ಗೃಹಲಕ್ಷಿ ಯೋಜನೆಯ ಹಣ ಬಿಡುಗಡೆ ಸಂಬಂಧ ಸಚಿವರು ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ ಎಂಬ ವಿಚಾರ ಇಂದು (ಡಿ.17 ಬುಧವಾರ) ವಿಧಾನಸಭೆಯಲ್ಲಿ ದೊಡ್ಡ ಮಟ್ಟದ ವಾಗ್ವಾದ, ಆರೋಪ-ಪ್ರತ್ಯಾರೋಪ, ಗದ್ದಲ, ಪ್ರತಿಭಟನೆ, ಸಭಾತ್ಯಾಗ ಮತ್ತು ಸಚಿವರ ಕ್ಷಮೆಯಾಚನೆಗೆ ಕಾರಣವಾಯಿತು.
ಬೆಳಿಗ್ಗೆ ವಿಧಾನಸಭೆ ಕಲಾಪ ಆರಂಭಗೊಳ್ಳುತ್ತಿದ್ದಂತೆ ವಿಪಕ್ಷ ನಾಯಕ ಆರ್. ಅಶೋಕ್, ಮೂರು ದಿನಗಳಿಂದ ಸಚಿವರು ಸದನಕ್ಕೆ ಬಂದಿಲ್ಲ. ನಮ್ಮ ಪ್ರಸ್ತಾಪಕ್ಕೆ ಉತ್ತರವನ್ನೂ ನೀಡಿಲ್ಲ. ಕೂಡಲೇ ಅವರನ್ನು ಸದನಕ್ಕೆ ಕರೆಸಿ ಉತ್ತರ ಕೊಡಿಸಬೇಕು. ಅಲ್ಲದೆ, ತಪ್ಪು ಉತ್ತರ ನೀಡಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ರಾಜ್ಯದ ಜನತೆಯ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯರು, ಈಗಾಗಲೇ ಸಿಎಂ ಉತ್ತರ ನೀಡಿದ್ದು, ಪ್ರಶ್ನೋತ್ತರ ಕಲಾಪವನ್ನು ಕೈಗೆತ್ತಿಕೊಳ್ಳಿ ಎಂದು ಸ್ಪೀಕರ್‌ಗೆ ಆಗ್ರಹಿಸಿದರು.
ಈ ವೇಳೆ ಆಡಳಿತ ಮತ್ತು ವಿಪಕ್ಷ ಸದಸ್ಯರ ನಡುವೆ ವಾಗ್ವಾದ ಉಂಟಾಯಿತು. ಗದ್ದಲ ಹೆಚ್ಚಾದಾಗ ಸ್ಪೀಕರ್ ಖಾದರ್ ಕಲಾಪನ್ನು 10 ನಿಮಿಷ ಮುಂದೂಡಿದರು. ಮತ್ತೆ ಸಭೆ ಸೇರಿದಾಗ ಸಚಿವರ ಉತ್ತರ ಮತ್ತು ಕ್ಷಮೆಯಾಚನೆಗೆ ಆಗ್ರಹಿಸಿ ವಿಪಕ್ಷ ಸದಸ್ಯರು ಧರಣಿ ಮುಂದುವರಿಸಿದರು. ಈ ವೇಳೆ ಸ್ಪೀಕರ್ ಖಾದರ್ ವಿಪಕ್ಷ ಸದಸ್ಯರು ತಮ್ಮ ಆಸನಗಳಿಗೆ ತೆರಳಲು ಮನವಿ ಮಾಡಿದರು. ಸ್ಪೀಕರ್ ಮನವಿಗೆ ಸ್ಪಂದಿಸಿ ವಿಪಕ್ಷ ಸದಸ್ಯರು ಧರಣಿ ಹಿಂಪಡೆದರು.
