ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯ (ಎಎಂಯು)ದ ಶಿಕ್ಷಕರೊಬ್ಬರನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಬುಧವಾರ (ಡಿ.24) ರಾತ್ರಿ ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಕೊಂದಿದ್ದು, ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳಲ್ಲಿ ಭೀತಿ ಮೂಡಿಸಿದೆ.
ಮೃತರನ್ನು ಎಎಂಯುನ ಎಬಿಕೆ ಯೂನಿಯನ್ ಹೈಸ್ಕೂಲ್‌ನ ಶಿಕ್ಷಕ ರಾವ್ ಡ್ಯಾನಿಶ್ ಎಂದು ಗುರುತಿಸಲಾಗಿದೆ. ಪೊಲೀಸರ ಪ್ರಕಾರ, ಎಎಂಯು ಕ್ಯಾಂಪಸ್‌ನ ಸಿವಿಲ್ ಲೈನ್ಸ್ ಪೊಲೀಸ್ ಠಾಣೆ ಪ್ರದೇಶದ ಗ್ರಂಥಾಲಯ ಕ್ಯಾಂಟೀನ್ ಬಳಿ ರಾತ್ರಿ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ.
ಡ್ಯಾನಿಶ್ ಅವರು ತನ್ನ ಸ್ನೇಹಿತರೊಂದಿಗೆ ಕುಳಿತಿದ್ದಾಗ ಅಪರಿಚಿತ ದಾಳಿಕೋರರು ದ್ವಿಚಕ್ರ ವಾಹನದಲ್ಲಿ ಬಂದು ಗುಂಡು ಹಾರಿಸಿದ್ದಾರೆ. ಡ್ಯಾನಿಶ್ ಅವರ ತಲೆಗೆ ಎರಡು ಬಾರಿ ಗುಂಡಿಕ್ಕಿದ ಪರಿಣಾಮ ಅವರಿಗೆ ಗಂಭೀರ ಗಾಯಗಳಾಗಿವೆ. ಗುಂಡು ಹಾರಿಸುವ ಮೊದಲು ದಾಳಿಕೋರರಲ್ಲಿ ಒಬ್ಬ “ಡ್ಯಾನಿಶ್, ಈಗ ನಿನಗೆ ನಾನು ಯಾರೆಂದು ಗೊತ್ತಾಗಿರುತ್ತೆ” ಎಂದು ಹೇಳಿದ್ದಾನೆ ಎನ್ನಲಾಗಿದೆ.
ಗಾಯಗೊಂಡಿದ್ದ ಡ್ಯಾನಿಶ್ ಅವರನ್ನು ತಕ್ಷಣ ಜೆಎನ್ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಗಿತ್ತು. ಅಲ್ಲಿ ಅವರು ಚಿಕಿತ್ಸೆಯ ಸಮಯದಲ್ಲಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ಘಟನೆಯನ್ನು ದೃಢಪಡಿಸಿರುವ ಎಎಂಯು ಪ್ರಾಕ್ಟರ್ ಪ್ರೊಫೆಸರ್ ಮೊಹಮ್ಮದ್ ವಾಸಿಂ ಅಲಿ, ಗ್ರಂಥಾಲಯದ ಬಳಿ ಗುಂಡಿನ ದಾಳಿ ನಡೆದ ಬಗ್ಗೆ ವಿಶ್ವವಿದ್ಯಾಲಯಕ್ಕೆ ಮಾಹಿತಿ ಬಂದಿತ್ತು, ಗಾಯಗೊಂಡಿದ್ದ ಶಿಕ್ಷಕನನ್ನು ವೈದ್ಯಕೀಯ ಚಿಕಿತ್ಸೆಗಾಗಿ ಕರೆದೊಯ್ಯಲಾಗಿತ್ತು. ಆದರೆ, ಚಿಕಿತ್ಸೆ ಪಡೆಯುತ್ತಿದ್ದಾಗ ಶಿಕ್ಷಕ ವೈದ್ಯಕೀಯ ಕಾಲೇಜಿನಲ್ಲಿ ನಿಧನರಾಗಿದ್ದಾರೆ. ಘಟನೆಯ ನಂತರ, ಎಎಂಯು ಉಪಕುಲಪತಿ ನೈಮಾ ಖಾತೂನ್ ಕೂಡ ವೈದ್ಯಕೀಯ ಕಾಲೇಜಿಗೆ ಆಗಮಿಸಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಅಲಿಗಢ ಎಸ್ಪಿ ಮಾಯಾಂಕ್ ಪಾಠಕ್ ಅವರು, ಆರೋಪಿಗಳ ಪತ್ತೆಗೆ ಪೊಲೀಸ್ ತಂಡಗಳನ್ನು ರಚಿಸಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡಲಾಗುತ್ತಿದೆ. ಮೃತ ಡ್ಯಾನಿಶ್ ಅವರೊಂದಿಗೆ ವೈಯಕ್ತಿಕ ದ್ವೇಷ ಸೇರಿದಂತೆ ಎಲ್ಲಾ ಸಂಭಾವ್ಯ ಕೋನಗಳ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಪೊಲೀಸರು ಮೃತನ ಕುಟುಂಬದಿಂದ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.


