ಬುಧವಾರ (ಡಿ.24) ಒಡಿಶಾದ ಸಂಬಾಲ್‌ಪುರದಲ್ಲಿ ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ಜಿಲ್ಲೆಯ 30 ವರ್ಷದ ವಲಸೆ ಕಾರ್ಮಿಕರೊಬ್ಬರನ್ನು ಗುಂಪು ಹತ್ಯೆ ಮಾಡಲಾಗಿದೆ. ಈ ಸಂಬಂಧ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಬಲಿಯಾದ ವ್ಯಕ್ತಿಯನ್ನು ಜ್ಯುವೆಲ್ ಶೇಖ್ ಎಂದು ಗುರುತಿಸಲಾಗಿದೆ. ಇವರು ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ನ ಚಕ್ಬಹಾದೂರ್ಪುರ ಗ್ರಾಮದವರು. ಒಡಿಶಾದ ಸಂಬಾಲ್‌ಪುರದಲ್ಲಿ ನಿರ್ಮಾಣ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದರು.
ಬಾಂಗ್ಲಾದೇಶದಿಂದ ಬಂದ ದಾಖಲೆರಹಿತ ವಲಸೆಗಾರ ಎಂದು ಆರೋಪಿಸಿ ಥಳಿಸಿ ಹತ್ಯೆ ಮಾಡಲಾಗಿದೆ ಎಂದು ಮೃತನ ಸಹೋದ್ಯೋಗಿಗಳು ಮತ್ತು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ, ಒಡಿಶಾ ಪೊಲೀಸರು ಇದನ್ನು ನಿರಾಕರಿಸಿದ್ದು, ಮೃತ ವ್ಯಕ್ತಿ ಮತ್ತು ಆರೋಪಿಗಳು ಪರಸ್ಪರ ಮೊದಲೇ ಪರಿಚಯ ಇದ್ದರು ಎಂದಿದ್ದಾರೆ.
ಬುಧವಾರ ಸಂಜೆ ಜ್ಯುವೆಲ್ ಶೇಖ್ ಮತ್ತು ಇತರ ನಿರ್ಮಾಣ ಕಾರ್ಮಿಕರು ಕೆಲಸದಿಂದ ಹಿಂತಿರುಗುತ್ತಿದ್ದಾಗ ಸಂಬಾಲ್‌ಪುರದ ಶಾಂತಿನಗರ ಪ್ರದೇಶದಲ್ಲಿ ಹಲ್ಲೆ ನಡೆದಿದೆ ಎಂದು ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಹೇಳಿದೆ.
“ಹಲ್ಲೆ ಮಾಡಿದವರು ಪಕ್ಕದ ಟೀ ಸ್ಟಾಲ್‌ನಲ್ಲಿದ್ದರು. ಅವರು ಜ್ಯುವೆಲ್ ಶೇಖ್‌ನೊಂದಿಗೆ ಬೀಡಿ ಕೇಳಿದರು. ನಂತರ ನಮ್ಮ ಆಧಾರ್ ಕಾರ್ಡ್ ಕೇಳಲು ಪ್ರಾರಂಭಿಸಿದರು, ನೀವು ಎಲ್ಲಿಂದ ಬಂದಿದ್ದೀರಿ ಎಂದು ಪ್ರಶ್ನಿಸಿದರು. ನಾವು ನಮ್ಮ ಆಧಾರ್ ಕಾರ್ಡ್‌ಗಳನ್ನು ತೋರಿಸಿದೆವು. ಇದ್ದಕ್ಕಿದ್ದಂತೆ, ಅವರು ಬಿದಿರಿನ ಕೋಲುಗಳಿಂದ ನಮ್ಮನ್ನು ಹೊಡೆಯಲು ಪ್ರಾರಂಭಿಸಿದರು. ಇದರಿಂದ ಜ್ಯುವೆಲ್ ತಲೆಗೆ ಪೆಟ್ಟಾಯಿತು. ನಮ್ಮ ಜೊತೆಗಿದ್ದ ಇನ್ನೂ ಕೆಲವರು ಗಾಯಗೊಂಡರು” ಎಂದು ಜ್ಯುವೆಲ್ ಶೇಖ್ ಜೊತೆಗಿದ್ದ ಮುರ್ಷಿದಾಬಾದ್‌ನ ಪಾಲ್ಟು ಶೇಖ್ ತಿಳಿಸಿದ್ದಾರೆ.
ಗಾಯಗೊಂಡಿದ್ದ ಜ್ಯುವೆಲ್ ಶೇಖ್ ಅವರನ್ನು ಆಸ್ಪತ್ರೆಗೆ ಕರೆದೊಯ್ದೆವು. ಆದರೆ, ವೈದ್ಯರು ಅವರು ಮೃತಪಟ್ಟಿರುವುದಾಗಿ ತಿಳಿಸಿದರು. ದಾಳಿಯಲ್ಲಿ ಇತರ ಇಬ್ಬರು ಕಾರ್ಮಿಕರಾದ ಅಕಿರ್ ಶೇಖ್ ಮತ್ತು ಪಲಾಶ್ ಶೇಖ್ ಕೂಡ ಗಾಯಗೊಂಡಿದ್ದು, ಅವರನ್ನು ಸಂಬಾಲ್‌ಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪಾಲ್ಟು ಶೇಖ್ ವಿವರಿಸಿದ್ದಾರೆ.
