ಅಸ್ಸಾಂನ ನಾಗಾಂವ್ ಜಿಲ್ಲಾಡಳಿತವು 15 ಘೋಷಿತ ವಿದೇಶಿಯರಿಗೆ 24 ಗಂಟೆಗಳ ಒಳಗೆ ರಾಜ್ಯ ತೊರೆಯುವಂತೆ ಆದೇಶಿಸಿದ ಬಗ್ಗೆ ವರದಿಯಾಗಿದೆ.
ಬುಧವಾರ (ಡಿ.17) ಜಿಲ್ಲಾಡಳಿತ ಈ ಆದೇಶ ನೀಡಿತ್ತು. ಆದರೆ, ಇದುವರೆಗೆ (ಡಿ.20) ಈ 15 ಜನರನ್ನು ಗಡಿಯಾಚೆಗೆ ತಳ್ಳಿರುವ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ.
ಗಮನಾರ್ಹ ವಿಷಯವೆಂದರೆ, ಬಂಧನ ಕೇಂದ್ರಗಳಲ್ಲಿದ್ದ ತಮ್ಮ ಸಂಬಂಧಿಕರನ್ನು ದೇಶ ತೊರೆಯಲು ಆದೇಶಿಸಲಾಗಿದೆ ಎಂಬುವುದು ಅವರ ಕುಟುಂಬಸ್ಥರಿಗೆ ಮಾಧ್ಯಮಗಳ ಮೂಲಕ ಗೊತ್ತಾಗಿದೆ ಎಂದು ವರದಿಗಳು ಹೇಳಿವೆ.
1950ರ ಅಸ್ಸಾಂನಿಂದ ವಲಸಿಗರನ್ನು ಹೊರಹಾಕುವ ಕಾಯ್ದೆಯಡಿಯಲ್ಲಿ ನಾಗಾಂವ್ ಜಿಲ್ಲಾಧಿಕಾರಿ ದೇವಶಿಶ್ ಶರ್ಮಾ ಅವರು ದೇಶ ತೊರೆಯುವಂತೆ ಆದೇಶಗ ಹೊರಡಿಸಿದ್ದಾರೆ.
ವಿದೇಶಿಯರ ನ್ಯಾಯಮಂಡಳಿಗಳನ್ನು ಬೈಪಾಸ್ ಮಾಡುವ ಮೂಲಕ ರಾಜ್ಯದಿಂದ ‘ಅಕ್ರಮ ವಲಸಿಗರನ್ನು’ ಹೊರಹಾಕಲು ಈ ಕಾಯ್ದೆಯು ಜಿಲ್ಲಾಧಿಕಾರಿಗಳು ಮತ್ತು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಅಧಿಕಾರ ನೀಡುತ್ತದೆ.
ಝಹೂರ ಖಾತೂನ್, ಅಬ್ದುಲ್ ಅಝೀಝ್, ಅಹೇದಾ ಖಾತೂನ್, ಅಜುಫಾ ಖಾತೂನ್, ಹುಸೇನ್ ಅಲಿ, ಫಾಝಿಲಾ ಖಾತೂನ್, ಅನುರಾ ಬೇಗಂ, ಆಶಾ ಖಾತೂನ್, ನಝ್ರುಲ್ ಇಸ್ಲಾಂ, ರಹೀಮ್ ಶೇಖ್, ಬುರೆಕ್ ಅಲಿ, ಇದ್ರಿಸ್ ಅಲಿ, ರುಸ್ತಮ್ ಅಲಿ, ಅನ್ವರ್ ಖಾನ್ ಮತ್ತು ತಾಹೆರ್ ಅಲಿ ಅವರಿಗೆ 24 ಗಂಟೆಯೊಳಗೆ ಭಾರತ ತೊರೆಯುವಂತೆ ಸೂಚಿಸಲಾಗಿತ್ತು.
ಈ 15 ಜನರನ್ನು ವಿದೇಶಿಯರು ಎಂದು ಘೋಷಿಸಲಾಗಿದೆ. ಅವರು ಭಾರತದೊಳಗೆ ಇರುವುದು ಸಾರ್ವಜನಿಕ ಹಿತಾಸಕ್ತಿ ಮತ್ತು ರಾಜ್ಯದ ಆಂತರಿಕ ಭದ್ರತೆಗೆ ಅಪಾಯಕಾರಿ ಎಂದು ಜಿಲ್ಲಾಧಿಕಾರಿ ಆದೇಶ ಹೇಳಿದೆ.
ಜಿಲ್ಲಾಧಿಕಾರಿ ಅವರು ಧುಬ್ರಿ, ಶ್ರೀಭೂಮಿ ಅಥವಾ ದಕ್ಷಿಣ ಸಲ್ಮಾರ-ಮಂಕಚಾರ್ ಮಾರ್ಗಗಳ ಮೂಲಕ ರಾಜ್ಯವನ್ನು ತೊರೆಯುವಂತೆ ಸೂಚಿಸಿದ್ದರು.
ಆದೇಶಗಳನ್ನು ಪಾಲಿಸಲು ವಿಫಲರಾದರೆ, ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಸರ್ಕಾರ ನಿಮ್ಮನ್ನು ರಾಜ್ಯದಿಂದ ಹೊರಗಟ್ಟಲು ಸೂಕ್ತ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಆದೇಶದಲ್ಲಿ ಎಚ್ಚರಿಸಲಾಗಿತ್ತು.
ಬುಧವಾರ ಆದೇಶ ಹೊರಡಿಸುವ ವೇಳೆ, 15 ಜನರನ್ನು ಗೋಲ್‌ಪಾರ ಜಿಲ್ಲೆಯ ಮಾಟಿಯಾ ಟ್ರಾನ್ಸಿಟ್ ಕ್ಯಾಂಪ್‌ನಲ್ಲಿ ಮತ್ತು ಕೊಕ್ರಝಾರ್ ಜಿಲ್ಲೆಯ ಅಸ್ಸಾಂ ಪೊಲೀಸ್ ಬೆಟಾಲಿಯನ್ ಸೌಲಭ್ಯದಲ್ಲಿ ಇರಿಸಲಾಗಿತ್ತು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಒಟ್ಟು 19 ಪ್ರಕರಣಗಳು ದಾಖಲಾಗಿವೆ. ಉಳಿದ ನಾಲ್ಕು ಪ್ರಕರಣಗಳು ನ್ಯಾಯಾಲಯದಲ್ಲಿ ಬಾಕಿ ಇರುವುದರಿಂದ ಕೇವಲ 15 ಪ್ರಕರಣಗಳಲ್ಲಿ ಮಾತ್ರ ಗಡಿಪಾರು ಆದೇಶಗಳನ್ನು ನೀಡಲಾಗಿದೆ ಎಂದು ನಾಗಾಂವ್ ಪೊಲೀಸ್ ವರಿಷ್ಠಾಧಿಕಾರಿ ಸ್ವಪ್ನನೀಲ್ ದೇಕಾ ಹೇಳಿರುವುದಾಗಿ ವರದಿ ಉಲ್ಲೇಖಿಸಿದೆ.
ನವೆಂಬರ್‌ನಲ್ಲಿ, ಅಸ್ಸಾಂನ ಸೋನಿತ್‌ಪುರ ಜಿಲ್ಲೆಯಲ್ಲಿ ಐವರ ವಿರುದ್ಧ ಇದೇ ರೀತಿಯ ಆದೇಶಗಳನ್ನು ಹೊರಡಿಸಲಾಗಿತ್ತು.


