ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನಾಯಕಿ ಎನ್ನಲಾದ ನಾಝಿಯಾ ಇಲಾಹಿ (ನಾಝಿಯಾ ಇಲಾಹಿ ಖಾನ್) ಪದೇ ಪದೇ ಮುಸ್ಲಿಮರನ್ನು ತುಚ್ಛವಾಗಿ ನಿಂದಿಸಿ, ಅದರ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ರಾಜಾರೋಷವಾಗಿ ಹಂಚಿಕೊಳ್ಳುತ್ತಿದ್ದು, ಪೊಲೀಸರು ಯಾವುದೇ ಕ್ರಮ ಕೈಗೊಂಡ ಬಗ್ಗೆ ಇದುವರೆಗೆ ವರದಿಯಾಗಿಲ್ಲ.
ಸಾಮಾಜಿಕ ಜಾಲತಾಣಗಳಲ್ಲಿ ಈಕೆಯ ವರ್ತನೆಯ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಸೂಕ್ತ ಕ್ರಮಕ್ಕೆ ಜನರು ಆಗ್ರಹಿಸಿದ್ದಾರೆ.
ಇತ್ತೀಚಿನ ಘಟನೆಯಲ್ಲಿ, ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ, ಅಲ್ಲಿನ ಮುಸ್ಲಿಂ ಸಿಬ್ಬಂದಿಯನ್ನು ಧಾರ್ಮಿಕ ಗುರುತಿನ ಮೇಲೆ ನಿಂದಿಸಿದ ವಿಡಿಯೋವನ್ನು ಸ್ವತಃ ನಾಝಿಯಾ ಸೋಮವಾರ (ಡಿ.22) ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು.
ವಿಡಿಯೋ ಜೊತೆಗೆ, “ತುರ್ತು ಪ್ರಯಾಣ ನಿಮಿತ್ತ ಇಂಡಿಗೋ ಟಿಕೆಟ್ ಪಡೆದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪ್ರವೇಶಿಸಿದಾಗ, ಇಂಡಿಗೋ ಕೌಂಟರ್‌ನಿಂದ ರನ್‌ವೇವರೆಗೆ ಮೂರು ಸಲ ಮಿನಿ ಜಿಹಾದಿಯನ್ನು ಎದುರಿಸಬೇಕಾದರೆ ಎನನಿಸಬೇಕು?” ಎಂದು ಬರೆದುಕೊಂಡಿದ್ದರು.
ಮುಂದುವರಿದು, “ಇಂಡಿಗೋ ಕೌಂಟರ್ ‘ಕೆ’ ನಲ್ಲಿ ರೆಹಾನ್, ಸ್ಟ್ರೆಚ್ ಕೌಂಟರ್‌ನಲ್ಲಿ ಮೊಯಿನುದ್ದೀನ್ ಮತ್ತು ರನ್‌ವೇ ಕೋಚ್‌ನಲ್ಲಿ ಚಾಲಕ ಅಬ್ದುಲ್ಲಾ ಖಾನ್. ನಿಮ್ಮ ಹೃದಯದಲ್ಲಿರುವ ದೇಶ ಭಕ್ತಿಯಿಂದ ನಿಮ್ಮನ್ನು ಗುರುತಿಸಿ, ನಂತರ ಅವರು ನಿಮಗೆ ಕಿರುಕುಳ ನೀಡಲು ಮತ್ತು ವಿವಿಧ ರೀತಿಯಲ್ಲಿ ಹಾನಿ ಮಾಡಲು ಪ್ರಯತ್ನಿಸುತ್ತಾರೆ. ಇಂದು ನನಗೆ ಇದೇ ಅನುಭವ ಆಯಿತು” ಎಂದಿದ್ದರು.
