ಬೆಂಗಳೂರು ಉತ್ತರ ನಗರ ಪಾಲಿಕೆ ವ್ಯಾಪ್ತಿಯ ಕೋಗಿಲು ಗ್ರಾಮದಲ್ಲಿ ಬಡ ಜನರ ಸುಮಾರು 150 ಮನೆಗಳನ್ನು ಏಕಾಏಕಿ ನೆಲಸಮಗೊಳಿಸಿರುವ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕ್ರಮವನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಮಂಗಳವಾರ (ಡಿ.23) ಪತ್ರಿಕಾ ಪ್ರಕಟಣೆ ಹೊರಡಿಸಿರುವ ಸಮಿತಿ, ಕೋಗಿಲು ಗ್ರಾಮದ ಸರ್ವೆ ನಂಬರ್ 99ರ ಸರ್ಕಾರಿ ಭೂಮಿಯಲ್ಲಿ ಸುಮಾರು 150ಕ್ಕೂ ಹೆಚ್ಚು ದಲಿತರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವಸತಿ ರಹಿತರು ಮನೆಗಳನ್ನು ಕಟ್ಟಿಕೊಂಡು ಸುಮಾರು 25-30 ವರ್ಷಗಳಿಂದ ವಾಸವಿದ್ದರು. ಸದರಿ ಸ್ಥಳದ ಮಂಜೂರಾತಿಗಾಗಿ ಸರ್ಕಾರಕ್ಕೆ 94ಸಿಸಿ ಅರ್ಜಿಗಳನ್ನು ಸಲ್ಲಿಸಿದ್ದರು. ಸರ್ಕಾರ ತಾತ್ಕಾಲಿಕ ಹಕ್ಕುಪತ್ರಗಳನ್ನೂ ನೀಡಿತ್ತು. ಇತ್ತೀಚೆಗೆ ಯಾವುದೇ ಸುಳಿವು ನೀಡದೆ ತಾತ್ಕಾಲಿಕ ಹಕ್ಕುಪತ್ರಗಳನ್ನು ರದ್ದುಪಡಿಸಲಾಗಿದೆ. ಆ ಬಳಿಕ ಡಿಸೆಂಬರ್ 20ರಂದು ಬೆಳ್ಳಂ ಬೆಳಿಗ್ಗೆ 5 ಗಂಟೆಗೆ ಮನೆಗಳ ತೆರವು ಕಾರ್ಯ ನಡೆಸಲಾಗಿದೆ ಎಂದು ಆರೋಪಿಸಿದೆ.
ಮನೆಗಳ ಧ್ವಂಸಕ್ಕೂ ಮುನ್ನ ಮೂರು ತಿಂಗಳು ಮುಂಚಿತವಾಗಿ ನೋಟಿಸ್ ಕೊಟ್ಟಿಲ್ಲ. ಬಡ ಕುಟುಂಬಗಳು ಕೂಲಿನಾಲಿ ಮಾಡಿ ಸಂಗ್ರಹಿಸಿಟ್ಟುಕೊಂಡಿದ್ದ ಆಹಾರ ಪದಾರ್ಥಗಳು, ಬಟ್ಟೆಬರೆ, ಗೃಹ ಬಳಕೆ ವಸ್ತುಗಳನ್ನು ತೆಗೆದುಕೊಳ್ಳಲೂ ಕೂಡ ಅವಕಾಶ ಕೊಡದೆ, ಯಾವುದೇ ಮುನ್ಸೂಚನೆ ಇಲ್ಲದೆ, ಉತ್ತರಪ್ರದೇಶದ ಬುಲ್ಡೋಜರ್ ಸರ್ಕಾರದಂತೆ ಪೋಲೀಸ್ ಬಲದೊಂದಿಗೆ ಏಕಾಏಕಿ ಮನೆಗಳನ್ನು ಧ್ವಂಸ ಮಾಡಲಾಗಿದೆ ಎಂದು ಹೇಳಿದೆ.
ಕಂದಾಯ ಸಚಿವರ ಸ್ವಕ್ಷೇತ್ರದಲ್ಲಿಯೇ ಇಂತಹ ಘೋರ ಹಾಗೂ ಅಮಾನವೀಯ ಕೃತ್ಯ ನಡೆದಿರುವುದು ಅತ್ಯಂತ ಶೋಚನೀಯ ಎಂದು ಸಮಿತಿ ಬೇಸರ ವ್ಯಕ್ತಪಡಿಸಿದೆ. ಈ ದುಷ್ಕೃತ್ಯದಿಂದಾಗಿ ನೆಲೆ ಕಳೆದುಕೊಂಡ ಬಡ ಕುಟುಂಬಗಳು ಮಕ್ಕಳು, ಮುದುಕರಾದಿಯಾಗಿ ಚಳಿ, ಗಾಳಿ, ಬಿಸಿಲೆನ್ನದೆ ಅಲ್ಲಿಯೇ ನಿರ್ವಸಿತರಾಗಿ ಪರಿತಪಿಸುವಂತಾಗಿದೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಈ ದುರುದ್ದೇಶಪೂರಿತ, ಪೂರ್ವಯೋಜಿತ ದುಷ್ಕೃತ್ಯವನ್ನು ಖಂಡಿಸುತ್ತೇವೆ ಎಂದಿದೆ.
ಬದುಕು ಕಳೆದುಕೊಂಡ ಎಲ್ಲಾ ನಿರ್ಗತಿಕರಿಗೆ ಸರ್ಕಾರವು ಅದೇ ಸ್ಥಳದಲ್ಲಿಯೇ ಶಾಶ್ವತ ಮನೆಗಳನ್ನು ನಿರ್ಮಿಸಿಕೊಡಬೇಕು. ಅಲ್ಲಿಯವರೆಗೆ ಬಲವಂತದ ತೆರವು ಕಾರ್ಯಾಚರಣೆಯಿಂದ ವಸತಿ ಕಳೆದುಕೊಂಡ ಎಲ್ಲಾ ಕುಟುಂಬಗಳಿಗೆ ವಾಸಯೋಗ್ಯ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿಕೊಟ್ಟು, ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿಕೊಡಬೇಕು. ತಿಂಗಳಿಗಾಗುವಷ್ಟು ಆಹಾರ ಸಾಮಗ್ರಿಗಳನ್ನು ಪ್ರತಿ ತಿಂಗಳೂ ಸರ್ಕಾರವೇ ಪೂರೈಸಬೇಕು ಎಂದು ಸಮಿತಿ ಆಗ್ರಹಿಸಿದೆ.