ನಂತರ ಉತ್ತರ ನೀಡಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಿಗೆ ಫೆಬ್ರವರಿ ಮತ್ತು ಮಾರ್ಚ್ ತಿಂಗಳ ಹಣ ಬಂದಿಲ್ಲ ಎಂದು ಬಿಜೆಪಿಯ ಮಹೇಶ್ ಟೆಂಗಿನಕಾಯಿ ತಿಳಿಸಿದ್ದಾರೆ. ಆದರೆ, ರಾಜ್ಯದ 1.26 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳಿಗೆ ಒಟ್ಟು 52,416 ಕೋಟಿ ರೂ.ಗಳನ್ನು ಒಟ್ಟು 23 ಕಂತುಗಳಲ್ಲಿ ಪ್ರತಿ ಮನೆಗೆ ಈವರೆಗೆ 46 ಸಾವಿರ ರೂ.ಗಳನ್ನು ಪಾವತಿಸಲಾಗಿದೆ. ಆಗಸ್ಟ್ ತಿಂಗಳವರೆಗೆ ಹಣ ಪಾವತಿಸಲಾಗಿದೆ ಎಂದರು.
ನಾನು ಮೊದಲ ಬಾರಿಗೆ ಸಚಿವೆಯಾಗಿ ಪೂಜ್ಯ ಭಾವನೆಯಿಂದ ಕೆಲಸ ಮಾಡುತ್ತಿದ್ದೇನೆ. ಅಧಿಕಾರಿಗಳನ್ನು ವಿಚಾರಣೆ ಮಾಡಿದಾಗ 2 ತಿಂಗಳ ಹಣ ಪಾವತಿ ಆಗಿಲ್ಲ ಎಂದು ಗೊತ್ತಾಗಿದೆ. ಸದನಕ್ಕೆ ತಪ್ಪು ಮಾಹಿತಿ ನೀಡುವ ಉದ್ದೇಶವಿರಲಿಲ್ಲ. ಆರ್ಥಿಕ ಇಲಾಖೆಯೊಂದಿಗೆ ಚರ್ಚಿಸಿ ಶೀಘ್ರದಲ್ಲೆ ಹಣ ಪಾವತಿಸಲಾಗುವುದು. ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುವೆ ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟಣೆ ನೀಡಿದರು.
ಇದಕ್ಕೆ ಆಕ್ಷೇಪಿಸಿದ ವಿಪಕ್ಷ ಉಪನಾಯಕ ಅರವಿಂದ ಬೆಲ್ಲದ್, ಸಚಿವರು ಕ್ಷಮೆ ಕೇಳಿಲ್ಲ. ಸದನಕ್ಕೆ ತಪ್ಪು ಉತ್ತರ ನೀಡಿದ್ದು, ಕ್ಷಮೆ ಕೇಳಿದರೆ ಸಣ್ಣವರಾಗುತ್ತಾರಾ? ಪ್ರಶ್ನಿಸಿದರು
ಇದಕ್ಕೆ ಧ್ವನಿಗೂಡಿಸಿದ ಬಿಜೆಪಿ ಶಾಸಕ ಆರಗ ಜ್ಞಾನೇಂದ್ರ, ಇಲಾಖೆ ಅಧಿಕಾರಿಗಳಿಗೆ ಹಣ ಪಾವತಿ ಮಾಡದೆ ಇರುವುದು ಗೊತ್ತಿಲ್ಲವೇ? ಅಧಿಕಾರಿಗಳು ಸಚಿವರ ಬಾಯಲ್ಲಿ ಸುಳ್ಳು ಹೇಳಿಸಿದ್ದಾರೆ. ಅವರಿಗೆ ಶಿಕ್ಷೆ ಇಲ್ಲವೇ? ಎಂದು