ಉನ್ನಾವೋ ಅತ್ಯಾಚಾರ ಪ್ರಕರಣದ ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್‌ನ ಜೀವಾವಧಿ ಶಿಕ್ಷೆ ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಇಬ್ಬರು ಮಹಿಳಾ ವಕೀಲರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.
ಕುಲದೀಪ್ ಸಿಂಗ್ ಸೆಂಗಾರ್‌ಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಅಮಾನತುಗೊಳಿಸಿ0, ಜಾಮೀನು ಮಂಜೂರು ಮಾಡಿರುವ ದೆಹಲಿ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ವಕೀಲರಾದ ಅಂಜಲೆ ಪಟೇಲ್ ಮತ್ತು ಪೂಜಾ ಶಿಲ್ಪ್ಕರ್ ಅವರು ವಕೀಲ ಸಂಜೀವ್ ಮಲ್ಹೋತ್ರಾ ಮೂಲಕ ವಿಶೇಷ ರಜಾ ಅವಧಿಯ ಅರ್ಜಿ (ಎಸ್‌ಎಲ್‌ಪಿ) ಸಲ್ಲಿಸಿದ್ದಾರೆ.
“ಹೈಕೋರ್ಟ್ ಆದೇಶದಲ್ಲಿ ದೋಷವಿದೆ. ಹಾಗಾಗಿ, ಸುಪ್ರೀಂ ಕೋರ್ಟ್ ಈ ವಿಚಾರದಲ್ಲಿ ಮಧ್ಯಪ್ರವೇಶಿಸಬೇಕು. ತನ್ನ ಅಧಿಕಾರವನ್ನು ಬಳಸಿಕೊಂಡು ಸೆಂಗಾರ್‌ನ ಶಿಕ್ಷೆ ಅಮಾನತು ಮತ್ತು ಜಾಮೀನನ್ನು ರದ್ದಗೊಳಿಸಬೇಕು” ಎಂದು ಅರ್ಜಿದಾರರು ಕೋರಿದ್ದಾರೆ.
ಈ ಅರ್ಜಿಯನ್ನು ಸುಪ್ರೀಂ ಕೋರ್ಟ್‌ನ ನಿಯಮಗಳು ಮತ್ತು ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನಗಳ ಪ್ರಕಾರ ವಿಚಾರಣೆ ಪಟ್ಟಿ ಮಾಡಬಹುದು. ಅರ್ಜಿದಾರರಾದ ಅಂಜಲೆ ಪಟೇಲ್ ಮತ್ತು ಪೂಜಾ ಶಿಲ್ಪ್ಕರ್ ಜೋಡಿ ಸೆಂಗಾರ್ ಬಂಧನ ಮತ್ತು ಶಿಕ್ಷೆಗೆ ಸಂಬಂಧಿಸಿದ ಮೂಲ ಪ್ರಕರಣದ ಪಕ್ಷಕಾರರು ಎಂಬುದನ್ನು ಇಲ್ಲಿ ಗಮನಾರ್ಹ.
ವಿಚಾರಣಾ ನ್ಯಾಯಾಲಯ ಎಲ್ಲಾ ಸಾಕ್ಷ್ಯಗಳನ್ನು ವಿಚಾರಣೆ ನಡೆಸಿ, ದಾಖಲೆಗಳನ್ನು ಪರಿಶೀಲಿಸಿ ಅಂತಿಮವಾಗಿ ಸೆಂಗಾರ್‌ಗೆ ಜೀವಿತವಾಧಿ ಶಿಕ್ಷೆ ವಿಧಿಸಿದೆ. ಹೀಗಿರುವಾಗ, ಶಿಕ್ಷೆ ಅಮಾನತು ಮತ್ತು ಜಾಮೀನು ಕೋರಿ ಅರ್ಜಿ ಸಲ್ಲಿಸಲು ಆತನಿಗೆ ಹೈಕೋರ್ಟ್ ಅವಕಾಶ ನೀಡಿರುವುದು ನ್ಯಾಯ ಸಮ್ಮತವಲ್ಲ ಎಂದು ಅರ್ಜಿದಾರರು ವಾದಿಸಿದ್ದಾರೆ.
ಅಪರಾಧದ ಗಂಭೀರತೆ, ಅಪರಾಧಿಯ ಕ್ರಿಮಿನಲ್ ಹಿನ್ನೆಲೆ ಮತ್ತು ವಿಚಾರಣಾ ನ್ಯಾಯಾಲಯ ಕೊಟ್ಟ ತೀರ್ಪನ್ನು ಸರಿಯಾಗಿ ಪರಿಗಣಿಸದೆ ಹೈಕೋರ್ಟ್ ಆದೇಶ ನೀಡಿದಂತಾಗಿದೆ ಎಂದಿದ್ದಾರೆ. ಅಪರಾಧ ನ್ಯಾಯ ವ್ಯವಸ್ಥೆಯ ಪಾವಿತ್ರ್ಯವನ್ನು ಎತ್ತಿಹಿಡಿಯಲು ಮತ್ತು ನ್ಯಾಯದ ಆಡಳಿತದಲ್ಲಿ ಸಾರ್ವಜನಿಕ ವಿಶ್ವಾಸವನ್ನು ಕಾಪಾಡಿಕೊಳ್ಳಲು ದೆಹಲಿ ಹೈಕೋರ್ಟ್ ಆದೇಶದಲ್ಲಿ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕೆಂದು ಮನವಿ ಮಾಡಿದ್ದಾರೆ.
ಪ್ರಸ್ತುತ ಎಸ್‌ಎಲ್‌ಪಿ (ಕ್ರಿಮಿನಲ್) ಅನ್ನು ಭಾರತದ ಸಂವಿಧಾನದ 136 ನೇ ವಿಧಿಯ ಅಡಿಯಲ್ಲಿ ಸಲ್ಲಿಸಲಾಗಿದೆ.
“ವಿಚಾರಣಾ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸುವ ಆದೇಶವನ್ನು ಹೊರಡಿಸಿದ್ದಲ್ಲದೆ, ಕುಲದೀಪ್ ಸಿಂಗ್ ಸೆಂಗಾರ್ ತನ್ನ ಉಳಿದ ಜೀವನದುದ್ದಕ್ಕೂ ನ್ಯಾಯಾಂಗ ಬಂಧನದಲ್ಲಿರಬೇಕೆಂದು ಹೇಳಿದೆ. ಇದು ಯಾವುದೇ ನ್ಯಾಯಾಂಗ ವೇದಿಕೆಗೆ ಸರಿಯಾದ ಕಾರಣಗಳನ್ನು ನೀಡದೆ ಆತ ಜೀವಿತಾವಧಿಯಲ್ಲಿ ಜೈಲಿನಿಂದ ಬಿಡುಗಡೆಯಾಗಲು ಸಾಧ್ಯವಿಲ್ಲ ಎಂದು ತೋರಿಸಿದೆ. ಆದ್ದರಿಂದ, ಸಂಪೂರ್ಣ ನ್ಯಾಯಕ್ಕಾಗಿ ಸುಪ್ರೀಂ ಕೋರ್ಟ್‌ನ ಹಸ್ತಕ್ಷೇಪದ ಅಗತ್ಯವಿದೆ” ಎಂದು ವಕೀಲರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾರೆ.


