ಹೆಚ್ಚಿನ ನಾಗರಿಕರು ಭಾರತದಲ್ಲಿ ಚುನಾವಣೆಗಳು ಮುಕ್ತ ಮತ್ತು ನ್ಯಾಯಯುತವಾಗಿ ನಡೆಯುತ್ತಿವೆ ಎಂದು ನಂಬುತ್ತಾರೆ ಹಾಗೂ ವಿದ್ಯುನ್ಮಾನ ಮತಯಂತ್ರಗಳ (ಇವಿಎಂ) ಮೇಲಿನ ನಂಬಿಕೆ ಹೆಚ್ಚಾಗಿದೆ ಎಂದು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಪ್ರಕಟಿಸಿದ ರಾಜ್ಯವ್ಯಾಪಿ ಸಮೀಕ್ಷೆಯ ಫಲಿತಾಂಶಗಳು ತಿಳಿಸಿವೆ ಎಂಬ ವರದಿಗೆ ಸಚಿವ ಪ್ರಿಯಾಂಕ್ ಖರ್ಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕುರಿತ ಡೆಕ್ಕನ್ ಹೆರಾಲ್ಡ್ ಪತ್ರಿಕಾ ವರದಿಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಪ್ರಿಯಾಂಕ್ ಖರ್ಗೆ, ರಾಜ್ಯ ಸರ್ಕಾರ ಸಮೀಕ್ಷೆ ಮಾಡಿಸಿಲ್ಲ. ಇದು ಚುನಾವಣಾ ಆಯೋಗದಿಂದ ರಾಜ್ಯ ಮುಖ್ಯ ಚುನಾವಣಾಧಿಕಾರಿಯ ಮೂಲಕ ಆಯೋಜಿಸಲಾದ ಸಮೀಕ್ಷೆ. ಪ್ರಧಾನಿ ಕಚೇರಿಯಲ್ಲೇ ಕೆಲಸ ಮಾಡುವ, ಪ್ರಧಾನಿಗೆ ಅದ್ಧೂರಿ ಗೌರವದ ಕಾಣಿಕೆ ನೀಡಿದ ಪ್ರಧಾನಿಯ ಸೇವಕನಿಂದ ನಡೆದ ಸಮೀಕ್ಷೆ ಎಂದಿದ್ದಾರೆ.
ಮುಂದುವರಿದು, ಸಮೀಕ್ಷೆ ನಡೆದಿದ್ದು ಮೇ 2025ರಲ್ಲಿ. ಕಾಂಗ್ರೆಸ್ ಪಕ್ಷ ಮತಗಳ್ಳತನ (ವೋಟ್ ಚೋರಿ) ಕುರಿತು ವಿವರವಾಗಿ ಬಹಿರಂಗಪಡಿಸಿದ್ದು ಆಗಸ್ಟ್ 2025ರಲ್ಲಿ ಎಂದು ತಿಳಿಸಿದ್ದಾರೆ.
