ಅನ್ನಭಾಗ್ಯ ಪಡಿತರ ಅಕ್ಕಿಯ ಅಕ್ರಮ ಸಂಗ್ರಹ ಮತ್ತು ಮಾರಾಟ ಪ್ರಕರಣಗಳಿಗೆ ಸಂಬಂಧಿಸಿದಂತೆ 461 ಎಫ್‌ಐಆರ್‌ಗಳನ್ನು ದಾಖಲಿಸಿ, 570 ಜನರನ್ನು ಬಂಧಿಸಲಾಗಿದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಖಾತೆ ಸಚಿವ ಕೆ.ಎಚ್ ಮುನಿಯಪ್ಪ ಮಾಹಿತಿ ನೀಡಿದರು.
ಸೋಮವಾರ (ಡಿಸೆಂಬರ್ 8) ವಿಧಾನಪರಿಷತ್‌ನಲ್ಲಿ ಬಿಜೆಪಿ ಸದಸ್ಯ ಸಿ.ಟಿ ರವಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು.
ಬಿಪಿಎಲ್ ಪಡಿತರ ಚೀಟಿದಾರರಿಗೆ ವಿತರಿಸುವ ಅನ್ನಭಾಗ್ಯ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಣೆ ಮಾಡಿ ಹೊರ ದೇಶಗಳಿಗೆ, ರಾಜ್ಯಗಳಿಗೆ ಮಾರಾಟ ಮಾಡುತ್ತಿರುವುದು ಸರ್ಕಾರದ ಗಮನಕ್ಕೆ ಬಂದಿದೆಯೇ?. ಈ ಸಂಬಂಧ ದಾಖಲಾದ ಪ್ರಕರಣದಲ್ಲಿ ಎಷ್ಟು ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಳ್ಳಲಾಗಿದೆ, ಎಷ್ಟು ವಾಹನಗಳನ್ನು ಜಪ್ತಿ ಮಾಡಲಾಗಿದೆ ಮತ್ತು ಎಷ್ಟು ಜನರ ಮೇಲೆ ಮೊಕದ್ದಮ್ಮೆ ದಾಖಲಿಸಲಾಗಿದೆ ಎಂದು ಸಿ.ಟಿ ರವಿ ಕೇಳಿದರು.
ಮುಂದುವರಿದು, ಅನ್ನಭಾಗ್ಯದ ಅಕ್ಕಿಯ ಅಕ್ರಮ ಸಂಗ್ರಹ ಮತ್ತು ಮಾರಾಟದ ಪ್ರಕರಣಗಳ ತನಿಖೆಗೆ ಸರ್ಕಾರ ಆದೇಶ ನೀಡಿದೆಯೇ? ಈ ಪ್ರಕರಣಗಳಲ್ಲಿ ಎಷ್ಟು ಜನರನ್ನು ಬಂಧಿಸಲಾಗಿದೆ? ಹೂಡಿರುವ ಪ್ರಕರಣಗಳು ಯಾವುವು? ಅಕ್ರಮದಲ್ಲಿ ಶಾಮೀಲಾಗಿರುವ ಅಧಿಕಾರಿಗಳ ವಿರುದ್ದ ಕೈಗೊಂಡಿರುವ ಕ್ರಮ ಏನು? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಮುನಿಯಪ್ಪ, 2025-26ರಲ್ಲಿ ಅನ್ನಭಾಗ್ಯ ಪಡಿತರ ಅಕ್ಕಿಯ ಅಕ್ರಮ ಸಂಗ್ರಹ ಮತ್ತು ಮಾರಾಟ ಪ್ರಕರಣಗಳಿಗೆ ಸಂಬಂಧಿಸಿದಂತೆ 485 ಮೊಕದ್ದಮೆಗಳನ್ನು ಹೂಡಲಾಗಿದೆ, 461 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ, 570 ಜನರನ್ನು ಬಂಧಿಸಲಾಗಿದೆ. 29,603 ಕ್ವಿಂಟಾಲ್ ಅಕ್ಕಿ ವಶಪಡಿಸಿಕೊಂಡಿದ್ದೇವೆ ಮತ್ತು 314 ವಾಹನಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದರು.
ಯಾದಗಿರಿ ಪ್ರಕರಣವನ್ನು ಸಿಐಡಿಗೆ ವಹಿಸಲಾಗಿದೆ. ಕೊಪ್ಪಳ ಗೋದಾಮಿನ ಪ್ರಕರಣದಲ್ಲಿ ಸುಮಾರು 330 ಕ್ವಿಂಟಾಲ್ ಅಕ್ಕಿಯನ್ನು ವಶಪಡಿಸಿಕೊಂಡು ಎಫ್‌ಐಆರ್ ದಾಖಲಿಸಲಾಗಿದೆ. ಬಾಗಲಕೋಟೆಯಲ್ಲಿ ಎಫ್‌ಐರ್ ದಾಖಲಿಸಲಾಗಿದೆ. ಅಲ್ಲಿನ ಪ್ರಕರಣದಲ್ಲಿ ಒಬ್ಬ ಪತ್ರಕರ್ತನ ಕೊಲೆಯಾಗಿದೆ. ಬಸವರಾಜ್ ರಾಮಪ್ಪ ಖಾನಗೊಂಡ ಎಂಬವರು ಟಿವಿಎಸ್ ಸ್ಕೂಟರ್‌ನಲ್ಲಿ ತೆರಳುವಾಗ ಅಪಘಾತವೆಸಗಿ ಕೊಲೆ ಮಾಡಲಾಗಿದೆ. ಈ ಕುರಿತು ಅವರ ಪತ್ನಿ ನೀಡಿದ ದೂರಿನಂತೆ ಪ್ರಕರಣ ದಾಖಲಿಸಲಾಗಿದೆ. ಅದು ಈಗ ವಿಚಾರಣೆಯ ಹಂತದಲ್ಲಿದೆ ಎಂದು ಹೇಳಿದರು.
