ತಮ್ಮ ಮಾತೃ ಭಾಷೆ ಬಂಗಾಳಿಯಲ್ಲಿ ಮಾತನಾಡಿದ್ದಕ್ಕಾಗಿ ಬಾಂಗ್ಲಾದೇಶೀಯರು ಎಂದು ಶಂಕಿಸಿ ಪಶ್ಚಿಮ ಬಂಗಾಳದ ಪಶ್ಚಿಮ ಬರ್ಧಮಾನ್ ಜಿಲ್ಲೆಯ ಮೂವರು ವಲಸೆ ಕಾರ್ಮಿಕರ ಮೇಲೆ ಮಹಾರಾಷ್ಟ್ರದಲ್ಲಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ. ಕಾರ್ಮಿಕರು ತಮ್ಮ ರಾಜ್ಯಕ್ಕೆ ಹಿಂತಿರುಗುತ್ತಿದ್ದಾಗ ಬಿಜೆಪಿ ಆಡಳಿತ ರಾಜ್ಯದಲ್ಲಿ ದಾಳಿ ನಡೆದಿದೆ.
ದಿಲೀಪ್ ಬಾಗ್ಡಿ, ಸಮೀರ್ ಬರುಯಿ ಮತ್ತು ಪಾಂಡಬೇಶ್ವರದ ಮತ್ತೊಬ್ಬ ಸಹೋದ್ಯೋಗಿ ಎಂದು ಗುರುತಿಸಲಾದ ಸಂತ್ರಸ್ತ ಕಾರ್ಮಿಕರು, ಮಹಾರಾಷ್ಟ್ರದಿಂದ ಪಶ್ಚಿಮ ಬಂಗಾಳಕ್ಕೆ ಹಿಂತಿರುಗುತ್ತಿದ್ದಾಗ ಈ ಘಟನೆ ನಡೆದಿದೆ. ಕೆಲವು ಸ್ಥಳೀಯ ಜನರು, ನಾವು ಬಂಗಾಳಿ ಮಾತನಾಡುವುದನ್ನು ಕೇಳಿದಾಗ ತೊಂದರೆ ಪ್ರಾರಂಭವಾಯಿತು ಎಂದು ಅವರು ಹೇಳಿದ್ದಾರೆ. ಕಾರ್ಮಿಕರ ಪ್ರಕಾರ, ನಾವು ಮೊದಲು ಪ್ರಯಾಣ ಟಿಕೆಟ್‌ಗಳನ್ನು ಖರೀದಿಸುವಾಗ ಹಿಂದಿಯಲ್ಲಿ ಮಾತನಾಡುತ್ತಿದ್ದೆವು, ಆದರೆ ಖಾಸಗಿಯಾಗಿ ಮಾತನಾಡುವಾಗ ಬಂಗಾಳಿ ಮಾತಾಡುತ್ತಿದ್ದೆವು ಎಂದು ಹೇಳಿಕೊಂಡಿದ್ದಾರೆ.
ಬಂಗಾಳಿ ಮಾತನಾಡುತ್ತಿದ್ದ ಕಾರ್ಮಿಕರನ್ನು ತಡೆದ ಸ್ಥಳೀಯರು ಅವರ ಗುರುತನ್ನು ಪ್ರಶ್ನಿಸಿದರು. ನಾವು ಪಶ್ಚಿಮ ಬಂಗಾಳದ ಭಾರತೀಯ ನಾಗರಿಕರು ಎಂದು ಪದೇ ಪದೇ ಹೇಳಿಕೊಂಡರೂ, ಸ್ಥಳೀಯರು ಅವರನ್ನು ಬಾಂಗ್ಲಾದೇಶಿಗಳು ಎಂದು ಒತ್ತಾಯಿಸಿ ಥಳಿಸಿದರು ಎಂದು ಅವರು ಆರೋಪಿಸಿದರು. ನಮ್ಮನ್ನು ಬಲವಂತವಾಗಿ ಬಸ್‌ನಿಂದ ಇಳಿಸಿ ಬೇರೆ ಸ್ಥಳಕ್ಕೆ ಸ್ಥಳಾಂತರಿಸಿ, ಆಧಾರ್ ಕಾರ್ಡ್‌ಗಳನ್ನು ಪರಿಶೀಲಿಸಲಾಯಿತು ಎಂದು ಕಾರ್ಮಿಕರು ಹೇಳಿದರು.
“ನಮ್ಮ ಆಧಾರ್ ಕಾರ್ಡ್‌ಗಳನ್ನು ತೋರಿಸಿದ ನಂತರವೂ, ನಾವು ಭಾರತೀಯರು ಎಂದು ಒಪ್ಪಿಕೊಳ್ಳಲು ಅವರು ನಿರಾಕರಿಸಿದರು” ಎಂದು ಸಮೀರ್ ಬರುಯಿ ಘಟನೆಯನ್ನು ವಿವರಿಸುತ್ತಾ ಹೇಳಿದರು.
