ ಅಂತಿಮ ತೀರ್ಪಿಗೆ ಒಳಪಟ್ಟಿರಬೇಕು” ಎಂದು ಹೈಕೋರ್ಟ್ ಹೇಳಿತ್ತು. ಆದರೆ, ಶೇಕಡ 15ರ ಬದಲಿಗೆ ಶೇಕಡ 17ರ ಪ್ರಮಾಣದಲ್ಲಿ ಮೀಸಲಾತಿಯನ್ನು ಸರ್ಕಾರ ಹಂಚಿಕೆ ಮಾಡಿದ್ದು, ಅದನ್ನು ಸಮರ್ಥಿಸಲು ಸರ್ಕಾರ ನಿರ್ಧರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಈದಿನ.ಕಾಂ ವರದಿ ಮಾಡಿದೆ.
ಶೇಕಡ 17ರ ಮೀಸಲಾತಿಯನ್ನು ಸಮರ್ಥನೆ ಮಾಡಲು ಆಯೋಗದ ಅಂಕಿ-ಅಂಶಗಳಿವೆ. ಈಗಾಗಲೇ ಛತ್ತೀಸ್‌ಗಡದಲ್ಲಿ ಶೇಕಡ 58ರಷ್ಟು ಮೀಸಲಾತಿಯನ್ನು ಜಾರಿಗೆ ತರಲಾಗಿದೆ ಎಂದು ಸಭೆಯಲ್ಲಿ ಚರ್ಚಿಸಿರುವುದಾಗಿ ತಿಳಿದುಬಂದಿದೆ.
ಇದರ ಜೊತೆಗೆ ‘ಒಳಮೀಸಲಾತಿಗೆ ಸಂಬಂಧಿಸಿದಂತೆ ಕಾಯ್ದೆಯನ್ನು ತರಬೇಕು ಮತ್ತು ಸೂಕ್ತ ನಿಯಮಾವಳಿಗಳನ್ನೂ ರೂಪಿಸಬೇಕು. ಬಡ್ತಿ ಮೀಸಲಾತಿಯಲ್ಲೂ ಒಳಮೀಸಲಾತಿ ಜಾರಿಗೆ ತರಲು ಈಗಾಗಲೇ ಇರುವ ಕಾಯ್ದೆಗೆ ತಿದ್ದುಪಡಿ ಮಾಡಲು ಸರ್ಕಾರ ನಿರ್ಧರಿಸಿದೆ” ಎಂದು ಈದಿನ.ಕಾಂ ಹೇಳಿದೆ.
ಸಿದ್ದರಾಮನ ಹುಂಡಿಯಲ್ಲಿ ಪಾದಯಾತ್ರೆ ಶುರು ಮಾಡದಂತೆ ಹೋರಾಟಗಾರರಿಗೆ ತೊಂದರೆ ಕೊಟ್ಟ ಬಗ್ಗೆಯೂ ಸಿಎಂ ಗಮನಕ್ಕೆ ತರಲಾಗಿದೆ. ಸಿಎಂ ತುರ್ತು ಸಭೆ ಕರೆಯಲು ಹೋರಾಟದ ಒತ್ತಡವೂ ಕಾರಣ ಎಂದು ಮೂಲಗಳು ಹೇಳಿವೆ. ಅಡ್ವೊಕೇಟ್ ಜನರಲ್ ಸಭೆಯಲ್ಲಿ ಇದ್ದರೆಂದು ತಿಳಿದುಬಂದಿದೆ ಎಂದು ವರದಿ ತಿಳಿಸಿದೆ.
Courtesy : eedina.com


