ವೈದ್ಯೆಯ ಹಿಜಾಬ್ ಎಳೆದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತು ಈ ಘಟನೆಯ ಕುರಿತು ಮಾತನಾಡುವಾಗ ಮಹಿಳೆಯನ್ನು ಅವಮಾನಿಸಿದ ಉತ್ತರ ಪ್ರದೇಶದ ಸಂಪುಟ ಸಚಿವ ಸಂಜಯ್ ನಿಶಾದ್ ವಿರುದ್ದ ಲಕ್ನೋದ ಕೈಸರ್‌ಬಾಗ್ ಪೊಲೀಸ್ ಠಾಣೆಯಲ್ಲಿ ಬುಧವಾರ (ಡಿ.17) ದೂರು ದಾಖಲಿಸಲಾಗಿದೆ.
ಸಮಾಜವಾದಿ ಪಕ್ಷ (ಎಸ್‌ಪಿ)ದ ನಾಯಕಿ ಸುಮಯ್ಯಾ ರಾಣಾ ತನ್ನ ವಕೀಲರ ಜೊತೆ ಠಾಣೆಗೆ ತೆರಳಿ ದೂರು ನೀಡಿದ್ದು, ಇಬ್ಬರ ವಿರುದ್ದವೂ ಎಫ್‌ಐಆರ್ ದಾಖಲಿಸಿ ಕ್ರಮ ಕೈಗೊಳ್ಳಲು ಮನವಿ ಮಾಡಿದ್ದಾರೆ.
ಆಯುಷ್ ವೈದ್ಯೆಯಾಗಿ ಆಯ್ಕೆಗೊಂಡ ಮುಸ್ಲಿಂ ಮಹಿಳೆಗೆ ನೇಮಕಾತಿ ಪತ್ರ ವಿತರಿಸುವಾಗ ಬಿಹಾರ ಸಿಎಂ ನಿತೀಶ್ ಕುಮಾರ್ ಆಕೆಯ ಹಿಜಾಬ್ ಎಳೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಭಾರೀ ಆಕ್ರೋಶ ವ್ಯಕ್ತವಾಗಿದೆ. ಸಿಎಂ ಮಹಿಳೆಯೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಮತ್ತು ಸಾರ್ವಜನಿಕವಾಗಿ ಅವಮಾನಿಸಿದ್ದಾರೆ ಎಂದು ರಾಜಕೀಯ ನಾಯಕರು ಸೇರಿದಂತೆ ಸಾವಿರಾರು ಜನರು ಕಿಡಿಕಾರಿದ್ದಾರೆ.
ದೂರು ದಾಖಲಿಸಿದ ಬಳಿಕ ಸುದ್ದಿ ಸಂಸ್ಥೆ ಎಎನ್‌ಐ ಜೊತೆ ಮಾತನಾಡಿದ ಸುಮಯ್ಯಾ ರಾಣಾ, “ನಿತೀಶ್ ಕುಮಾರ್ ನಡವಳಿಕೆ ಒಂದು ಅಪಾಯಕಾರಿ ಬೆಳವಣಿಗೆಗೆ ಮುನ್ನುಡಿ ಬರೆಯಲಿದೆ. ಸಾಂವಿಧಾನಿಕ ಹುದ್ದೆಯಲ್ಲಿರುವ ವ್ಯಕ್ತಿಯೊಬ್ಬರು ಈ ರೀತಿ ವರ್ತಿಸುವುದು ಇತರರು ಅಂತಹ ಕೃತ್ಯಗಳನ್ನು ನಡೆಸಲು ಪ್ರೇರೇಪಿಸಿದಂತೆ” ಎಂದಿದ್ದಾರೆ.
ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ ಮಹಿಳೆಯನ್ನು ನಿಂದಿಸಿ ಹೇಳಿಕೆ ನೀಡಿದ್ದಾರೆ. “ಕೇವಲ ಹಿಜಾಬ್ ಎಳೆದಿದ್ದಕ್ಕೆ ಇಷ್ಟೊಂದು ಆಕ್ರೋಶ ಏಕೆ? ಬೇರೆಲ್ಲಾದರು ಮುಟ್ಟಿದ್ದರೆ ಏನಾಗುತ್ತಿತ್ತು ಎಂದಿದ್ದಾರೆ. ಈ ಕಾರಣಕ್ಕೆ ಅವರ ವಿರುದ್ದವೂ ದೂರು ದಾಖಲಿಸಿದ್ದೇನೆ” ಎಂದು ಸುಮಯ್ಯಾ ತಿಳಿಸಿದ್ದಾರೆ.
ಸುಮಯ್ಯಾ ಅವರ ಜೊತೆಗಿದ್ದ ವಕೀಲ ಮಿಶಾಮ್ ಝೈದಿ ಮಾತನಾಡಿ, “ಉತ್ತರ ಪ್ರದೇಶದ ಸಚಿವ ಸಂಜಯ್ ನಿಶಾದ್ ನೀಡಿರುವ ಹೇಳಿಕೆ ಗಂಭೀರ ಅಪರಾಧವಾಗಿದೆ. ಅವರು ಮಹಿಳೆಯ ಮಾನನಷ್ಟಗೊಳಿಸಿದ್ದಾರೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ. ಬಿಎನ್‌ಎಸ್ ಸೆಕ್ಷನ್ 153ಎ ಅಡಿಯಲ್ಲಿ ಇದು ಸ್ಪಷ್ಟ ಅಪರಾಧವಾಗಿದೆ. ಏಕೆಂದರೆ, ಸಚಿವ ನಿಶಾದ್ ಉದ್ದೇಶಪೂರ್ವಕವಾಗಿ ಗಲಭೆಯನ್ನು ಪ್ರಚೋದಿಸುವ, ಅಶಾಂತಿ ಸೃಷ್ಟಿಸುವ ಮತ್ತು ರಾಜ್ಯದ ಕಾನೂನು ಸುವ್ಯವಸ್ಥೆಯನ್ನು ಕದಡುವಂತಹ ಹೇಳಿಕೆ ನೀಡಿದ್ದಾರೆ” ಎಂದು ಹೇಳಿದ್ದಾರೆ.


