ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮದ ಅಂಗವಾಗಿ ಗುರುವಾರ (ಜ.1) ರಾತ್ರಿ ಬ್ಯಾನರ್ ಕಟ್ಟುವ ವಿಚಾರಕ್ಕೆ ಸಂಬಂಧಿಸಿ ರೆಡ್ಡಿ ಬಣಗಳ ನಡುವೆ ಘರ್ಷಣೆ ಉಂಟಾಗಿದ್ದು, ಈ ವೇಳೆ ಕಾಂಗ್ರೆಸ್ ಕಾರ್ಯಕರ್ತನೋರ್ವ ಗುಂಡು ತಗುಲಿ ಮೃತಪಟ್ಟ ಘಟನೆ ಬಳ್ಳಾರಿ ನಗರದ ಹವಂಬಾವಿಯಲ್ಲಿ ನಡೆದಿರುವುದಾಗಿ ವರದಿಯಾಗಿದೆ.
ಮೃತಪಟ್ಟ ವ್ಯಕ್ತಿಯನ್ನು ಬಳ್ಳಾರಿಯ ಹುಸೇನ್ ನಗರದ ನಿವಾಸಿ, ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ (28) ಎಂದು ಗುರುತಿಸಲಾಗಿದೆ.
ಗಲಾಟೆ ಪ್ರಕರಣ ಸಂಬಂಧ ಬಳ್ಳಾರಿ ನಗರದ ಬ್ರೂಸ್ ಪೇಟೆ ಠಾಣೆಯಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ, ಶ್ರೀರಾಮುಲು, ಸೋಮಶೇಖರ್ ರೆಡ್ಡಿ ಸೇರಿ 11 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಚಾನಳ್ ಶೇಖರ್ ಎಂಬುವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.
ಮಾಜಿ ಸಚಿವ ಜನಾರ್ದನ ರೆಡ್ಡಿ ಬೆಂಬಲಿಗರು ಹಾಗೂ ಕಾಂಗ್ರೆಸ್ ಶಾಸಕ ನಾರಾ ಭರತ್ ರೆಡ್ಡಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿದೆ. ಈ ವೇಳೆ ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್‌ಮ್ಯಾನ್ ಫೈರಿಂಗ್ ಮಾಡಿದ್ದಾರೆ ಎಂದು ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ.
ಜ.3ರಂದು ಬಳ್ಳಾರಿ ನಗರದಲ್ಲಿ ವಾಲ್ಮೀಕಿ ಪುತ್ಥಳಿ ಅನಾವರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ಹಿನ್ನೆಲೆ ಭರತ್ ರೆಡ್ಡಿ ಬೆಂಬಲಿಗರು ಜನಾರ್ದನ ರೆಡ್ಡಿ ಅವರ ಮನೆಯ ಮುಂಭಾಗ ಬ್ಯಾನರ್ ಅಳವಡಿಸಲು ಮುಂದಾಗಿದ್ದರು. ಇದಕ್ಕೆ ಜನಾರ್ದನ ರೆಡ್ಡಿ ಅಭಿಮಾನಿಗಳು ಮತ್ತು ಬೆಂಬಲಿಗರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.
ಬ್ಯಾನರ್ ವಿಚಾರವಾಗಿ ಆರಂಭವಾದ ಮಾತಿನ ಚಕಮಕಿ ಕೆಲವೇ ಕ್ಷಣಗಳಲ್ಲಿ ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿದೆ. ಈ ವೇಳೆ ಎರಡು ತಂಡಗಳ ನಡುವೆ ಕಲ್ಲು ತೂರಾಟ ನಡೆದಿದೆ. ಪರಿಸ್ಥಿತಿ ವಿಕೋಪಕ್ಕೆ ತಿರುಗಿದ ಹಿನ್ನೆಲೆ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ ಎನ್ನಲಾಗಿದೆ.
ಘಟನೆಯಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸೆಕ್ಷನ್ 144ರ ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅವಂಬಾವಿ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಬಿಗಿ ಭದ್ರತೆ ವಹಿಸಲಾಗಿದೆ.
ಘಟನೆಯ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಜನಾರ್ದನ ರೆಡ್ಡಿ, “ಭರತ್ ರೆಡ್ಡಿ ಮತ್ತು ಅವರ ಅಪ್ಪ ಕ್ರಿಮಿನಲ್‌ಗಳು. ಅವರಿಗೆ ಜನಪ್ರಿಯತೆ ಕಡಿಮೆಯಾಗಿದೆ, ಅಭಿವೃದ್ದಿ ಕೆಲಸಗಳು ಆಗುತ್ತಿಲ್ಲ. ಸೋಲುವ ಭೀತಿ ಶುರುವಾಗಿದೆ. ನಾವು ವಾಲ್ಮೀಕಿ ಪುತ್ಥಳಿ ಸ್ಥಾಪಿಸಿದ ಸ್ಥಳದಲ್ಲೇ ಮತ್ತೆ ಪುತ್ಥಳಿ ಸ್ಥಾಪನೆ ಮಾಡುತ್ತಿದ್ದಾರೆ” ಎಂದು ಹೇಳಿದ್ದಾರೆ.