“ಒಂದು ವೇಳೆ ಇಂಡಿಗೋ ಏರ್‌ಲೈನ್ಸ್ ಮೂಲಕ ಭಯೋತ್ಪಾದಕರು ಮತ್ತು ಭಯೋತ್ಪಾದನೆ ಭುಗಿಲೆದ್ದರೆ, ಭಾರತ ದೇಶಕ್ಕೆ ಹಾನಿ ಮಾಡಲು ಪ್ರಯತ್ನಿಸಿದರೆ, ಆಗ ಇಂಡಿಗೋ ಏರ್‌ಲೈನ್ಸ್ ಮಾಲೀಕರು ಕೊಂಚವೂ ಆಘಾತಕ್ಕೊಳಗಾಗುವುದಿಲ್ಲ ಎಂದು ನಾನು ಭಾವಿಸುತ್ತೇನೆ. ಏಕೆಂದರೆ ಇಂಡಿಗೋ ಏರ್‌ಲೈನ್ಸ್ ಮಾಲೀಕರು ಉದಾರವಾದಿ ಹಿಂದೂವಾಗಿ ಪೂರೈಸುತ್ತಿರುವ ಜವಾಬ್ದಾರಿಯಿಂದ” ಎಂದು ಹೇಳಿದ್ದರು.
“ಹೆಚ್ಚಿನ ಸಂಖ್ಯೆಯಲ್ಲಿ ಉಮ್ಮ (ಮುಸ್ಲಿಮರು) ಜನರನ್ನು ನೇಮಿಸಿಕೊಳ್ಳುವ ಮೂಲಕ ಇದು ವ್ಯವಸ್ಥಿತ ಪಿತೂರಿಯೇ? ಅಥವಾ ಒಬ್ಬ ಉದಾರವಾದಿ ಹಿಂದೂವಿನ ಕರ್ತವ್ಯಗಳ ನೆರವೇರಿಕೆಯೇ? ಸರ್ಕಾರವು ಕೇವಲ ಕೈಜೋಡಿಸಿ ಪ್ರತಿ ಬಾರಿಯೂ ಕ್ಷಮೆಯಾಚಿಸಿದರೆ ಕ್ಷಮಿಸುವುದಿಲ್ಲ, ಹಾಗೆ ಆಗಬಾರದು” ಎಂದು ಬರೆದುಕೊಂಡಿದ್ದರು.
ತಾನು ಪೋಸ್ಟ್ ಮಾಡಿದ್ದ ವಿಡಿಯೋದಲ್ಲಿಯೂ ಆಕೆ, “Poora desh pareshan ho gaya hai tum Abdul aur Abdullah se” (ಅಬ್ದುಲ್ ಮತ್ತು ಅಬ್ದುಲ್ಲಾ, ನಿಮ್ಮಿಂದಾಗಿ ಇಡೀ ದೇಶ ತೊಂದರೆಗೀಡಾಗಿದೆ) ಎಂದು ಹೇಳುವುದು ಇದೆ.
ಈ ಮೂಲಕ ಮುಸ್ಲಿಮರ ಮೇಲಿನ ಮತೀಯ ದ್ವೇಷವನ್ನು ನಾಝಿಯಾ ಹೊರ ಹಾಕಿದ್ದರು. ತನ್ನ ಪೋಸ್ಟನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ, ಇಂಡಿಗೋ ಸಂಸ್ಥೆಗೆ ಟ್ಯಾಗ್ ಮಾಡಿದ್ದರು.
ವಿಡಿಯೋ ಅಥವಾ ಪೋಸ್ಟ್‌ನಲ್ಲಿ ನಾಝಿಯಾ ಅವರು ಮುಂಬೈ ನಿಲ್ದಾಣದಲ್ಲಿ ಆಕೆಗೆ ಆಗಿರುವ ಸಮಸ್ಯೆ ಏನು? ಆಕೆ ಮುಸ್ಲಿಂ ಸಿಬ್ಬಂದಿಯನ್ನು ನಿಂದಿಸಲು ಕಾರಣವೇನು? ಎಂದು ಸ್ಪಷ್ಟಪಡಿಸಿಲ್ಲ.
