ಡಿಸೆಂಬರ್ 13ರಂದು ಫುಟ್ಬಾಲ್ ಆಟಗಾರ ಲಿಯೋನೆಲ್ ಮೆಸ್ಸಿ ಭೇಟಿ ನೀಡಿದ ಸಂದರ್ಭದಲ್ಲಿ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣದಲ್ಲಿ ಅವ್ಯವಸ್ಥೆ ಉಂಟಾದ ಹಿನ್ನೆಲೆ, ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರು ತನ್ನ ಸ್ಥಾನಕ್ಕೆ ಮಂಗಳವಾರ (ಡಿ.16) ರಾಜೀನಾಮೆ ನೀಡಿದ್ದಾರೆ. ಅದನ್ನು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಂಗೀಕರಿಸಿದ್ದಾರೆ.
ಘಟನೆಯ ಕುರಿತು ನಿಷ್ಪಕ್ಷಪಾತ ತನಿಖೆ ನಡೆಯಲು ಅನುವು ಮಾಡಿಕೊಡುವ ಸಲುವಾಗಿ ತನ್ನನ್ನು ಸಚಿವ ಸ್ಥಾನದಿಂದ ಬಿಡುಗಡೆ ಮಾಡುವಂತೆ ಅರೂಪ್ ಬಿಸ್ವಾಸ್ ಕೋರಿದ್ದರು. ಬಿಸ್ವಾಸ್ ಅವರ ಈ ನಿರ್ಧಾರವನ್ನು ಸಿಎಂ ಮಮತಾ ಬ್ಯಾನರ್ಜಿ ಶ್ಲಾಘಿಸಿದ್ದಾರೆ ಎಂದು ವರದಿಯಾಗಿದೆ.
ತನಿಖೆ ನಿಷ್ಪಕ್ಷಪಾತವಾಗಿ ಮುಗಿಯುವವರೆಗೆ ಸಚಿವ ಸ್ಥಾನದಿಂದ ಕೆಳಗಿಳಿಯುವ ಬಿಸ್ವಾಸ್ ಅವರ ನಿರ್ಧಾರ ಸರಿಯಾಗಿದೆ. ತನಿಖೆ ಮುಗಿಯುವವರೆಗೆ ಕ್ರೀಡಾ ಇಲಾಖೆಯನ್ನು ನಾನು ನೋಡಿಕೊಳ್ಳುತ್ತೇನೆ ಎಂದು ಮಮತಾ ಬ್ಯಾನರ್ಜಿ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ಕ್ರೀಡಾ ಇಲಾಖೆಯನ್ನು ಸಿಎಂ ಮಮತಾ ಬ್ಯಾನರ್ಜಿ ಅವರೇ ನೇರವಾಗಿ ನೋಡಿಕೊಳ್ಳುತ್ತಾರೆ. ಬಿಸ್ವಾಸ್ ಅವರು ವಿದ್ಯುತ್ ಇಲಾಖೆಯ ಸಚಿವರೂ ಹೌದು. ಆ ಹುದ್ದೆಯಲ್ಲಿ ಅವರು ಮುಂದುವರೆಯಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಕ್ತಾರ ಕುನಾಲ್ ಘೋಷ್ ಹೇಳಿದ್ದಾರೆ.
‘ಗೋಟ್ ಇಂಡಿಯಾ ಟೂರ್ 2025’ರ ಮೊದಲ ಹಂತವಾಗಿ ಶನಿವಾರ (ಡಿ.13) ಬೆಳಿಗ್ಗೆ 11:30ರ ಸುಮಾರಿಗೆ ಮೆಸ್ಸಿ ಕೋಲ್ಕತ್ತಾದ ಸಾಲ್ಟ್ ಲೇಕ್ ಕ್ರೀಡಾಂಗಣ ತಲುಪಿದ್ದರು. ಅವರೊಂದಿಗೆ ಅರ್ಜೆಂಟೀನಾ ತಂಡದ ಸಹ ಆಟಗಾರರಾದ ಲೂಯಿಸ್ ಸುವಾರೆಜ್ ಮತ್ತು ರೊಡ್ರಿಗೋ ಡಿ ಪಾಲ್ ಕೂಡ ಇದ್ದರು. ಮೆಸ್ಸಿ ಕ್ರೀಡಾಂಗಣದಲ್ಲಿ ಜನರತ್ತ ಕೈ ಬೀಸಿ, ಸಣ್ಣ ಗೌರವ ಸ್ವೀಕರಿಸಿ ಬಳಿಕ ಆಟಗಾರರು ಮತ್ತು ಗಣ್ಯರೊಂದಿಗೆ ಸಂವಾದ ನಡೆಸಿದ್ದರು.