ಕಾರ್ಮಿಕರು ತಮ್ಮ ಮೇಲೆ ತೀವ್ರ ಹಿಂಸಾಚಾರ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಬಿಸಿ ಚಹಾವನ್ನು ತಲೆಯ ಮೇಲೆ ಸುರಿದು, ತಲೆ ಮತ್ತು ಹೊಟ್ಟೆಗೆ ಮೇಲೆ ಒದ್ದರು. ದಾಳಿ ತಡೆಯುವ ಪ್ರಯತ್ನದಲ್ಲಿ, ಓರ್ವ ಕಾರ್ಮಿಕ ಅಸ್ವಸ್ಥನಾದಂತೆ ನಟಿಸಿದ ನಂತರವೂ ಹಲ್ಲೆ ಮುಂದುವರೆಯಿತು ಎಂದು ತಮ್ಮ ಅಸಹಾಯಕ ಸ್ಥಿತಿ ಕುರಿತು ಮಾತನಾಡಿದ್ದಾರೆ.
ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧ ರಾಜ್ಯಗಳಲ್ಲಿ, ವಿಶೇಷವಾಗಿ ಒಡಿಶಾ ಮತ್ತು ರಾಜಸ್ಥಾನ ಸೇರಿದಂತೆ ಬಿಜೆಪಿ ಆಡಳಿತವಿರುವ ಪ್ರದೇಶಗಳಲ್ಲಿ ಬಂಗಾಳಿ ಮಾತನಾಡುವ ವಲಸೆ ಕಾರ್ಮಿಕರ ಮೇಲೆ ಕಿರುಕುಳ ಮತ್ತು ಹಲ್ಲೆ ನಡೆಯುತ್ತಿರುವ ಬಗ್ಗೆ ಹೆಚ್ಚುತ್ತಿರುವ ದೂರುಗಳ ಮಧ್ಯೆ ಈ ಘಟನೆ ನಡೆದಿದೆ.
ಕಾರ್ಮಿಕರು ತವರಿಗೆ ಹಿಂದಿರುಗಿದ ನಂತರ, ಪಾಂಡಬೇಶ್ವರ ಶಾಸಕ ನರೇಂದ್ರನಾಥ್ ಚಕ್ರವರ್ತಿ ಭಾನುವಾರ ಅವರನ್ನು ಭೇಟಿ ಮಾಡಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ದೇಶಾದ್ಯಂತ ಬಂಗಾಳಿ ಮಾತನಾಡುವ ಜನರಿಗೆ ಹೆಚ್ಚುತ್ತಿರುವ ಪ್ರತಿಕೂಲ ವಾತಾವರಣಕ್ಕೆ ಅವರು ಕೇಂದ್ರ ಸರ್ಕಾರವನ್ನು ದೂಷಿಸಿದರು.
“ಇದು ಬಂಗಾಳಿಗಳ ವಿರುದ್ಧ ತೀವ್ರ ಕ್ರೌರ್ಯದ ಪ್ರದರ್ಶನವಾಗಿದೆ. ಪಶ್ಚಿಮ ಬಂಗಾಳವು ದೇಶದ ಎಲ್ಲ ಭಾಗಗಳ ಜನರನ್ನು ಸ್ವಾಗತಿಸಿದರೂ, ಬಂಗಾಳಿಗಳನ್ನು ಬೇರೆಡೆ ಗುರಿಯಾಗಿಸಲಾಗುತ್ತಿದೆ. ಜನರು ಇದನ್ನು ಕ್ಷಮಿಸುವುದಿಲ್ಲ” ಎಂದು ಚಕ್ರವರ್ತಿ ಹೇಳಿದರು.
ಆರೋಪಗಳಿಗೆ ಪ್ರತಿಕ್ರಿಯಿಸಿದ ಸ್ಥಳೀಯ ಬಿಜೆಪಿ ನಾಯಕ ದಿಲೀಪ್ ಚಕ್ರವರ್ತಿ, ಪಶ್ಚಿಮ ಬಂಗಾಳ ಸರ್ಕಾರವನ್ನು ದೂಷಿಸಿ, ರಾಜ್ಯದಲ್ಲಿ ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಕಾರ್ಮಿಕರು ಕೆಲಸ ಹುಡುಕಿಕೊಂಡು ಮಹಾರಾಷ್ಟ್ರ, ಗುಜರಾತ್ ಮತ್ತು ಛತ್ತೀಸ್‌ಗಢಕ್ಕೆ ವಲಸೆ ಹೋಗುತ್ತಿದ್ದಾರೆ ಎಂದು ಹೇಳಿದ್ದಾರೆ.
ಘಟನೆಯ ಹಿಂದೆ ರಾಜಕೀಯ ಹಿನ್ನೆಲೆ ಇರಬಹುದು ಎಂದು ಬಿಜೆಪಿ ಸೂಚಿಸಿದ್ದು, ಕಾರ್ಮಿಕರು ನೀಡಿದ ಹೇಳಿಕೆಗಳಲ್ಲಿ ವ್ಯತ್ಯಾಸ ಇದೆ ಎಂದು ಆರೋಪಿಸಿದೆ.


