ಅತಿಕ್ರಮಣ ಆರೋಪದ ಮೇಲೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಅಧಿಕಾರಿಗಳು ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಬಂಡೆ ಬಳಿಯ 5 ಎಕರೆ ಜಾಗದಲ್ಲಿದ್ದ ಸುಮಾರು 200ರಷ್ಟು ಮನೆಗಳನ್ನು ಶನಿವಾರ (ಡಿ.20) ತೆರವುಗೊಳಿಸಿದ್ದು, ಬಡ ಜನರು ಬೀದಿಗೆ ಬಿದ್ದಿದ್ದಾರೆ.
ಯಲಹಂಕ ಹೋಬಳಿ ಕೋಗಿಲು ಗ್ರಾಮದ ಸರ್ವೆ ನಂ. 99ರಲ್ಲಿ ಒಟ್ಟು 14 ಎಕರೆ 36 ಗುಂಟೆ ವಿಸ್ತೀರ್ಣದ ಜಮೀನಿನಲ್ಲಿ, ಬಿಎಸ್‌ಡಬ್ಲ್ಯುಎಂಎಲ್ ವತಿಯಿಂದ ಪ್ರಸ್ತಾವಿತ ಬಯೋ ಮೆಥನೈಸೇಶನ್ ಪ್ಲಾಂಟ್, ಅನಿಮಲ್ ರೆಂಡರಿಂಗ್, ಎಳನೀರು ಬುರುಡೆ ಸಂಸ್ಕರಣಾ ಮತ್ತು ಸ್ಯಾನಿಟರಿ ತ್ಯಾಜ್ಯ ಸಂಸ್ಕರಣಾ ಸೌಲಭ್ಯಗಳನ್ನು ಕಾರ್ಯಗತಗೊಳಿಸಲು ಯೋಜಿಸಲಾಗಿತ್ತು.
ಬಿಎಸ್‌ಡಬ್ಲ್ಯುಎಂಎಲ್‌ಗೆ ಮೀಸಲಿರಿಸಿದ್ದ ಜಾಗದಲ್ಲಿ ಜನರು 200ರಷ್ಟು ಶೆಡ್/ ಮನೆಗಳನ್ನು ನಿರ್ಮಾಣ ಮಾಡಿಕೊಂಡಿದ್ದರು. ಹಾಗಾಗಿ, ನಿಯಮನುಸಾರ ತೆರವುಗೊಳಿಸಿದ್ದೇವೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಮುಂಜಾನೆ 4 ಗಂಟೆಗೆ ಅಧಿಕಾರಿಗಳು ಬುಲ್ಡೋಝರ್‌ಗಳನ್ನು ತಂದು ಮನೆಗಳನ್ನು ಕೆಡವಲು ಶುರು ಮಾಡಿದರು. ತಕ್ಷಣ ಮನೆಗಳನ್ನು ಕಾಲಿ ಮಾಡುವಂತೆ ಸೂಚಿಸಿದರು. ನಮಗೆ ನಮ್ಮ ದಾಖಲೆ ಪತ್ರಗಳು ಸೇರಿದಂತೆ ಅಗತ್ಯ ವಸ್ತುಗಳನ್ನು ತೆಗೆದುಕೊಳ್ಳಲೂ ಸಮಯ ನೀಡಿಲ್ಲ ಎಂದು ನಿರಾಶ್ರಿತರಾದ ಜನರು ಆರೋಪಿಸಿದ್ದಾರೆ.
ಆದರೆ, ಅಧಿಕಾರಿಗಳು ನಾವು ಒಂದು ತಿಂಗಳಲ್ಲಿ ಎರಡು ಬಾರಿ ನೋಟಿಸ್ ಕೊಟ್ಟು ಮನೆಗಳನ್ನು ತೆರವುಗೊಳಿಸುವಂತೆ ಸೂಚಿಸಿದ್ದೆವು. ಅದರ ನಂತರ ಕಾನೂನಿನಂತೆ ತೆರವು ಕಾರ್ಯಚರಣೆ ನಡೆಸಿದ್ದೇವೆ ಎಂದು ಸಮರ್ಥಿಸಿಕೊಂಡಿದ್ದಾರೆ.
ಕೋಗಿಲು ಗ್ರಾಮದ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿದ್ದ ಮನೆಗಳನ್ನು ತೆರವುಗೊಳಿಸಲಾಗಿದೆ.
