ಜಾಗತಿಕವಾಗಿ 2025ರಲ್ಲಿ ನೂರಾ ಇಪ್ಪತ್ತೆಂಟು ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ ಎಂದು ಅಂತಾರಾಷ್ಟ್ರೀಯ ಪತ್ರಕರ್ತರ ಒಕ್ಕೂಟ ಬುಧವಾರ (ಡಿ.31) ತಿಳಿಸಿದೆ.
ಪತ್ರಕರ್ತರ ಹತ್ಯೆಗಳಲ್ಲಿ ಅರ್ಧಕ್ಕಿಂತ ಹೆಚ್ಚು (74) ಪಶ್ಚಿಮ ಏಷ್ಯಾದಲ್ಲಿ ಸಂಭವಿಸಿವೆ ಎಂದು ಬೆಲ್ಜಿಯಂ ಮೂಲದ ಒಕ್ಕೂಟ ತಿಳಿಸಿದೆ. ಪ್ಯಾಲೆಸ್ತೀನ್ ಪ್ರದೇಶದ ಮೇಲೆ ಇಸ್ರೇಲ್ ಆಕ್ರಮಣ ನಡೆಸಿದ ಸಮಯದಲ್ಲಿ ಗಾಝಾ ಒಂದರಲ್ಲೇ 44 ಪ್ರತಿಶತ (56) ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ ಎಂದು ಒಕ್ಕೂಟ ಹೇಳಿದೆ.
ಆಫ್ರಿಕಾದಲ್ಲಿ 18 ಪತ್ರಕರ್ತರು, ಏಷ್ಯಾ-ಪೆಸಿಫಿಕ್‌ನಲ್ಲಿ 15, ಅಮೆರಿಕದಲ್ಲಿ 11 ಮತ್ತು ಯುರೋಪಿನಲ್ಲಿ 10 ಪತ್ರಕರ್ತರು ಕೊಲ್ಲಲ್ಪಟ್ಟಿದ್ದಾರೆ. ಈ ಪಟ್ಟಿಯಲ್ಲಿ ಒಂಬತ್ತು ಆಕಸ್ಮಿಕ ಸಾವುಗಳೂ ಸೇರಿವೆ.
ಭಾರತದಲ್ಲಿ, ನಾಲ್ಕು ಸಾವುಗಳನ್ನು ಒಕ್ಕೂಟ ದಾಖಲಿಸಿದೆ. ಜನವರಿ 1, 2025 ರಂದು ಬಸ್ತಾರ್ ಜಂಕ್ಷನ್ ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ ಪತ್ರಕರ್ತ ಮುಖೇಶ್ ಚಂದ್ರಕರ್ ಅವರ ಹತ್ಯೆ ಇದರಲ್ಲಿ ಒಳಗೊಂಡಿದೆ.
ಛತ್ತೀಸ್‌ಗಢದ ಬಿಜಾಪುರ ಜಿಲ್ಲೆಯಲ್ಲಿ ರಸ್ತೆ ನಿರ್ಮಾಣ ಯೋಜನೆಯಲ್ಲಿನ ಅಕ್ರಮಗಳ ಬಗ್ಗೆ ವರದಿ ಮಾಡಿದ್ದಕ್ಕಾಗಿ ಮುಖೇಶ್ ಚಂದ್ರಕರ್ ಅವರನ್ನು ಕೊಲೆ ಮಾಡಲಾಗಿತ್ತು. ರಸ್ತೆ ಗುತ್ತಿಗೆದಾರರ ಆಸ್ತಿಯಲ್ಲಿರುವ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಅವರ ಶವ ಪತ್ತೆಯಾಗಿತ್ತು.
ಜಗತ್ತಿನಾದ್ಯಂತ 533 ಪತ್ರಕರ್ತರನ್ನು ತಮ್ಮ ಕರ್ತವ್ಯ ನಿರ್ವಹಿಸಿದ್ದಕ್ಕಾಗಿ ಜೈಲಿಗೆ ಹಾಕಲಾಗಿದೆ ಎಂದು ಒಕ್ಕೂಟ ತಿಳಿಸಿದೆ.
ಏಷ್ಯಾ-ಪೆಸಿಫಿಕ್ ಪ್ರದೇಶದಲ್ಲಿ ಜೈಲು ಶಿಕ್ಷೆಗೆ ಒಳಗಾದ ಪತ್ರಕರ್ತರ ಸಂಖ್ಯೆ ಅತಿ ಹೆಚ್ಚಿದೆ. ಈ ಪ್ರದೇಶದಲ್ಲಿ ಜೈಲಿನಲ್ಲಿರುವ 277 ಪತ್ರಕರ್ತರಲ್ಲಿ 143 ಮಂದಿ ಚೀನಾದಲ್ಲಿ ಮತ್ತು 49 ಮಂದಿ ಮ್ಯಾನ್ಮಾರ್‌ನಲ್ಲಿದ್ದಾರೆ.