“ನಮ್ಮ ಮನೆಗೆ ಅಡ್ಡಲಾಗಿದೆ ಬ್ಯಾನರ್ ಕಟ್ಟಲು ಮುಂದಾಗಿದ್ದರು. ಈ ವೇಳೆ ನಾನು ಗಂಗಾವತಿಯಲ್ಲಿದ್ದೆ. ಮನೆ ಮುಂದೆ ಗನ್ ಹಿಡಿದುಕೊಂಡು ಒಂದಷ್ಟು ಜನರು ಗುಂಪು ಸೇರಿದ್ದಾರೆ ಎಂಬ ವಿಷಯ ತಿಳಿದು, ನಾನು ಶ್ರೀರಾಮುಲು ಅವರಿಗೆ ಕರೆ ಮಾಡಿದೆ. ಅವರು ಸ್ಥಳಕ್ಕೆ ಬಂದರು. ನಂತರ ನಾನು ಗಂಗಾವತಿಯಿಂದ ಬಂದೆ. ನಾನು ಬಂದ ತಕ್ಷಣ ಕಲ್ಲು ತೂರಾಟ ಮಾಡಿದರು. ನನ್ನ ಮೇಲೆ ಗುಂಡು ಹಾರಿಸಲು ಯತ್ನಿಸಿದರು. ಅದು ತಪ್ಪಿ ವಾಹನದ ಮೇಲೆ ಬಿತ್ತು, ಅವರು ನನ್ನ ಕೊಲೆಗೆ ಸಂಚು ರೂಪಿಸಿದ್ದರು” ಎಂದು ಆರೋಪಿಸಿದ್ದಾರೆ.
“ಬ್ಯಾನರ್ ನೆಪ ಮಾತ್ರ. ಅವರು ಕ್ರಿಮಿನಲ್ ಸಂಚು ರೂಪಿಸಿದ್ದರು. ನನ್ನ ಮನೆಯ ಸುತ್ತಮುತ್ತಲಿನ ಕಟ್ಟಡಗಳ ಮೇಲೆ ಮೊದಲೇ ಕಲ್ಲು, ಬಾಟಲಿ ಸಂಗ್ರಹಿಸಿಟ್ಟಿದ್ದರು. ಸಂಜೆ ಆಗುವಾಗ ದಾಳಿ ಮಾಡಿದ್ದಾರೆ. ಇದು ಪೂರ್ವ ನಿಯೋಜಿತ ಕೃತ್ಯ ಎಂದಿದ್ದಾರೆ.
ಶಾಸಕ ಭರತ್ ರೆಡ್ಡಿ ಮಾತನಾಡಿ, “ಜನಾರ್ದನ ರೆಡ್ಡಿಗೆ ಬಳ್ಳಾರಿ ಅಭಿವೃದ್ದಿ ಆಗಬೇಕು ಎನ್ನುವ ಉದ್ದೇಶ ಇಲ್ಲ. ಅವರು ತನ್ನ ಸ್ವಂತ ಬೆಳವಣಿಗೆ ಮಾಡಿಕೊಳ್ಳುತ್ತಿದ್ದಾರೆ. ನಾನು ಶಾಂತವಾಗಿ ಇದ್ದೇನೆ, ನಾನು ಮಾತನಾಡಿದರೆ ಬಳ್ಳಾರಿ ಭಸ್ಮ ಆಗುತ್ತೆ. ನಾನು ಮನಸ್ಸು ಮಾಡಿದ್ದರೆ ಅಂದುಕೊಂಡಿದ್ದನ್ನು 5 ನಿಮಿಷದಲ್ಲಿ ಮಾಡಿ ಮುಗಿಸುತ್ತಿದ್ದೆ. ಆದರೆ, ನಾನು ಓದಿದವನು, ಲಂಡನ್‌ನಲ್ಲಿ ಓದಿ ಬಂದವನು. ನಾನು ಹುಟ್ಟು ಶ್ರೀಮಂತ, ಜನಾರ್ದನ ರೆಡ್ಡಿ ಜನರನ್ನು ಲೂಟಿ ಮಾಡಿ ಶ್ರೀಮಂತರಾದವರು” ಎಂದಿದ್ದಾರೆ.
“ನಾನು ಶಾಸಕನಾದ ಬಳಿಕ ಬಳ್ಳಾರಿಯಲ್ಲಿ ಯಾವುದೇ ಅಹಿತರ ಘಟನೆ ಅಗಿಲ್ಲ. ಜನಾರ್ದನ ಕಡೆಯವರು ಈಗ ಮತ್ತೆ ಶುರು ಮಾಡಿಕೊಂಡಿದ್ದಾರೆ. ನಮ್ಮ ಕಾರ್ಯಕರ್ತನನ್ನು ಗುಂಡಿಕ್ಕಿ ಕೊಂದಿದ್ದಾರೆ. ಹಾಗಾಗಿ, ಜನಾರ್ದನ ರೆಡ್ಡಿ ಮತ್ತು ಅವರ ಬೆಂಬಲಿಗರ ವಿರುದ್ದ ದಲಿತ ದೌರ್ಜನ್ಯ ಹಾಗೂ ಕೊಲೆ ಪ್ರಕರಣ ದಾಖಲಿಸಿ ತಕ್ಷಣ ಬಂಧಿಸಬೇಕು” ಎಂದು ಆಗಹಿಸಿದ್ದಾರೆ.


