ಉನ್ನಾವೋ ಅತ್ಯಾಚಾರ ಅಪರಾಧಿಯ ಶಿಕ್ಷೆ ಅಮಾನತಿನಲ್ಲಿಟ್ಟ ದೆಹಲಿ ಹೈಕೋರ್ಟ್ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲು ಕೇಂದ್ರ ತನಿಖಾ ದಳ (ಸಿಬಿಐ) ಮುಂದಾಗಿದೆ ಎಂದು ಬುಧವಾರ (ಡಿ.24) ವರದಿಯಾಗಿದೆ.
ಸಿಬಿಐ ಈ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಅದರ ಆಧಾರ ಮೇಲೆ ವಿಚಾರಣೆ ನಡೆಸಿದ್ದ ನ್ಯಾಯಾಲಯ, ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್‌ಗೆ 2019ರಲ್ಲಿ ಜೀವಾಧಿ ಶಿಕ್ಷೆ ವಿಧಿಸಿತ್ತು.
ಶಿಕ್ಷೆ ಆದೇಶದ ವಿರುದ್ದ ಸೆಂಗಾರ್ ದೆಹಲಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದ. ಅದನ್ನು ವಿಚಾರಣೆ ನಡೆಸಿದ ಹೈಕೋರ್ಟ್, ಮೇಲ್ಮನವಿಯ ವಿಚಾರಣೆ ಪೂರ್ಣಗೊಳ್ಳುವವರೆಗೆ ಶಿಕ್ಷೆಯನ್ನು ಅಮಾನತಿನಲ್ಲಿಟ್ಟು 2025ರ ಡಿಸೆಂಬರ್ 23ರಂದು ಆದೇಶಿಸಿದೆ.
ಸಾಧ್ಯವಾದಷ್ಟು ಬೇಗ ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ (ರಜಾ ಕಾಲದ ಅರ್ಜಿ) ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಸಿಬಿಐ ವಕ್ತಾರರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
“ಈ ವಿಷಯದಲ್ಲಿ ಸಿಬಿಐ ಸಕಾಲಿಕ ಉತ್ತರಗಳು ಮತ್ತು ಲಿಖಿತ ವಾದಗಳನ್ನು ಸಲ್ಲಿಸಿದೆ. ಬಲಿಪಶುವಿನ ಕುಟುಂಬವು ಸುರಕ್ಷತೆ ಮತ್ತು ಬೆದರಿಕೆಗಳನ್ನು ಉಲ್ಲೇಖಿಸಿ ಅರ್ಜಿಯನ್ನು ವಿರೋಧಿಸಿದೆ. ಸಿಬಿಐ ತಕ್ಷಣವೇ ಈ ಆದೇಶವನ್ನು ಪ್ರಶ್ನಿಸುತ್ತದೆ” ಎಂದು ಸಿಬಿಐ ವಕ್ತಾರರು ಹೇಳಿದ್ದಾರೆ.
ಸಿಬಿಐ ಜೊತೆಗೆ ಸಂತ್ರಸ್ತೆ ಕೂಡ ದೆಹಲಿ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ತಿಳಿಸಿದ್ದಾರೆ.
ದೆಹಲಿ ಹೈಕೋರ್ಟ್ ಆದೇಶ ಹೊರಬಿದ್ದ ಬಳಿಕ ಸಂತ್ರಸ್ತೆ, ಆಕೆಯ ತಾಯಿ ಮತ್ತು ಸಹೋದರಿ ಇಂಡಿಯಾ ಗೇಟ್ ಬಳಿ ಪ್ರತಿಭಟಿಸಿದ್ದರು. ಅವರನ್ನು ಅಲ್ಲಿಂದ ತೆರವುಗೊಳಿಸುವ ವೇಳೆ ಸಿಆರ್‌ಪಿಎಫ್ ಸಿಬ್ಬಂದಿ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಈ ನಡುವೆ ಕೇಳಿ ಬಂದಿದೆ. ಇದು ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದೆ.
ಡಿಸೆಂಬರ್ 23 ಬುಧವಾರ ಹೈಕೋರ್ಟ್ ಆದೇಶ ಹೊರಬಿದ್ದಿದ್ದು, ಅಂದೇ ಸಂಜೆ ಸಂತ್ರಸ್ತೆಯ ಕುಟುಂಬ ಪ್ರತಿಭಟಿಸಿದೆ. ಡಿಸೆಂಬರ್ 24 ನಿನ್ನೆ ಸಂತ್ರಸ್ತೆ ಮತ್ತು ಆಕೆಯ ತಾಯಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರನ್ನು ದೆಹಲಿಯಲ್ಲಿ ಭೇಟಿಯಾಗಿ ಕಾನೂನು ಹೋರಾಟಕ್ಕೆ ಸಹಾಯ ಕೋರಿದ್ದಾರೆ.
ಹಿರಿಯ ವಕೀಲರನ್ನು ನೇಮಿಸಿ ಸಹಾಯ ಮಾಡುವಂತೆ ಮತ್ತು ಸುರಕ್ಷತೆಯ ದೃಷ್ಟಿಯಿಂದ ತಮ್ಮನ್ನು ಕಾಂಗ್ರೆಸ್ ಆಡಳಿತದ ರಾಜ್ಯಕ್ಕೆ ಸ್ಥಳಾಂತರಿಸುವಂತೆ ಸಂತ್ರಸ್ತೆ ರಾಹುಲ್ ಗಾಂಧಿಗೆ ಮನವಿ ಮಾಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
“ದೆಹಲಿ ಹೈಕೋರ್ಟ್ ಆದೇಶ ನನಗೆ ಸಾವಿಗಿಂತ ಕಡಿಮೆಯೇನಲ್ಲ. ಹೈಕೋರ್ಟ್ ಆದೇಶದ ಬಳಿಕ ನಮಗೆ ನೀಡಲಾದ ಭದ್ರತೆ ಹಿಂಪಡೆಯಲಾಗಿದೆ” ಎಂದು ಸಂತ್ರಸ್ತೆ ಹೇಳಿಕೊಂಡಿದ್ದಾರೆ.
“ಇಂತಹ ಪ್ರಕರಣಗಳ ಅಪರಾಧಿಗಳಿಗೆ ಜಾಮೀನು ಸಿಕ್ಕರೆ ದೇಶದ ಹೆಣ್ಣು ಮಕ್ಕಳು ಸುರಕ್ಷಿತರಾಗಿಲು ಹೇಗೆ ಸಾಧ್ಯ? ಇದು ನನಗೆ ಸಾವಿಗಿಂತ ಕಡಿಮೆಯೇನಲ್ಲ” ಎಂದು ಆಕೆ ನೋವು ತೋಡಿಕೊಂಡಿದ್ದಾರೆ.


