ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಪಟ್ಟಣದಲ್ಲಿ ಸೋಮವಾರ (ಡಿ.16) ಕ್ಷುಲ್ಲಕ ಕಾರಣಕ್ಕೆ ಮೂವರು ಮುಸ್ಲಿಂ ವಿದ್ಯಾರ್ಥಿಗಳಿಗೆ ಆಭರಣ ಮಳಿಗೆಯ ವ್ಯವಸ್ಥಾಪಕ ಹಲ್ಲೆ ನಡೆಸಿರುವ ಬಗ್ಗೆ ವರದಿಯಾಗಿದೆ.
ಸಂತೆಕಟ್ಟೆ ಬಳಿ ಇರುವ ಪೃಥ್ವಿ ಆಭರಣ ಮಳಿಗೆಯ ವ್ಯವಸ್ಥಾಪಕ ಅಶೋಕ್ ಬಂಗೇರ ಹಾಗೂ ಸಿಬ್ಬಂದಿ ಮೂವರು ವಿದ್ಯಾರ್ಥಿಗಳ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪದ ಮೇಲೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವೇಣೂರು ಸಮೀಪದ ಮೂವರು ವಿದ್ಯಾರ್ಥಿಗಳು ಶಾಲೆಗೆ ರಜೆ ಹಾಕಿ, ಬೆಳ್ತಂಗಡಿ ಪೇಟೆಯಲ್ಲಿ ಪ್ರತಿ ಸೋಮವಾರ ನಡೆಯುವ ಸಂತೆಗೆ ಹೋಗಿದ್ದರು. ಅಲ್ಲಿ ಸುತ್ತಾಡಿದ ಬಳಿಕ ಬೆಳ್ತಂಗಡಿ ಸಂತೆಕಟ್ಟೆ ಬಳಿ ಇರುವ ಪೃಥ್ವಿ ಆಭರಣ ಮಳಿಗೆಯ ಪಕ್ಕದಲ್ಲಿ ಕುಳಿತು ಮೊಬೈಲ್‌ನಲ್ಲಿ ಆಟವಾಡುತ್ತಿದ್ದರು. ಈ ವೇಳೆ ವಿದ್ಯಾರ್ಥಿಗಳ ಹೆಸರನ್ನು ಕೇಳಿ ಮುಸ್ಲಿಂ ವಿದ್ಯಾರ್ಥಿಗಳು ಎಂದು ಗೊತ್ತಾದಾಗ, ಅವರನ್ನು ನಿಂದಿಸಿ, ಕೋಣೆಯಲ್ಲಿ ಕೂಡಿ ಹಾಕಿ ಎರಡು ಗಂಟೆಗಳ ಕಾಲ ಹಲ್ಲೆ ನಡೆಸಿರುವ ಆರೋಪ ಕೇಳಿಬಂದಿದೆ. ಹಲ್ಲೆ ನಡೆಸಿದ್ದನ್ನು ಪ್ರಶ್ನಿಸಲು ಹೋಗಿದ್ದ ವಿದ್ಯಾರ್ಥಿಗಳ ಪೋಷಕರೊಂದಿಗೆ ಆಭರಣ ಮಳಿಗೆಯ ವ್ಯವಸ್ಥಾಪಕ ಸಹಿತ ಇತರೆ ಸಿಬ್ಬಂದಿ ವಾಗ್ವಾದ ನಡೆಸಿದ್ದಾರೆ ಎನ್ನಲಾಗಿದೆ.
ಘಟನೆಯ ವೇಳೆ ಮೂವರು ವಿದ್ಯಾರ್ಥಿಗಳ ಪೈಕಿ ಓರ್ವ ವಿದ್ಯಾರ್ಥಿ ಹಲ್ಲೆಯಿಂದ ತಪ್ಪಿಸಿಕೊಂಡು ನಾಪತ್ತೆಯಾಗಿದ್ದನು. ಆ ಬಳಿಕ ರಾತ್ರಿ ಹುಡುಕಾಡಿದಾಗ ಪೋಷಕರ ಕೈಗೆ ಸೇರಿದ್ದಾನೆ. ಸದ್ಯ ಹಲ್ಲೆಯಿಂದ ಗಾಯಗೊಂಡಿರುವ ಮೂವರು ವಿದ್ಯಾರ್ಥಿಗಳು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ಈದಿನ.ಕಾಂ ವರದಿ ಮಾಡಿದೆ.


