ನಲ್ಬರಿ ಜಿಲ್ಲೆಯ ಶಾಲೆಯೊಂದಕ್ಕೆ ನುಗ್ಗಿ ಕ್ರಿಸ್‌ಮಸ್ ಅಲಂಕಾರವನ್ನು ಧ್ವಂಸ ಮಾಡಿದ, ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ) ಮತ್ತು ಬಜರಂಗದಳದ ನಾಲ್ವರನ್ನು ಅಸ್ಸಾಂ ಪೊಲೀಸರು ಗುರುವಾರ (ಡಿ.25) ಬಂಧಿಸಿದ್ದಾರೆ.
ಬಂಧಿತರನ್ನು ವಿಹೆಚ್‌ಪಿ ಜಿಲ್ಲಾ ಕಾರ್ಯದರ್ಶಿ ಭಾಸ್ಕರ್ ದೇಕಾ, ಜಿಲ್ಲಾ ಉಪಾಧ್ಯಕ್ಷ ಮನಶ್ ಜ್ಯೋತಿ ಪಟಗಿರಿ, ಸಹಾಯಕ (ಜೊತೆ) ಕಾರ್ಯದರ್ಶಿ ಬಿಜು ದತ್ತ ಮತ್ತು ಬಜರಂಗದಳದ ಜಿಲ್ಲಾ ಸಂಚಾಲಕ ನಯನ್ ತಾಲ್ಲೂಕುದಾರ್ ಎಂದು ಗುರುತಿಸಲಾಗಿದೆ.
ಬಂಧಿತರು ಬುಧವಾರ (ಡಿ.24) ನಲ್ಬರಿ ಜಿಲ್ಲೆಯ ಪಾಣಿಗಾಂವ್ ಗ್ರಾಮದ ಸೇಂಟ್ ಮೇರಿಸ್ ಶಾಲೆಗೆ ನುಗ್ಗಿ ದಾಂಧಲೆ ನಡೆಸಿದ್ದರು. ಶಾಲೆಯಲ್ಲಿ ಕ್ರಿಸ್‌ಮಸ್ ಪ್ರಯುಕ್ತ ಮಾಡಲಾಗಿದ್ದ ಅಲಂಕಾರವನ್ನು ಹಾಳುಗೆಡವಿ ಬೆಂಕಿ ಹಚ್ಚಿದ್ದರು. “ಜೈಶ್ರೀರಾಮ್” ಎಂಬ ಘೋಷಣೆಗಳನ್ನು ಕೂಗಿದ್ದರು. ಈ ಕುರಿತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಆರೋಪಿಗಳ ವಿರುದ್ದ ಕ್ರಿಮಿನಲ್ ಅತಿಕ್ರಮಣ, ಕಾನೂನುಬಾಹಿರ ಸಭೆ, ಕ್ರಿಮಿನಲ್ ಬೆದರಿಕೆ ಮತ್ತು ಕ್ರಿಮಿನಲ್ ಪಿತೂರಿ ಸೇರಿದಂತೆ ಹಲವು ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್) ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ವ್ಯಕ್ತಿಗಳ ಮೇಲೆ ದಾಳಿ, ಬೆಂಕಿ ಅಥವಾ ಸ್ಫೋಟಕ ವಸ್ತುಗಳ ಮೂಲಕ ದುಷ್ಕೃತ್ಯ ಎಸಗಿದ ಆರೋಪಗಳನ್ನೂ ಹೊರಿಸಲಾಗಿದೆ.
ನಲ್ಬರಿಯಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ, ಹಿಂದುತ್ವ ಸಂಘಟನೆಗಳ ಸುಮಾರು 15 ರಿಂದ 20 ಸದಸ್ಯರು ಅಂಗಡಿಯೊಂದಕ್ಕೆ ನುಗ್ಗಿ ಕ್ರಿಸ್‌ಮಸ್ ಅಲಂಕಾರಗಳನ್ನು ಸುಟ್ಟುಹಾಕಿ, ಅಂಗಡಿಯನ್ನು ಮುಚ್ಚುವಂತೆ ಒತ್ತಾಯಿಸಿದ್ದಾರೆ ಎಂದು ಅಸೋಮ್ ಲೈವ್ ವರದಿ ಮಾಡಿದೆ. ಈ ಕುರಿತು ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.