ನಾಝಿಯಾ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಅನೇಕರು ಆಕೆ ದ್ವೇಷ ಹರಡುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯ ಜನರು ಏನಾದರು ಪೋಸ್ಟ್ ಹಾಕಿದಾಗ ತಕ್ಷಣ ಮನೆಗೆ ನುಗ್ಗಿ ಬಂದಿಸುವ ಪೊಲೀಸರು, ಈಕೆಯ ಮೇಲೆ ಇದುವರೆಗೆ ಕ್ರಮ ಕೈಗೊಂಡ ಬಗ್ಗೆ ವರದಿಯಾಗಿಲ್ಲ. ಎಕ್ಸ್ ಕೂಡ ಆಕೆಯ ದ್ವೇಷ ಹರಡುವ ವಿಡಿಯೋ ಕುರಿತು ಯಾವುದೇ ಕ್ರಮ ಕೈಗೊಂಡಿಲ್ಲ. ಎಕ್ಸ್‌ನ ಮಾನದಂಡಗಳನ್ನು ಉಲ್ಲಂಘಿಸಿದ ಬಗ್ಗೆ ಚಕಾರವೆತ್ತಿಲ್ಲ.
ತನ್ನ ವಿಡಿಯೋ ದೇಶದಾದ್ಯಂತ ವೈರಲ್ ಆಗಿ ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ನಾಝಿಯಾ ಮತ್ತೊಂದು ಸೆಲ್ಪೀ ವಿಡಿಯೋವನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಮುಸ್ಲಿಮರನ್ನು “ಜಿಹಾದಿ”, “ಕಟ್ಮುಲ್ಲಾ” “ಹಂದಿಗಳು” ಇತ್ಯಾದಿ ಪದಗಳನ್ನು ಉಪಯೋಗಿಸಿ ತುಚ್ಛವಾಗಿ ನಿಂದಿಸಿದ್ದಾರೆ.
ವಿಡಿಯೋ ಜೊತೆಗೆ, “ಇಂಡಿಗೋ ಮಾಲೀಕರು ಭಾರತ ಮತ್ತು ಪಾಕಿಸ್ತಾನದ ಮುಸ್ಲಿಂ ಬೆಂಬಲಿಗರ ಮಾತನ್ನು ಕೇಳಿ ನನ್ನನ್ನು ಕಪ್ಪುಪಟ್ಟಿಗೆ ಸೇರಿಸಬೇಕು. ಏಕೆಂದರೆ ನಾನು ಸುಮ್ಮನಿರುವುದಿಲ್ಲ. ಇಂಡಿಗೋದ ಉಮ್ಮಾ (ಮುಸ್ಲಿಂ) ನೌಕರರು ತಮ್ಮ ಜಿಹಾದಿ ಮನಸ್ಥಿತಿಯನ್ನು ನನಗೆ ತೋರಿಸಿದಾಗಲೆಲ್ಲಾ, ನಾನು ಅವರ ಹಿಜಾಬ್ ಕಳಚುತ್ತೇನೆ, ಇದು ಸವಾಲು” ಎಂದು ಬರೆದುಕೊಂಡಿದ್ದಾರೆ. ಈ ವಿಡಿಯೋ ಬಗ್ಗೆ ಸಂಬಂಧಪಟ್ಟವರು ಕ್ರಮ ಕೈಗೊಂಡ ಬಗ್ಗೆ ವರದಿಯಾಗಿಲ್ಲ.
ಇದೇ ಘಟನೆಗೆ ಸಂಬಂಧಪಟ್ಟಂತೆ ಡಿಸೆಂಬರ್ 24ರಂದು ನಾಝಿಯಾ ಮತ್ತೊಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ಜಮ್ಮು ಕಾಶ್ಮೀರಾದ ಪಿಡಿಪಿ ಪಕ್ಷದ ನಾಯಕಿ ಇಲ್ತಿಜಾ ಮುಫ್ತಿ ವಿಷಯ ಗೊತ್ತಿಲ್ಲದೆ ಹೇಳಿಕೆ ಕೊಡುವ ಮೂಲಕ ನನ್ನನ್ನು ಅವಮಾನಿಸಿದ್ದಾರೆ. ಅಲ್ಲದೆ, ಅವರ ಕಡೆಯವರು ನನಗೆ ಬೆದರಿಕೆ ಕರೆಗಳನ್ನು ಮಾಡುತ್ತಿದ್ದಾರೆ ಎಂದು ಕೆಲ ಫೋನ್ ನಂಬರ್‌ಗಳನ್ನು ಹಂಚಿಕೊಂಡಿದ್ದಾರೆ.
