ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ದ ಜಾರಿ ನಿರ್ದೇನಾಲಯ (ಇಡಿ) ದಾಖಲಿಸಿದ್ದ ಹಣ ಅಕ್ರಮ ವರ್ಗಾವಣೆ (ಪಿಎಂಎಲ್‌ಎ) ದೂರು ಸ್ವೀಕರಿಸಲು ದೆಹಲಿ ನ್ಯಾಯಾಲಯ ನಿರಾಕರಿಸಿರುವುದನ್ನು ಕಾಂಗ್ರೆಸ್ ಸ್ವಾಗತಿಸಿದೆ.
ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ರಾಜಕೀಯ ಕಾರಣಕ್ಕೆ ನಮ್ಮ ನಾಯಕರ ಮೇಲೆ ಪ್ರಕರಣ ದಾಖಲಿಸಿದೆ ಎಂಬ ನಮ್ಮ ದೀರ್ಘ ಸಮಯದ ಆರೋಪವನ್ನು ನ್ಯಾಯಾಲಯದ ಆದೇಶ ಪುಷ್ಠೀಕರಿಸಿದೆ ಎಂದು ಕಾಂಗ್ರೆಸ್ ನಾಯಕರು ಹೇಳಿದ್ದಾರೆ.
ನಿನ್ನೆ (ಡಿ.16 ಮಂಗಳವಾರ) ದೆಹಲಿಯ ರೋಸ್ ಅವೆನ್ಯೂ ವಿಚಾರಣಾ ನ್ಯಾಯಾಲಯ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಪರ ಆದೇಶ ನೀಡಿದೆ. ಈ ಹಿನ್ನೆಲೆ, ಕೇಂದ್ರದ ಬಿಜೆಪಿ ಸರ್ಕಾರದ ವಿರುದ್ದ ಇಂದು (ಡಿ.17 ಬುಧವಾರ) ಕಾಂಗ್ರೆಸ್ ದೇಶದ ವಿವಿದೆಡೆ ಪ್ರತಿಭಟನೆ ನಡೆಸಿದರು.
ದೆಹಲಿಯಲ್ಲಿ ಕರೆದಿದ್ದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಡೆಸಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, “ನ್ಯಾಷನಲ್ ಹೆರಾಲ್ಡ್ ಪ್ರಕರಣದ ಉದ್ದೇಶ ಗಾಂಧಿ ಕುಟುಂಬಕ್ಕೆ ಕಿರುಕುಳ ಕೊಡುವುದು ಮತ್ತು ವಿಪಕ್ಷಗಳನ್ನು ಗುರಿಯಾಗಿಸುವುದು” ಎಂದರು.
“ಇದು ಸೇಡಿನ ಪ್ರಕರಣವಾಗಿದೆ. ನ್ಯಾಯಾಲಯದ ತೀರ್ಪನ್ನು ನಾವು ಸ್ವಾಗತಿಸುತ್ತೇವೆ. ಸತ್ಯಕ್ಕೆ ಯಾವಾಗಲೂ ಜಯವಾಗುತ್ತದೆ” ಎಂದು ಹೇಳಿದರು.
“ನ್ಯಾಯಾಲಯದ ತೀರ್ಪಿನ ಹಿನ್ನೆಲೆ, ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಕಾರಣ, ತೀರ್ಪು ಅವರಿಗೆ ಕಪಾಳಮೋಕ್ಷವಾಗಿದೆ. ಅವರು ರಾಜೀನಾಮೆ ನೀಡಬೇಕು ಮತ್ತು ಈ ರೀತಿ ಜನರಿಗೆ ಕಿರುಕುಳ ಕೊಡುವುದನ್ನು ನಿಲ್ಲಿಸಬೇಕು. ಈ ರೀತಿ ನಡೆದುಕೊಂಡರೆ ಜನರು ಅದನ್ನು ಒಪ್ಪುವುದಿಲ್ಲ ಎಂಬುವುದನ್ನು ಅವರನ್ನು ತಿಳಿದುಕೊಳ್ಳಬೇಕು. ಕೇಂದ್ರ ತನಿಖಾ ಸಂಸ್ಥೆಗಳನ್ನು ಅವರು ರಾಜಕೀಯ ಉದ್ದೇಶಕ್ಕೆ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ” ಎಂದು ಖರ್ಗೆ ವಾಗ್ದಾಳಿ ನಡೆಸಿದರು.