ಆಹಾರ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾಲ, ಕಾಲಕ್ಕೆ ಮೇಲ್ವಿಚಾರಣೆ ಮಾಡುವಂತೆ ನಿರ್ದೇಶನ ನೀಡಿ, ತಪ್ಪಿತಸ್ಥರ ವಿರುದ್ದ ಅಗತ್ಯ ವಸ್ತುಗಳ ಕಾಯ್ದೆ 1995ರ ಅಡಿ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ ಎಂದು ಮುನಿಯಪ್ಪ ಮಾಹಿತಿ ನೀಡಿದರು.
ಈ ವೇಳೆ ಮಾತನಾಡಿದ ಸಿ.ಟಿ ರವಿ, ಸಿಂಗಾಪುರದಲ್ಲಿ ಇದೇ ಪಾಲಿಶ್ ಮಾಡಿದ ಅಕ್ಕಿಯನ್ನು 25 ಕೆ.ಜಿಗೆ 8 ಸಾವಿರ ರೂಪಾಯಿಯಂತೆ ಮಾರಾಟ ಮಾಡಲಾಗುತ್ತಿದೆ. ದುಬೈನಲ್ಲಿ 15 ಕೆ.ಜಿ ಅಕ್ಕಿಯನ್ನು 1,500 ರೂಪಾಯಿಗೆ ಮಾರಾಲಾಗುತ್ತಿದೆ ಎಂಬ ಮಾಹಿತಿಯಿದೆ. ಹಾಗಾಗಿ, ಬಡವರಿಗೆ ಅನ್ನಭಾಗ್ಯ ಎಂದು ಕೊಡಲಾಗುತ್ತಿರುವ ಅಕ್ಕಿ ಬಡವರಿಗೆ ಸಿಗುತ್ತಿಲ್ಲ ಎಂದು ಹೇಳಿದರು.
ಇದರಲ್ಲಿ ಅಧಿಕಾರಿಗಳು ಶಾಮಿಲಾಗಿದ್ದಾರೆ. ಗೋದಾಮುಗಳಿಗೆ ಬರುವ ಮುಂಚೆಯೇ ಕ್ವಿಂಟಾಲ್‌ಗಟ್ಟಲೆ ಅಕ್ಕಿ ಮಾಯವಾಗುತ್ತಿದೆ. ನೂರಾರು ಪ್ರಕರಣಗಳು ದಾಖಲಾಗಿರುವುದರಿಂದ. ಇದರ ಹಿಂದೆ ರಾಜ್ಯ, ದೇಶ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಇದರ ಜಾಲ ಇರಬಹುದು. ಹಾಗಾಗಿ, ಈ ಬಗ್ಗೆ ಎಸ್‌ಐಟಿ ತನಿಖೆ ನಡೆಸುವ ಕುರಿತು ಸರ್ಕಾರ ಚಿಂತಿಸಿದೆಯಾ? ಈ ಅಕ್ರಮ ತಡೆಯಲು ಕಠಿಣ ಕ್ರಮವನ್ನು ಕೈಗೊಳ್ಳುವ ಬಗ್ಗೆ ಯೋಚಿಸಿದೆಯಾ? ಎಂದು ಪ್ರಶ್ನಿಸಿದರು.
ಇದಕ್ಕೆ ಉತ್ತರಿಸಿದ ಸಚಿವ ಮುನಿಯಪ್ಪ, ಅಗತ್ಯ ವಸ್ತುಗಳ ಕಾಯ್ದೆ ಅಡಿ ಎಲ್ಲಾ ಕ್ರಮ ಕೈಗೊಳ್ಳುವ ಅಧಿಕಾರ ಆಹಾರ ಇಲಾಖೆಯ ಉಪ ಆಯುಕ್ತರಿಗೆ ಇದೆ. ಅವರು ಸೂಕ್ತ ಕ್ರಮ ಕೈಗೊಳ್ಳುತ್ತಾರೆ. ಹಾಗಾಗಿಯೇ ಅಕ್ರಮಗಳ ಬಗ್ಗೆ ಇಷ್ಟೊಂದು ತನಿಖೆ ನಡೆದು ಮಾಹಿತಿಯನ್ನು ಒದಗಿಸಿದ್ದೇವೆ. ಬಾಗಲಕೋಟೆಯ ಕೊಲೆ ಪ್ರಕರಣ ಸಂಬಂಧ ಮೂರ್ನಾಲು ಮಂದಿಯನ್ನು ಬಂಧಿಸಲಾಗಿದೆ. ಅವರೆಲ್ಲ ನ್ಯಾಯಾಂಗ ಬಂಧನದಲ್ಲಿದ್ದಾರೆ ಎಂದರು.
ಎಸ್‌ಐಟಿ ರಚಿಸುವ ಅವಶ್ಯಕತೆ ಇಲ್ಲ. ಪ್ರಸ್ತುತ ಇರುವ ಕಾನೂನಿನಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳುವ ಅವಕಾಶವಿದೆ. ಕ್ರಮ ಕೈಗೊಳ್ಳುತ್ತಿದ್ದೇವೆ ಎಂದು ಹೇಳಿದರು.