ಪ್ರತಿ ವಿಧಾನಸಭಾ ವ್ಯಾಪ್ತಿಯಲ್ಲಿ ಕೇವಲ 50 ಜನರನ್ನು ಸಂದರ್ಶಿಸಿದ್ದ ಈ ಸಮೀಕ್ಷೆಯು ಸಂಖ್ಯೆಯಲ್ಲಿ ದುರ್ಬಲ, ಮಾದರಿಗಳಲ್ಲಿ ವ್ಯಾಪಕ ದೋಷ ಮತ್ತು ಆಯ್ಕೆ ಪ್ರಕ್ರಿಯೆಯಲ್ಲಿ ಪಕ್ಷಪಾತ ಹೊಂದಿದ್ದು ನಿರ್ಧಾರ ಕೈಗೊಳ್ಳಲು ಸೂಕ್ತವಾಗಿಲ್ಲ. ಆದರೂ ಬಿಜೆಪಿ ಈ ಸಮೀಕ್ಷೆಯನ್ನು “ರಾಜ್ಯ ಸರ್ಕಾರದ ಸಮೀಕ್ಷೆ” ಎಂದು ತಪ್ಪಾಗಿ ಪ್ರಚಾರ ಮಾಡುತ್ತಿದೆ. ಆಶ್ಚರ್ಯದ ವಿಷಯವೆಂದರೆ, ಆಳಂದ ಕ್ಷೇತ್ರದ ಮತಗಳ್ಳತನ ಆರೋಪ ಪಟ್ಟಿಯಲ್ಲಿ ಮಾಜಿ ಬಿಜೆಪಿ ಶಾಸಕರನ್ನು ಮೊದಲ ಆರೋಪಿ (ಎ1) ಎಂದು ಹೆಸರಿಸಿರುವುದರ ಬಗ್ಗೆ ಬಿಜೆಪಿ ಮೌನವಾಗಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಪ್ರಿಯಾಂಕ್ ಖರ್ಗೆ ಹಂಚಿಕೊಂಡಿರುವ ವರದಿಯಲ್ಲಿ, ಬೆಂಗಳೂರು, ಬೆಳಗಾವಿ, ಕಲಬುರಗಿ ಮತ್ತು ಮೈಸೂರಿನ ಆಡಳಿತ ವಿಭಾಗಗಳಲ್ಲಿರುವ 102 ವಿಧಾನಸಭಾ ಕ್ಷೇತ್ರಗಳಲ್ಲಿ 5,100 ಜನರನ್ನು ಒಳಗೊಂಡ ಈ ಸಮೀಕ್ಷೆಯನ್ನು ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ನಿಯೋಜಿಸಿದ್ದರು ಎಂದು ಹೇಳಲಾಗಿದೆ. ಆದರೆ, ವರದಿಯ ಆರಂಭದಲ್ಲಿ ಕರ್ನಾಟಕದ ಕಾಂಗ್ರೆಸ್ ಸರ್ಕಾರ ಬಿಡುಗಡೆ ಮಾಡಿದ ವರದಿ ಎಂದು ಹೇಳಲಾಗಿದೆ.
ಇದು 2024ರ ಲೋಕಸಭಾ ಚುನಾವಣೆಯ ನಂತರ ನಾಗರಿಕರ ಜ್ಞಾನ (Knowledge), ಧೋರಣೆ (Attitude) ಮತ್ತು ಅಭ್ಯಾಸ (Practice) ಅಂದರೆ ಕೆಎಪಿ (KAP) ಸಮೀಕ್ಷೆಯ ಅಂತಿಮ ಹಂತದ (endline) ಸಮೀಕ್ಷೆಯಾಗಿದೆ. ಈ ಸಮೀಕ್ಷೆಯ ವರದಿಯನ್ನು ಕರ್ನಾಟಕ ಸರ್ಕಾರದ ಯೋಜನೆ, ಕಾರ್ಯಕ್ರಮ ಮೇಲ್ವಿಚಾರಣೆ ಮತ್ತು ಅಂಕಿಅಂಶಗಳ ಇಲಾಖೆಯಡಿ ಬರುವ ಕರ್ನಾಟಕ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಪ್ರಾಧಿಕಾರ ಪ್ರಕಟಿಸಿದೆ. ಈ ಸಮೀಕ್ಷೆಯು ಚುನಾವಣಾ ಆಯೋಗದ ಕಾರ್ಯಕ್ರಮದ ಪ್ರಭಾವವನ್ನು ಮೌಲ್ಯಮಾಪನ ಮಾಡಲು ನಡೆಸಲಾಗಿದ್ದು, ಕರ್ನಾಟಕದಲ್ಲಿ ಮತದಾರರ ಚುನಾವಣಾ ಪ್ರಕ್ರಿಯೆ ಬಗ್ಗೆ ತಿಳುವಳಿಕೆ, ನಂಬಿಕೆ ಮತ್ತು ಭಾಗವಹಿಸುವಿಕೆಯನ್ನು ಅಧ್ಯಯನ ಮಾಡಿದೆ ಎಂದು ವರದಿ ತಿಳಿಸಿದೆ.