ಕೇವಲ 10-20 ನಿಮಿಷಗಳಷ್ಟೇ ಇದ್ದು ಬೇಗನೇ ಹೊರಟು ಹೋಗಿದ್ದರು. ಇದರಿಂದ 4 ರಿಂದ 18 ಸಾವಿರದವರೆಗೆ ಪಾವತಿಸಿ ಟಿಕೆಟ್ ಪಡೆದಿದ್ದ ಅಭಿಮಾನಿಗಳಿಗೆ ಮೆಸ್ಸಿಯನ್ನು ಸರಿಯಾಗಿ ನೋಡಲು ಸಾಧ್ಯವಾಗಿರಲಿಲ್ಲ. ಕಾರಣ, ರಾಜಕಾರಣಿಗಳು, ಸೆಲೆಬ್ರಿಟಿಗಳು, ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಅವರನ್ನು ಬಿಗಿಯಾಗಿ ಸುತ್ತುವರಿದಿದ್ದರು.
ಇದರಿಂದ ನಿರಾಸೆಗೊಂಡ ಪ್ರೇಕ್ಷಕರು ಜೋರಾಗಿ ಕೂಗಲು ಶುರು ಮಾಡಿದ್ದರು. ನೀರಿನ ಬಾಟಲ್‌ಗಳು, ಕುರ್ಚಿಗಳು ಮತ್ತು ಇತರ ವಸ್ತುಗಳನ್ನು ಮೈದಾನಕ್ಕೆ ಎಸೆದಿದ್ದರು. ಕೆಲವರು ಬ್ಯಾರಿಕೇಡ್‌ಗಳನ್ನು ಮುರಿದು ಮೈದಾನಕ್ಕೆ ನುಗ್ಗಿದ್ದರು. ಬ್ಯಾನರ್, ಹೋರ್ಡಿಂಗ್ಸ್, ಮತ್ತು ಕುಳಿತುಕೊಳ್ಳುವ ಕುರ್ಚಿಗಳನ್ನು ಹಾನಿಗೊಳಿಸಿದ್ದರು. ಈ ವೇಳೆ ಪೊಲೀಸರು ಲಘು ಲಾಠಿ ಪ್ರಹಾರ ಮಾಡಿ ಗಲಾಟೆ ನಿಯಂತ್ರಿಸಿದ್ದರು.
ಸಿಎಂ ಮಮತಾ ಬ್ಯಾನರ್ಜಿ ಅವರು ಕಳಪೆ ವ್ಯವಸ್ಥೆಗೆ ಆಘಾತ ವ್ಯಕ್ತಪಡಿಸಿ, ಮೆಸ್ಸಿ ಮತ್ತು ಅಭಿಮಾನಿಗಳಿಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ. ಘಟನೆಯ ತನಿಖೆಗೆ ಉನ್ನತ ಮಟ್ಟದ ಸಮಿತಿ (ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ) ಘೋಷಿಸಿದ್ದಾರೆ. ಈ ಸಮಿತಿ ಘಟನೆಗೆ ಕಾರಣ ತಿಳಿಸಲಿದೆ ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟುವ ಕ್ರಮಗಳನ್ನು ಶಿಫಾರಸು ಮಾಡಲಿದೆ.
ಪೊಲೀಸರು ಮುಖ್ಯ ಸಂಘಟಕ ಸತಾದ್ರು ದತ್ತ ಅವರನ್ನು ಕಳಪೆ ವ್ಯವಸ್ಥೆಗಾಗಿ ಬಂಧಿಸಿದ್ದಾರೆ. ಅವರಿಗೆ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಡಿಜಿಪಿ ರಾಜೀವ್ ಕುಮಾರ್ ಅವರು ಸಂಘಟಕರು ಟಿಕೆಟ್ ಹಣ ಮರುಪಾವತಿಗೆ ಲಿಖಿತ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ರಾಜ್ಯಪಾಲ ಸಿ.ವಿ ಆನಂದ ಬೋಸ್ ಸರ್ಕಾರದಿಂದ ವಿವರವಾದ ವರದಿ ಕೇಳಿದ್ದು, ವ್ಯವಸ್ಥೆಯ ಬಗ್ಗೆ ಟೀಕೆ ವ್ಯಕ್ತಪಡಿಸಿದ್ದಾರೆ.
ಘಟನೆಯ ಬಳಿಕ ಆಡಳಿತರೂಡ ಟಿಎಂಸಿ ಮತ್ತು ವಿಪಕ್ಷ ಬಿಜೆಪಿ ನಡುವೆ ರಾಜಕೀಯ ವಾಕ್ಸಮರ ನಡೆಯುತ್ತಿದೆ.