ಪತ್ರಿಕಾಗೋಷ್ಠಿಯಲ್ಲಿ ಮಲ್ಲಿಕಾರ್ಜುನ ಖರ್ಗೆ ಜೊತೆ, ಕಾಂಗ್ರೆಸ್ ನಾಯಕರಾದ ಜೈರಾಮ್ ರಮೇಶ್, ಅಭಿಷೇಕ್ ಮನು ಸಿಂಘ್ವಿ, ಕೆ.ಸಿ ವೇಣುಗೋಪಾಲ್, ಪವನ್ ಖೇರಾ ಇದ್ದರು.
ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಅವರು, ಸೇಡಿನ ರಾಜಕೀಯದ ಆರೋಪವನ್ನು ಪುನರುಚ್ಚರಿಸಿದರು. “ವಿರೋಧ ಪಕ್ಷಗಳನ್ನು ನಿರಂತರವಾಗಿ ಗುರಿಯಾಗಿಸಿಕೊಳ್ಳುವ ಬಿಜೆಪಿ ಸರ್ಕಾರದ ವಿರುದ್ದ ದೇಶದಾದ್ಯಂತ ನಮ್ಮ ಪಕ್ಷದ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ” ಎಂದು ಹೇಳಿದರು.
“ನಾವು ಸೇಡಿನ ರಾಜಕೀಯವನ್ನು ಬಯಲು ಮಾಡುತ್ತೇವೆ. ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶಗೊಂಡಿದ್ದಾರೆ. ದೇಶದಾದ್ಯಂತ ಅವರು ತಮ್ಮ ಶಕ್ತಿ ಪ್ರದರ್ಶನ ಮಾಡಲಿದ್ದಾರೆ” ಎಂದು ತಿಳಿಸಿದರು.
ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಭಾಗಿಯಾಗಿದ್ದಾರೆ ಎನ್ನಲಾದ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ (ಇಡಿ)ದ ಹಣ ಅಕ್ರಮ ವರ್ಗಾವಣೆ ದೂರನ್ನು ಪರಿಗಣಿಸಲು ದೆಹಲಿ ನ್ಯಾಯಾಲಯ ಮಂಗಳವಾರ (ಡಿ. 16) ನಿರಾಕರಿಸಿದೆ.
ರೋಸ್ ಅವೆನ್ಯೂ ನ್ಯಾಯಾಲಯದ ವಿಶೇಷ ನ್ಯಾಯಾಧೀಶ ವಿಶಾಲ್ ಗೋಗ್ನೆ ಈ ಕುರಿತು ಆದೇಶ ಪ್ರಕಟಿಸಿದ್ದಾರೆ.
ಇಡಿ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ವಿರುದ್ದ ಸಲ್ಲಿಸಿರುವ ಪ್ರಾಸಿಕ್ಯೂಷನ್ ದೂರು ಕಾನೂನುಬದ್ಧವಾಗಿಲ್ಲ. ಏಕೆಂದರೆ, ಅದು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‌ಎ) ಅಡಿಯಲ್ಲಿ ನಿಗದಿತ ಅಪರಾಧಕ್ಕೆ ಸಂಬಂಧಿಸಿದ ಎಫ್‌ಐಆರ್ ಅನ್ನು ಆಧರಿಸಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಹಣ ಅಕ್ರಮ ವರ್ಗಾವಣೆ ಪ್ರಕರಣದ ಪ್ರಕ್ರಿಯೆಗಳು ಸಂಜ್ಞೇ ಪರಿಗಣಿಸಿ ನಡೆಸಲಾಗಿದೆ ಮತ್ತು ಸಮನ್ಸ್ ಆದೇಶವನ್ನು ಡಾ. ಸುಬ್ರಮಣಿಯನ್ ಸ್ವಾಮಿ ಅವರು ಸಿಆರ್‌ಪಿಸಿ ಸೆಕ್ಷನ್ 200 ಅಡಿಯಲ್ಲಿ ಸಲ್ಲಿಸಿದ ಖಾಸಗಿ ದೂರಿನ ಮೇರೆಗೆ ನೀಡಲಾಗಿದೆಯೇ ಹೊರತು, ಎಫ್‌ಐಆರ್ ಮೇಲೆ ಅಲ್ಲ ಎಂದು ನ್ಯಾಯಾಲಯ ಹೇಳಿದೆ.


