ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಎನ್‌ಆರ್‌ಸಿ ವಿರೋಧಿಸಿ ದೆಹಲಿಯ ಜಮಾ ಮಸೀದಿಯಲ್ಲಿ ನಿನ್ನೆ ನಡೆದ ಬೃಹತ್ ನಿರಂತರ ಹೋರಾಟ ಈಗ ಛಿದ್ರಗೊಂಡಿದೆ. ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠೀ ಚಾರ್ಜ್ ಮಾಡಿ ನೇತೃತ್ವ ವಹಿಸಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಅಜಾದ್‌ರವರನ್ನು ಬಂಧಿಸಿದ್ದಾರೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಚಂದ್ರಶೇಖರ್ ಅಜಾದ್‌ರೊಂದಿಗೆ 40 ಜನರನ್ನು ಬಂಧಿಸಿದ್ದು ಅದರಲ್ಲಿ ಎಳೆಯ ಹುಡುಗರು ಸಹ ಸೇರಿದ್ದಾರೆ.
ನಿನ್ನೆ ಮಧ್ಯಾಹ್ನ ನಮಾಜ್‌ನ ನಂತರ ಜಮಾ ಮಸೀದಿಯಿಂದ ಜಂತರ್ ಮಂತರ್ ಕಡೆಗೆ ಮೆರವಣಿಗೆ ಹೊರಟ ಪ್ರತಿಭಟನಾಕಾರರನ್ನು ದೆಹಲಿ ಗೇಟ್ ಬಳಿ ಪೊಲೀಸರು ಮತ್ತು ಅರೆಸೈನಿಕ ಸಿಬ್ಬಂದಿ ತಡೆದರು. ಇದೇ ಸಮಯದಲ್ಲಿ ದರಿಯಗಂಜ್‌ನಲ್ಲಿ ಕಾರಿಗೆ ಬೆಂಕಿ ಹಚ್ಚಿದ ಘಟನೆ ಜರುಗಿದೆ. ತದನಂತರ ಪ್ರತಿಭಟನೆ ಹಿಂಸಾತ್ಮಕವಾಯಿತು, ಇದರಿಂದಾಗಿ ಪೊಲೀಸರು ಲಾಠಿ ಚಾರ್ಜ್ ಮತ್ತು ನೀರಿನ ಫಿರಂಗಿಗಳನ್ನು ಸಿಡಿಸಿದ್ದಾರೆ.
ದೆಹಲಿ ಮಾತ್ರವಲ್ಲದೇ, ಉತ್ತರ ಪ್ರದೇಶ ಸೇರಿದಂತೆ ದೇಶದ ಅನೇಕ ಪಕ್ಷಗಳಲ್ಲಿ ಪ್ರತಿಭಟನೆ ಅಬಾಧಿತವಾಗಿ ಮುಂದುವರೆದಿದ್ದು, ಹಿಂಸಾಚಾರದಲ್ಲಿ ಶುಕ್ರವಾರ ಆರು ಪ್ರತಿಭಟನಾಕಾರರು ಸಾವನ್ನಪ್ಪಿದ್ದಾರೆ.
“ಕಾಯ್ದೆಯನ್ನು ವಾಪಸ್ ಪಡೆಯುವಂತೆ ಮಾಡಲು ನಾವು ಯಾವ ತ್ಯಾಗಕ್ಕೂ ಸಿದ್ದರಾಗಿದ್ದೇವೆ. ಆದರೆ ನಾವೆಂದಿಗೂ ಹಿಂಸೆಯನ್ನು ಬೆಂಬಲಿಸುವುದಿಲ್ಲ. ನಾವು ಶುಕ್ರವಾರ ಬೆಳಿಗ್ಗೆಯಿಂದ ಮಸೀದಿಯೊಳಗೆ ಕುಳಿತಿದ್ದೆವು. ಹಾಗಾಗಿ ನಮ್ಮ ಜನರು ಹಿಂಸಾಚಾರದಲ್ಲಿ ಭಾಗಿಯಾಗಿಲ್ಲ. ಪೊಲೀಸರು ಅನಾವಶ್ಯಕವಾಗಿ ನಮ್ಮನ್ನು ಬಂಧಿಸಿದ್ದಾರೆ” ಎಂದು ಆಜಾದ್ ಹೇಳಿದ್ದಾರೆ.
ಆದರೆ ಪೊಲೀಸರು ಪ್ರತಿಭಟನಾಕಾರರು ದರಿಯಗಂಜ್‌ನ ಸುಭಾಷ್ ಮಾರ್ಗದಲ್ಲಿ ನಿಲ್ಲಿಸಿದ್ದ ಖಾಸಗಿ ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಆರೋಪಿಸಿದ್ದಾರೆ. ಕಲ್ಲು ತೂರಾಟ ಮತ್ತು ಪೊಲೀಸ್ ಕ್ರಮದಲ್ಲಿ ಕನಿಷ್ಠ 46 ಜನರು ಗಾಯಗೊಂಡಿದ್ದಾರೆ.
ಪೊಲೀಸ್ ಅಂದಾಜಿನ ಪ್ರಕಾರ ಸಂಜೆ 5 ಗಂಟೆಗೆ ಪ್ರತಿಭಟನಾಕಾರರ ಸಂಖ್ಯೆ ಸುಮಾರು 15,000 ಕ್ಕೆ ಏರಿತು ಮತ್ತು ಅವರು ಬ್ಯಾರಿಕೇಡ್‌ಗಳನ್ನು ಅನ್ನು ಮುರಿಯಲು ಪ್ರಾರಂಭಿಸಿದರು ಎಂದಿದ್ದರೆ. ಪೊಲೀಸ್ ವಕ್ತಾರ ಎಂ.ಎಸ್. ರಾಂಧವಾ ಮಾತನಾಡಿ, ಭದ್ರತಾ ಸಿಬ್ಬಂದಿ ಮೊದಲು ಜನಸಮೂಹವನ್ನು ಚದುರಿಸಲು ನೀರಿನ ಫಿರಂಗಿಗಳನ್ನು ಉಡಾಯಿಸಿದರು ಮತ್ತು ಆನಂತರ ಆಂದೋಲನಕಾರರು ಖಾಸಗಿ ವಾಹನವನ್ನು ಸುಟ್ಟು, ಕಲ್ಲುಗಳನ್ನು ಹೊಡೆಯಲು ಪ್ರಾರಂಭಿಸಿದರು ಎಂದಿದ್ದಾರೆ.
ಆದಾಗ್ಯೂ, ಈ ಪ್ರದೇಶದ ಕೆಲವು ಸ್ಥಳೀಯ ಜನರು ಪೊಲೀಸರ ಪ್ರತಿಕ್ರಿಯೆ ಅಸಮರ್ಪಕ ಮತ್ತು ವಿವೇಚನೆಯಿಂದ ಕೂಡಿರಲಿಲ್ಲ. ಹಿಂಸೆಗೆ ಪೊಲೀಸರೆ ಕಾರಣ ಎಂದು ಆರೋಪಿಸಿದ್ದಾರೆ.


