ಪದವಿ ಪರೀಕ್ಷೆಯ ಪ್ರಶ್ನೆ ಪತ್ರಿಕೆಯಲ್ಲಿದ್ದ “ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯದ ಬಗ್ಗೆ ವಿವರಿಸಿ” ಎಂಬ ಪ್ರಶ್ನೆಯ ಬಗ್ಗೆ ದೂರುಗಳು ಬಂದ ನಂತರ ದೆಹಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯವು ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕರನ್ನು ಮಂಗಳವಾರ (ಡಿ.23) ಅಮಾನತುಗೊಳಿಸಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಪ್ರಶ್ನೆ ಪತ್ರಿಕೆ ಸಿದ್ಧಪಡಿಸಿದ ಪ್ರಾಧ್ಯಾಪಕ ವೀರೇಂದ್ರ ಬಾಲಾಜಿ ಶಹರೆ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಪೊಲೀಸರನ್ನು ಕೇಳುವುದಾಗಿ ವಿವಿ ತಿಳಿಸಿದೆ ಎಂದು ವರದಿ ಹೇಳಿದೆ.
ಭಾನುವಾರ ನಡೆದ ಬ್ಯಾಚುಲರ್ ಆಫ್ ಆರ್ಟ್ಸ್ (ಆನರ್ಸ್) ಶೋಷಿಯಲ್ ವರ್ಕ್ ಕೋರ್ಸ್‌ನ ಮೊದಲ ಸೆಮಿಸ್ಟರ್ ಪರೀಕ್ಷೆಯ ‘ಭಾರತದಲ್ಲಿ ಸಾಮಾಜಿಕ ಸಮಸ್ಯೆಗಳು’ ವಿಷಯದ ಪ್ರಶ್ನೆ ಪತ್ರಿಕೆಯಲ್ಲಿ, “ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯಗಳನ್ನು ಸೂಕ್ತ ಉದಾಹರಣೆಗಳೊಂದಿಗೆ ವಿವರಿಸಿ” ಎಂಬ ಪ್ರಶ್ನೆ ನೀಡಲಾಗಿತ್ತು. ಈ ಪ್ರಶ್ನೆಯ ವಿರುದ್ಧ ದೂರುಗಳು ಬಂದ ಹಿನ್ನೆಲೆಯಲ್ಲಿ ವಿವಿ ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ.
ವಿವಿ ರಿಜಿಸ್ಟ್ರಾರ್ ಕಚೇರಿ ಹೊರಡಿಸಿದ ಆದೇಶದಲ್ಲಿ, ಅಂತಿಮ ಸೆಮಿಸ್ಟರ್ ಪರೀಕ್ಷಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕುರಿತು ಆಕ್ಷೇಪ ವ್ಯಕ್ತವಾಗಿದ್ದು, ಪ್ರಶ್ನೆಪತ್ರಿಕೆ ಸಿದ್ಧಪಡಿಸುವಲ್ಲಿ ಪ್ರಾಧ್ಯಾಪಕರಿಂದ ಲೋಪವಾಗಿದೆ ಎಂದು ಹೇಳಲಾಗಿದೆ. ಅವರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಪ್ರಶ್ನೆಪತ್ರಿಕೆಯನ್ನು ತನಿಖಾ ಸಮಿತಿ ಪರಿಶೀಲಿಸಲಿದೆ. ಅಮಾನತು ಅವಧಿಯಲ್ಲಿ ಪ್ರಾಧ್ಯಾಪಕರು ದೆಹಲಿಯಲ್ಲಿಯೇ ಇರಬೇಕು ಎಂದು ಸೂಚಿಸಲಾಗಿದೆ.
ದೆಹಲಿ ವಿಶ್ವವಿದ್ಯಾಲಯದ ಶಿಕ್ಷಕರ ಸಂಘವು ಈ ಪ್ರಶ್ನೆಯು ‘ಏಕಪಕ್ಷೀಯ’ ನಿರೂಪಣೆಯನ್ನು ಉತ್ತೇಜಿಸುತ್ತದೆ ಎಂದಿದ್ದು, ಕಳವಳ ವ್ಯಕ್ತಪಡಿಸಿದೆ. ಈ ವಿಚಾರವನ್ನು ಯುಜಿಸಿ ಹಾಗೂ ಶಿಕ್ಷಣ ಸಚಿವಾಲಯ ಗಮನಿಸಬೇಕೆಂದು ಸಂಘವು ಮನವಿ ಮಾಡಿದೆ.
ಈ ನಡುವೆ, ಜಾಮಿಯಾ ಮಿಲ್ಲಿಯಾದ ಇಸ್ಲಾಮಿಯಾದ ವಿದ್ಯಾರ್ಥಿ ಸಂಘಟನೆ ‘ದಿ ಫ್ರಾಟರ್ನಿಟಿ ಮೂವ್‌ಮೆಂಟ್’ ಪ್ರಾಧ್ಯಾಪಕರ ಅಮಾನತನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದೆ. ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಾಮಾಜಿಕ ವಾಸ್ತವಗಳ ಕುರಿತು ಅರ್ಥಪೂರ್ಣ ಚರ್ಚೆಗೆ ಅವಕಾಶ ನೀಡುವ ಪ್ರಶ್ನೆಯಿದು ಎಂದು ಸಂಘಟನೆ ಹೇಳಿದೆ. ಶೈಕ್ಷಣಿಕ ಸ್ವಾತಂತ್ರ್ಯಕ್ಕಿಂತ ಶಿಕ್ಷೆಯನ್ನು ಆಯ್ಕೆ ಮಾಡಿರುವುದು ಖಂಡನೀಯ ಎಂದು ಸಂಘ ಟೀಕಿಸಿದೆ.