“ನಾವು 12 ವರ್ಷಗಳಿಂದ ಒಡಿಶಾದಲ್ಲಿ ಕೆಲಸ ಮಾಡುತ್ತಿದ್ದೇವೆ. ಇಂತಹ ಘಟನೆ ನಡೆದಿರುವುದು ಇದೇ ಮೊದಲು” ಎಂದು ಪಾಲ್ಟು ಶೇಖ್ ಹೇಳಿರುವುದಾಗಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಉಲ್ಲೇಖಿಸಿದೆ.
ಪಶ್ಚಿಮ ಬಂಗಾಳದ ಕಾರ್ಮಿಕರು ಹಲವಾರು ವರ್ಷಗಳಿಂದ ಈ ಪ್ರದೇಶದಲ್ಲಿ ವಾಸಿಸುತ್ತಿದ್ದು, ಅಲ್ಲಿನ ನಿವಾಸಿಗಳಿಗೆ ಪರಿಚಿತರು ಎಂದು ಸಂಬಾಲ್‌ಪುರ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮಂತ ಬಾರಿಕ್ ತಿಳಿಸಿದ್ದಾರೆ.
ಬೀಡಿ ಬೇಡಿಕೆಯ ಮೇರೆಗೆ ಈ ಹಲ್ಲೆ ನಡೆದಿದೆ. ಬಂಗಾಳಿ ವಲಸೆ ಕಾರ್ಮಿಕರು ಬೀಡಿ ಕೊಡಲು ನಿರಾಕರಿಸಿದ ನಂತರ ಗುಂಪು ಏಕಾಏಕಿ ಅವರ ಮೇಲೆ ದಾಳಿ ಮಾಡಿದೆ. ಘಟನೆ ಸಂಬಂಧ ನಾವು ಆರು ಜನರನ್ನು ಬಂಧಿಸಿದ್ದೇವೆ. ಇನ್ನೂ ಹೆಚ್ಚಿನವರು ಭಾಗಿಯಾಗಿದ್ದಾರೆಯೇ ಎಂದು ತನಿಖೆ ನಡೆಸುತ್ತಿದ್ದೇವೆ ಎಂದು ಬಾರಿಕ್ ಮಾಹಿತಿ ನೀಡಿದ್ದಾರೆ.
ಸಂಬಾಲ್‌ಪುರ ಉತ್ತರ ವಲಯ ಪೊಲೀಸ್ ಮಹಾನಿರ್ದೇಶಕ ಹಿಮಾಂಶು ಲಾಲ್ ಕೂಡ, ಈ ಕೊಲೆ ಹಠಾತ್ ಪ್ರಚೋದನೆಯ ಪರಿಣಾಮವಾಗಿ ನಡೆದಿದೇ ಹೊರತು, ಉದ್ದೇಶಿತ ದಾಳಿಯಲ್ಲ. ಆರೋಪಿಗಳೆಲ್ಲರನ್ನೂ ಬಂಧಿಸಲಾಗಿದೆ ಎಂದು ಹೇಳಿಕೊಂಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.
ಘಟನೆಯ ನಂತರ, ಸ್ಥಳೀಯ ತೃಣಮೂಲ ಕಾಂಗ್ರೆಸ್ (ಟಿಎಂಸಿ) ನಾಯಕರು ಮತ್ತು ಪಶ್ಚಿಮ ಬಂಗಾಳದ ಸುತಿಯ ಶಾಸಕ ಇಮಾನಿ ಬಿಸ್ವಾಸ್ ಅವರು ಜ್ಯುವೆಲ್ ಶೇಖ್ ಅವರ ಮನೆಗೆ ಭೇಟಿ ನೀಡಿ ಸಹಾಯದ ಭರವಸೆ ನೀಡಿದ್ದಾರೆ.
ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರನ್ನು ಮತ್ತೊಮ್ಮೆ ಗುರಿಯಾಗಿಸಲಾಗಿದೆ ಎಂದು ತೃಣಮೂಲ ಕಾಂಗ್ರೆಸ್ ಸಂಸದ ಮತ್ತು ಪಶ್ಚಿಮ ಬಂಗಾಳ ವಲಸೆ ಕಾರ್ಮಿಕ ಕಲ್ಯಾಣ ಮಂಡಳಿಯ ಅಧ್ಯಕ್ಷ ಸಮೀರುಲ್ ಇಸ್ಲಾಂ ಹೇಳಿದ್ದಾರೆ.
“ಬಿಜೆಪಿ ಬಂಗಾಳಿ ಮಾತನಾಡುವ ಎಷ್ಟು ಮುಗ್ಧ ಜನರ ಜೀವಗಳನ್ನು ಬಲಿ ತೆಗೆದುಕೊಳ್ಳಲು ಬಯಸಿದೆ?” ಎಂದು ಅವರು ಪ್ರಶ್ನಿಸಿದ್ದು, “ಬಿಜೆಪಿ ಬಂಗಾಳಿಗಳನ್ನು ಹೇಗೆ ನಡೆಸಿಕೊಳ್ಳುತ್ತದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆಯಾಗಿದೆ” ಎಂದಿದ್ದಾರೆ.