ಪ್ರಶ್ನಿಸಿದರು. ಬಿಜೆಪಿ ಸದಸ್ಯರ ಆರೋಪಕ್ಕೆ ತಿರುಗೇಟು ನೀಡಿದ ಸಚಿವ ಬೈರತಿ ಸುರೇಶ್, ರಾಜ್ಯದ ಜನರಿಗೆ ಒಂದು ರೂಪಾಯಿಯನ್ನು ಬಿಜೆಪಿಯವರು ನೀಡಿಲ್ಲ. ಬಡ ಜನರಿಗೆ ಒಂದು ಕೆಜಿ ಅಕ್ಕಿಯನ್ನು ಕೊಟ್ಟಿಲ್ಲ. ಇವರು ನಮಗೆ ಬುದ್ಧಿಹೇಳುವ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಬಿಜೆಪಿ ಅಧಿಕಾರದಲ್ಲಿದ್ದ ವೇಳೆ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ರೂ.ಹಣ ನೀಡುತ್ತೇವೆಂದು ಘೋಷಣೆ ಮಾಡಿ ಬಿಡಿಗಾಸು ಹಣವನ್ನು ನೀಡಲಿಲ್ಲ. ನರೇಗಾ, ಜಲಜೀವನ್ ಮಿಷನ್ ಸೇರಿದಂತೆ ಇನ್ನಿತರ ಯೋಜನೆಗಳ ಹಣವನ್ನು ಬಿಡುಗಡೆ ಮಾಡಿಲ್ಲ. ಹಾಗೆಂದು ಕೇಂದ್ರದ ಬಿಜೆಪಿ ಸರ್ಕಾರ ದಿವಾಳಿಯಾಗಿದೆ ಎಂದು ಹೇಳಲು ಆಗುತ್ತದೆಯೇ?. ನಾವು ಕೊಟ್ಟ ಮಾತಿಗೆ ಬದ್ಧವಾಗಿದ್ದು, ನಮ್ಮ ಗ್ಯಾರಂಟಿ ಯೋಜನೆಗಳು ದೇಶಕ್ಕೆ ಮಾದರಿಯಾಗಿವೆ ಎಂದರು.
ಮತ್ತೆ ಎದ್ದು ನಿಂತ ಸಚಿವೆ ಹೆಬ್ಬಾಳ್ಕರ್, 52,416 ಕೋಟಿ ಹಣವನ್ನು ನಾವು ಮಹಿಳೆಯರಿಗೆ ನೀಡಿದ್ದೇವೆ. ನಾನು ಈಗಾಗಲೇ ಹೇಳಿದಂತೆ ಹಣ ಪಾವತಿಯಾಗದ ವಿಚಾರಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ. ವಿಪಕ್ಷ ಸದಸ್ಯರಿಗೆ ನೋವಾಗಿದ್ದರೆ ಕ್ಷಮೆ ಯಾಚಿಸುತ್ತೇನೆ. ಮಹಿಳೆ ಎಂದು ನನ್ನನ್ನು ಗುರಿಯಾಗಿಸಬೇಡಿ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಬಿಜೆಪಿ ಸದಸ್ಯ ಸುರೇಶ್ ಕುಮಾರ್, ವಿಕ್ಟಿಮ್ ಕಾರ್ಡ್ ಬಳಸಬೇಡಿ. ನಾನು ಮಹಿಳೆ-ಪುರುಷ, ಆ ಜಾತಿ-ಈ ಜಾತಿ ಎನ್ನುವುದು ಇಲ್ಲಿ ಪ್ರಶ್ನೆಯಲ್ಲ. ಉತ್ತರ ಕೊಡುವ ಜವಾಬ್ದಾರಿ ಅವರ ಮೇಲಿದೆ ಎಂದರು.