ನಾಝಿಯಾ ತಮ್ಮ ಎಕ್ಸ್ ಖಾತೆ ಬಯೋದಲ್ಲಿ, “ಕ್ಷಮೆಯಾಚಿಸದ ಭಾರತೀಯೆ, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ನಾಯಕಿ, ರಾಜ್ಯ ಸಮಿತಿ ಸದಸ್ಯೆ ಕೈಮಗ್ಗ_ನೇಯ್ಗೆ ಕೋಶ, ರಾಷ್ಟ್ರೀಯ ವೀಕ್ಷಕಿ ಮಜ್ದೂರ್ ಕೋಶ, ಅಧ್ಯಕ್ಷೆ ಖಾನ್ ಲೀಗಲ್ ಸಾಲಿಸಿಟರ್ ಸಂಸ್ಥೆ” ಎಂದು ತನ್ನನ್ನು ತಾನು ಪರಿಚಯಿಸಿಕೊಂಡಿದ್ದಾರೆ.
ಇತರ ಮುಸ್ಲಿಂ ದ್ವೇಷ ಭಾಷಣಗಳು
1. ಆಗಸ್ಟ್ 2024ರಲ್ಲಿ ಸಂದರ್ಶನವೊಂದರಲ್ಲಿ ಪ್ರವಾದಿ ಮುಹಮ್ಮದರು, ಮದೀನಾ ನಗರ ಮತ್ತು ಮುಸ್ಲಿಂ ಮಹಿಳೆಯರನ್ನು ನಾಝಿಯಾ ಅವಹೇಳನ ಮಾಡಿದ್ದರು. ಇದರ ವಿರುದ್ದ ಕೋಲ್ಕತ್ತಾದ ಕ್ರಿಮಿನಲ್ ವಕೀಲರೊಬ್ಬರು ದೂರು ದಾಖಲಿಸಿದ್ದರು.
2. ಜನವರಿ 2025ರಲ್ಲಿ ದೆಹಲಿಯ ರೋಹಿಣಿ ಪ್ರದೇಶದಲ್ಲಿ ಹಿಂದುತ್ವ ಸಂಘಟನೆಯೊಂದು ಏರ್ಪಡಿಸಿದ್ದ ಸಾರ್ವಜನಿಕ ಕಾರ್ಯಕ್ರಮದಲ್ಲಿ ನಾಝಿಯಾ ಲವ್ ಜಿಹಾದ್, ಅತ್ಯಾಚಾರ, ಹಿಂಸಾಚಾರ, ಭಯೋತ್ಪಾದನೆ ಆರೋಪಗಳನ್ನು ಮಾಡಿ ಮುಸ್ಲಿಮರನ್ನು ನಿಂದಿಸಿದ್ದರು.
ಈ ಸಂಬಂಧ ‘ಚುನಾವಣೆಗೆ ಮುನ್ನ ಕೋಮು ಹಿಂಸಾಚಾರಕ್ಕೆ ಪ್ರಚೋದನೆ ನೀಡಿದ ಆರೋಪದ’ ಮೇಲೆ ಸಿಟಿಜನ್ಸ್ ಫಾರ್ ಜಸ್ಟೀಸ್ ಅಂಡ್ ಪೀಸ್ (ಸಿಜೆಪಿ) ದೆಹಲಿಯ ಮುಖ್ಯ ಚುನಾವಣಾ ಅಧಿಕಾರಿಗೆ ದೂರು ಸಲ್ಲಿಸಿತ್ತು. ಮಾದರಿ ನೀತಿ ಸಂಹಿತೆ (ಎಂಸಿಸಿ) ಮತ್ತು ಜನತಾ ಪ್ರಾತಿನಿಧ್ಯ ಕಾಯ್ದೆ, 1951ರ ಉಲ್ಲಂಘನೆಯಾಗಿದೆ ಎಂದು ಆರೋಪಿಸಿತ್ತು.