ಕೋಗಿಲು ಗ್ರಾಮದ ಸರ್ಕಾರಿ ಉರ್ದು ಶಾಲೆಯ ಬಳಿಯ ಸಣ್ಣ ಕೊಳದ ಪಕ್ಕದಲ್ಲಿರುವ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡು ಜನರು ಮನೆಗಳನ್ನು ಕಟ್ಟಿಕೊಂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಮನೆಗಳಲ್ಲಿದ್ದ ಎಲ್‌ಪಿಜಿ ಸಿಲಿಂಡರ್, ಗ್ಯಾಸ್ ಸ್ಟವ್ ಸೇರಿದಂತೆ ಬೆಂಕಿ ಹೊತ್ತಿಕೊಳ್ಳುವ ವಸ್ತುಗಳನ್ನು ತೆರವುಗೊಳಿಸಿದ ಬಳಿಕ ಅಧಿಕಾರಿಗಳು ಮನೆಗಳನ್ನು ಕೆಡವಲು ಪ್ರಾರಂಭಿಸಿದರು. ಸ್ಥಳದಲ್ಲಿ 150ಕ್ಕೂ ಹೆಚ್ಚು ಪೊಲೀಸರು, ಜೊತೆಗೆ ಜಿಬಿಎ ಮಾರ್ಷಲ್‌ಗಳನ್ನು ನಿಯೋಜಿಸಲಾಗಿತ್ತು. ಹಿರಿಯ ಅಧಿಕಾರಿಗಳೂ ಸ್ಥಳದಲ್ಲಿ ಇದ್ದರು. ತೆರವು ಕಾರ್ಯಾಚರಣೆಗೆ ತೀವ್ರ ಅಡ್ಡಿಪಡಿಸಿದ ಕೆಲವರನ್ನು ಪೊಲೀಸರು ವಶಕ್ಕೆ ಪಡೆದರು ಎಂದು ವರದಿಗಳು ಹೇಳಿವೆ.
ಜನರು ಅನಧಿಕೃತವಾಗಿ ಸರ್ಕಾರಿ ಜಾಗದಲ್ಲಿ ಮನೆಗಳನ್ನು ಕಟ್ಟಿಕೊಂಡಿದ್ದರು. ಅವರಲ್ಲಿ ಹೆಚ್ಚಿನವರು ಹೈದರಾಬಾದ್ ಮತ್ತು ಆಂಧ್ರಪ್ರದೇಶದ ವಿವಿಧ ಭಾಗಗಳಿಂದ ವಲಸೆ ಬಂದ ಅಲ್ಪಸಂಖ್ಯಾತ ದರ್ವೇಶ್ ಸಮುದಾಯಕ್ಕೆ ಸೇರಿದವರು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ನಿರಾಶ್ರಿತರಾದ ಜನರು ನಾವು 25 ವರ್ಷಗಳಿಂದ ಇಲ್ಲೇ ಇದ್ದೇವೆ ಎಂದು ಹೇಳಿಕೊಂಡಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿರುವ ದುಡಿಯುವ ಜನರ ವೇದಿಕೆಯ ಸದಸ್ಯೆ ಪೂಜಾ ಹೆಚ್.ಎಂ, “ನಿರಾಶ್ರಿತರಾದ ಕುಟುಂಬಗಳು ಆಧಾರ್ ಕಾರ್ಡ್, ವೋಟರ್ ಐಡಿ ಸೇರಿದಂತೆ ಮಾನ್ಯ ದಾಖಲೆಗಳನ್ನು ಹೊಂದಿದ್ದು, ಭಿಕ್ಷಾಟನೆ ಮತ್ತು ಸಣ್ಣಪುಟ್ಟ ಕೆಲಸಗಳ ಮೂಲಕ ತಮ್ಮ ಜೀವನೋಪಾಯವನ್ನು ಗಳಿಸುತ್ತಿದ್ದರು” ಎಂದು ಹೇಳಿದ್ದಾರೆ.
“ಹಲವು ಕುಟುಂಬಗಳು ಬ್ಯಾಂಕ್‌ಗಳಿಂದ ಸಾಲ ಪಡೆದಿವೆ. ಮನೆಗಳನ್ನು ಕೆಡವುವ ಮೊದಲು ಯಾವುದೇ ಪೂರ್ವ ಸೂಚನೆ ನೀಡಿರಲಿಲ್ಲ. ಹಲವು ಮಹಿಳೆಯರು ಗರ್ಭಿಣಿಯರಾಗಿದ್ದಾರೆ. ಅಧಿಕಾರಿಗಳು ಅವರ ಸ್ಥಿತಿಯ ಬಗ್ಗೆ ಯಾವುದೇ ಕಾಳಜಿ ತೋರಿಸಿಲ್ಲ” ಎಂದು ತಿಳಿಸಿದ್ದಾರೆ.
ಕಾರ್ಯಾಚರಣೆಯ ಸಮಯದಲ್ಲಿ ಜಿಲ್ಲಾಡಳಿತದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಆದರೆ, ಅವರು ನಮಗೆ ಯಾವುದೇ ಸ್ಪಷ್ಟೀಕರಣ ನೀಡಿಲ್ಲ. ನಮ್ಮ ಕಳವಳಗಳನ್ನು ಪರಿಹರಿಸಿಲ್ಲ ಎಂದು ಜನರು ಹೇಳಿದ್ದಾರೆ.