ಈ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, ನೀವು (ಸುರೇಶ್ ಕುಮಾರ್) ಸಂಸದೀಯ ವ್ಯವಹಾರಗಳ ಸಚಿವರಾಗಿದ್ದವರು. ನಾವು ಮಂತ್ರಿಗಳು ತಪ್ಪು ಉತ್ತರ ಕೊಟ್ಟರೆ ಅದನ್ನು ತಿದ್ದಿಕೊಳ್ಳುವ ಅವಕಾಶ ಇದೆ, ಅದು ನಮ್ಮ ನಡಾವಳಿಯಲ್ಲಿ ಇದೆ. ಹೀಗಿರುವಾಗ ಆ ಅವಕಾಶ ಬಳಸಬಾರದು ಎಂದರೆ ಹೇಗೆ? ಅವರು ಮಹಿಳೆಯನ್ನು ಗುರಿಯಾಗಿಸುತ್ತಿದ್ದಾರೆ ಎಂದು ಹೇಳಿದರು.
ಈ ವೇಳೆ ಮಾತನಾಡಿದ ಸುರೇಶ್ ಕುಮಾರ್, ಮಹಿಳೆ ಮಹಿಳೆ ಎಂದು ಹೇಳಬೇಡಿ. ಹೆಚ್.ಕೆ ಪಾಟೀಲ್ ಸಚಿವರಾಗಿದ್ರೂ ನಾವು ಈ ಪ್ರಶ್ನೆ ಕೇಳುತ್ತಿದ್ದೆವು. ಇದು ಲಿಂಗ, ಜಾತಿ, ಧರ್ಮದ ಪ್ರಶ್ನೆಯಲ್ಲ. ಇದು ಒಂದು ಕಾಲು ಕೋಟಿ ಜನರ ಹಣದ ಪ್ರಶ್ನೆ ಎಂದರು.
ಆಗ ಶರಣ್ ಪ್ರಕಾಶ್ ಪಾಟೀಲ್ ಮತ್ತು ಸುರೇಶ್ ಕುಮಾರ್ ನಡುವೆ ವಾಗ್ವಾದ ನಡೆಯಿತು. ಈ ನಡುವೆ ಎದ್ದು ನಿಂತ ಆರ್ ಅಶೋಕ್, ಇದು ವಿಷಯಾಂತರ ಆಗೋದು ಬೇಡ. ಸಚಿವರು ಮಹಿಳೆಯ ವಿಕ್ಟಿಮ್ ಕಾರ್ಡ್ ಬಳಸೋದು ಬೇಡ. ಅದು ನಿಯಮ ಪುಸ್ತಕದಲ್ಲಿ ಇಲ್ಲ. ನಿಯಮ ಪುಸ್ತಕದಲ್ಲಿ ಮಂತ್ರಿ ಎಂದು ಮಾತ್ರ ಇದೆ ಎಂದು ಹೇಳಿದರು.
ನಮ್ಮದು ಸಿಂಪಲ್ ಪ್ರಶ್ನೆ, ಸಿಂಪಲ್ ಉತ್ತರ. ನಮಗೆ ಸಚಿವರು ಉತ್ತರ ಕೊಟ್ಟಿರುವುದು ಸರಿಯಾಗಿಲ್ಲ. ಹಾಗಾಗಿ, ನಾವು ಸಭಾತ್ಯಾಗ ಮಾಡುತ್ತಿದ್ದೇವೆ ಎಂದರು.
ಈ ವೇಳೆ ಶರಣ್ ಪ್ರಕಾಶ್ ಪಾಟೀಲ್ ಸೇರಿದಂತೆ ಆಡಳಿತ ಪಕ್ಷದ ಸದಸ್ಯರು ಬಿಜೆಪಿಗರು ಮಹಿಳೆಯರ ವಿರೋಧಿಗಳು ಎಂದು ಘೋಷಣೆಗಳನ್ನು ಕೂಗಿದರು.
ಪ್ರತಿಪಕ್ಷ ಸದಸ್ಯರು ಸಭಾತ್ಯಾಗ ಮಾಡಿದ ಬಳಿಕ ಸ್ಪೀಕರ್ ಖಾದರ್ ಪ್ರಶ್ನೋತ್ತರ ಕಲಾಪ ಮುಂದುವರಿಸಿದರು.


