ಗುಜರಾತ್‌ನ ವಲ್ಸಾದ್ ಜಿಲ್ಲೆಯಲ್ಲಿ ಔರಂಗ ನದಿಗೆ ನಿರ್ಮಾಣ ಹಂತದಲ್ಲಿರುವ ಸೇತುವೆಯ ಮೇಲಿನ ಗಿರ್ಡರ್ ಕುಸಿದಿದ್ದು, ಐವರು ಕಾರ್ಮಿಕರು ಗಾಯಗೊಂಡಿದ್ದಾರೆ.
ಹಳೆಯ ಸೇತುವೆಗೆ ಸಮಾನಾಂತರವಾಗಿ ಹೊಸ ಸೇತುವೆಯನ್ನು ನಿರ್ಮಿಸಲಾಗುತ್ತಿರುವ ಕೈಲಾಶ್ ರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅಧಿಕಾರಿಗಳ ಪ್ರಕಾರ, ಗಿರ್ಡರ್‌ನ ಮೇಲಿನ ಭಾಗವನ್ನು ಹಿಡಿದಿಡಲು ಎರಡು ಕಂಬಗಳ ನಡುವೆ ಇರಿಸಲಾದ ತಾತ್ಕಾಲಿಕ ಆಧಾರವು ಇದ್ದಕ್ಕಿದ್ದಂತೆ ಜಾರಿಬಿದ್ದು, ಇಡೀ ರಚನೆಯು ಕುಸಿದು ಬಿದ್ದಿದೆ. ಗಿರ್ಡರ್ ಬಳಿ ನಿಂತಿದ್ದ ಕಾರ್ಮಿಕರು ಕೆಳಗೆ ಸಿಲುಕಿಕೊಂಡು ಗಾಯಗೊಂಡಿದ್ದಾರೆ.
ಗಾಯಾಳುಗಳನ್ನು ತ್ವರಿತವಾಗಿ ರಕ್ಷಿಸಿ 108 ಆಂಬ್ಯುಲೆನ್ಸ್ ಮೂಲಕ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ವಲ್ಸಾದ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಯುವರಾಜ್‌ಸಿನ್ಹ ಜಡೇಜಾ ಮಾತನಾಡಿ, ಈ ಯೋಜನೆಯ ಭಾಗವಾಗಿ ಕೇವಲ 15 ದಿನಗಳ ಹಿಂದೆ ಗಿರ್ಡರ್ ಅಳವಡಿಸಲಾಗಿದೆ. “ಎರಡು ಕಂಬಗಳ ನಡುವಿನ ಗಾರ್ಡ್‌ರೈಲ್ ಬೆಂಬಲ ಜಾರಿದ ಕಾರಣ ಈ ದುರದೃಷ್ಟಕರ ಅಪಘಾತ ಸಂಭವಿಸಿದೆ” ಎಂದು ಅವರು ತಿಳಿಸಿದ್ದಾರೆ.
“ಸೇತುವೆ ನಿರ್ಮಾಣದ ಸಮಯದಲ್ಲಿ ಈ ಅಪಘಾತ ಸಂಭವಿಸಿದ್ದು, ನಾಲ್ವರು ಕಾರ್ಮಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲಾ ಸುರಕ್ಷತಾ ಉಪಕರಣಗಳು ಸ್ಥಳದಲ್ಲಿದ್ದವು. ಸರ್ಕಾರಿ ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳಲಾಗುವುದು” ಎಂದು ರಸ್ತೆ ಮತ್ತು ಕಟ್ಟಡ ಇಲಾಖೆಯ ಅಧಿಕಾರಿ ಜಿಗರ್ ಪಟೇಲ್ ಹೇಳಿದ್ದಾರೆ.
ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಲ್ಸಾದ್ ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ವಿಮಲ್ ಪಟೇಲ್, “ಸ್ಥಳದಲ್ಲಿ 105 ಕಾರ್ಮಿಕರು ಇದ್ದರು. ಈ ಘಟನೆಯಲ್ಲಿ ಯಾವುದೇ ಸಾವುನೋವುಗಳು ಸಂಭವಿಸಿಲ್ಲ” ಎಂದು ಹೇಳಿದ್ದಾರೆ.
ಹಠಾತ್ ಕುಸಿತವು ಕಾರ್ಮಿಕರು ಮತ್ತು ದಾರಿಹೋಕರಲ್ಲಿ ಭೀತಿಯನ್ನು ಉಂಟುಮಾಡಿತು. ಕೆಲವೇ ನಿಮಿಷಗಳಲ್ಲಿ, ಸ್ಥಳದಲ್ಲಿ ದೊಡ್ಡ ಜನಸಮೂಹ ಜಮಾಯಿಸಿತು. ಮಮ್ಲತ್‌ದಾರ್ ಮತ್ತು ಸ್ಥಳೀಯ ಪೊಲೀಸರು ಸೇರಿದಂತೆ ಆಡಳಿತ ಅಧಿಕಾರಿಗಳು ಶೀಘ್ರದಲ್ಲೇ ಪರಿಹಾರ ಮತ್ತು ತನಿಖಾ ಪ್ರಯತ್ನಗಳ ಮೇಲ್ವಿಚಾರಣೆಗೆ ಆಗಮಿಸಿದರು.
ಸುಮಾರು 20 ಕೋಟಿ ರೂ. ವೆಚ್ಚದ ಹೊಸ ಸೇತುವೆಯನ್ನು ಉಪಗುತ್ತಿಗೆದಾರರೊಬ್ಬರು ನಿರ್ಮಿಸುತ್ತಿದ್ದಾರೆ. ಕಳೆದ ವರ್ಷಗಳ ಹಿಂದೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು. ಕಟ್ಟಡ ಕುಸಿತಕ್ಕೆ ಕಾರಣವೇನೆಂದು ಪೊಲೀಸರು ತನಿಖೆ ಆರಂಭಿಸಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.