2024ರಲ್ಲಿ, ಒಕ್ಕೂಟ 122 ಪತ್ರಕರ್ತರ ಸಾವುಗಳನ್ನು ಮತ್ತು 516 ಜನರನ್ನು ಜೈಲಿಗೆ ಹಾಕಲಾಗಿದೆ ಎಂದು ಹೇಳಿತ್ತು.
ಒಕ್ಕೂಟ ಪತ್ರಕರ್ತರನ್ನು ರಕ್ಷಿಸುವಲ್ಲಿ ಅಧಿಕಾರಿಗಳ ಅಥವಾ ಆಡಳಿತದ ‘ನಿರಂತರ ವೈಫಲ್ಯ’ ವನ್ನು ಖಂಡಿಸಿದೆ. ಹಿಂಸಾಚಾರವನ್ನು ಕೊನೆಗೊಳಿಸಲು ತಕ್ಷಣದ ಮತ್ತು ನಿರ್ಣಾಯಕ ಕ್ರಮಕ್ಕೆ ಕರೆ ನೀಡಿದೆ.
ಒಂದು ವರ್ಷದಲ್ಲಿ 128 ಪತ್ರಕರ್ತರು ಕೊಲ್ಲಲ್ಪಡುತ್ತಿರುವುದು ‘ಕೇವಲ ಅಂಕಿಅಂಶವಲ್ಲ, ಇದು ಜಾಗತಿಕ ಬಿಕ್ಕಟ್ಟು’ ಎಂದು ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಆಂಥೋನಿ ಬೆಲ್ಲಂಗರ್ ಹೇಳಿದ್ದಾರೆ.
ಪತ್ರಕರ್ತರು ತಮ್ಮ ಕೆಲಸ ಮಾಡಿದ್ದಕ್ಕಾಗಿ ಅವರನ್ನು ಗುರಿಯಾಗಿಸಿಕೊಳ್ಳುವ ಈ ಪ್ರವೃತ್ತಿ ಅತ್ಯಂತ ಕ್ರೂರ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸರ್ಕಾರಗಳು ಮಾಧ್ಯಮ ಕಾರ್ಯಕರ್ತರನ್ನು ರಕ್ಷಿಸಲು, ಕೊಲೆಗಾರರನ್ನು ನ್ಯಾಯಾಂಗದ ಮುಂದೆ ತರಬೇಕು ಮತ್ತು ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿಹಿಡಿಯಲು ಕಾರ್ಯನಿರ್ವಹಿಸಬೇಕು ಎಂದು ಆಗ್ರಹಿಸಿದ್ದಾರೆ.
1990ರಿಂದ ಮತ್ತು ವಾರ್ಷಿಕ ಪಟ್ಟಿ ಬಿಡುಗಡೆಯಾದ ನಂತರ, ಒಕ್ಕೂಟ ಜಾಗತಿಕವಾಗಿ 3,170ಕ್ಕೂ ಹೆಚ್ಚು ಪತ್ರಕರ್ತರ ಸಾವುಗಳನ್ನು ದಾಖಲಿಸಿದೆ, ಪ್ರತಿ ವರ್ಷ ಸರಾಸರಿ 91 ಕೊಲೆಗಳು ಸಂಭವಿಸುತ್ತಿವೆ.
ಡಿಸೆಂಬರ್ 10ರಂದು, ಕಮಿಟಿ ಟು ಪ್ರೊಟೆಕ್ಟ್ ಜರ್ನಲಿಸ್ಟ್ 2025 ರಲ್ಲಿ 126 ಪತ್ರಕರ್ತರು ಮತ್ತು ಮಾಧ್ಯಮ ಕಾರ್ಯಕರ್ತರು ಕೊಲ್ಲಲ್ಪಟ್ಟಿದ್ದಾರೆ ಎಂದು ಹೇಳಿತ್ತು. ಜಾಗತಿಕ ಮಾಧ್ಯಮ ಕಾವಲು ಸಂಸ್ಥೆಯು ಇಡೀ ವರ್ಷದ ಕೊನೆಯ 20 ದಿನಗಳನ್ನು ಒಳಗೊಂಡ ನವೀಕರಿಸಿದ ಪಟ್ಟಿಯನ್ನು ಇನ್ನೂ ಪ್ರಕಟಿಸಿಲ್ಲ.
ಡಿಸೆಂಬರ್ 23ರಂದು, ಫ್ರೀ ಸ್ಪೀಚ್ ಕಲೆಕ್ಟಿವ್ 2025ರಲ್ಲಿ ಭಾರತದಲ್ಲಿ ಎಂಟು ಪತ್ರಕರ್ತರನ್ನು ಕೊಲ್ಲಲಾಗಿದೆ ಎಂದು ಹೇಳಿತ್ತು.