3. ಜನವರಿ 2025ರಲ್ಲಿ ಕರ್ನಾಟಕದ ಬೆಳಗಾವಿಯ ಜಿಲ್ಲೆಯ ಸೂಳಿಬಾವಿ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ನಾಝಿಯಾ ಮುಸ್ಲಿಮರ ವಿರುದ್ದ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿದ್ದರು.
ಸಾಮಾಜಿಕ ಜಾಲತಾಣಗಳಲ್ಲಿ ಈಕೆ ಪದೇ ಪದೇ ಮುಸ್ಲಿಮರ ವಿರುದ್ದ ದ್ವೇಷ ಕಾರುತ್ತಿರುತ್ತಾರೆ.
ಈ ಹಿಂದೆ ಮುಸ್ಲಿಮರ ವಿರುದ್ದ ಸುಳ್ಳು ಸುದ್ದಿ ಹರಡಿ ಸಿಕ್ಕಿಬಿದ್ದಿದ್ದರು ನಾಝಿಯಾ
ಯಾವುದೇ ವಿಷಯಗಳ ಕುರಿತು ವಿಡಿಯೋ ಮಾಡುವಾಗ, ಪೋಸ್ಟ್ ಮಾಡುವಾಗ ಮುಸ್ಲಿಮರನ್ನು ನಿಂದಿಸುವುದನ್ನು ನಾಝಿಯಾ ಮರೆಯುವುದಿಲ್ಲ. ಆಕೆಯ ಬಹುತೇಕ ಪೋಸ್ಟ್‌ಗಳು ಕಟ್ಟರ್ ಹಿಂದುತ್ವದ ಪ್ರತಿಪಾದನೆ ಮತ್ತು ದ್ವೇಷ ಹರಡುವಂತದ್ದಾಗಿದೆ. ಇಂತಹ ನಾಝಿಯಾ ಈ ಹಿಂದೆ ಮುಸ್ಲಿಮರ ವಿರುದ್ದ ಅಪಘಾತದ ಕಟ್ಟು ಕಥೆ ಕಟ್ಟಿ ಸಿಕ್ಕಿಬಿದಿದ್ದರು.
2025ರ ಫೆಬ್ರವರಿ 24ರಂದು, ಮಹಾಕುಂಭ ಮೇಳಕ್ಕೆ ತೆರಳುವಾಗ ಮುಸ್ಲಿಮರು ನಮ್ಮ ಕಾರನ್ನು ಹಿಂಬಾಲಿಸಿ ಅಪಘಾತವೆಸಗಿದ್ದಾರೆ ಎಂದು ನಾಝಿಯಾ ಆರೋಪಿಸಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಕಣ್ಣೀರು ಹಾಕಿ ವಿಡಿಯೋ ಪೋಸ್ಟ್ ಮಾಡಿದ್ದರು. ಆದರೆ, ಉತ್ತರ ಪ್ರದೇಶ ಪೊಲೀಸರು ತನಿಖೆ ನಡೆಸಿ ಆಕೆಯ ಸುಳ್ಳಾರೋಪವನ್ನು ಬಯಲು ಮಾಡಿದ್ದರು.
ಈ ಕುರಿತು ನಾನುಗೌರಿ.ಕಾಂ ಪ್ರಕಟಿಸಿದ ಫ್ಯಾಕ್ಟ್‌ಚೆಕ್ ವರದಿಯನ್ನು ಕೆಳಗಡೆ ನೋಡಬಹುದು.


