ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ಮತ್ತು ಅವರ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಎನ್‌ಸಿಪಿ (ಎಸ್‌ಪಿ) ಶನಿವಾರ (ಜ.10) ಪುಣೆ ಮಹಾನಗರ ಪಾಲಿಕೆಗೆ ನಡೆಯಲಿರುವ ಚುನಾವಣೆಗೆ ಜಂಟಿ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿತು.
2023ರಲ್ಲಿ ಪಕ್ಷ ವಿಭಜನೆಯ ನಂತರ ಎರಡೂ ಬಣಗಳ ನಡುವೆ ಹೆಚ್ಚುತ್ತಿರುವ ಸಾಮೀಪ್ಯವನ್ನು ಸೂಚಿಸುವ ಜಂಟಿ ಪತ್ರಿಕಾಗೋಷ್ಠಿಯಲ್ಲಿ, ಅಜಿತ್ ಪವಾರ್ ಮತ್ತು ಅವರ ಸೋದರ ಸಂಬಂಧಿ, ಎನ್‌ಸಿಪಿ (ಎಸ್‌ಪಿ) ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ ವೇದಿಕೆಯನ್ನು ಹಂಚಿಕೊಂಡರು.
ಆಡಳಿತಾರೂಢ ಮಹಾಯುತಿಯ ಭಾಗವಾಗಿರುವ ಎನ್‌ಸಿಪಿ ಮತ್ತು ವಿರೋಧ ಪಕ್ಷ ಮಹಾ ವಿಕಾಸ್ ಅಘಾಡಿಯ ಭಾಗವಾಗಿರುವ ಎನ್‌ಸಿಪಿ (ಎಸ್‌ಪಿ) ಜನವರಿ 15ರಂದು ಪುಣೆ ಮತ್ತು ಪಿಂಪ್ರಿ ಚಿಂಚ್‌ವಾಡ್ ಪಾಲಿಕೆಗಳಿಗೆ ನಡೆಯುವ ಚುನಾವಣೆಗಳಿಗೆ ಒಂದಾಗಿವೆ.
ಇಲ್ಲಿಯವರೆಗೆ ಪ್ರಚಾರಕ್ಕೆ ಹೆಚ್ಚಾಗಿ ಗೈರುಹಾಜರಾಗಿದ್ದ ಸುಳೆ ಮತ್ತು ಇತರ ಎನ್‌ಸಿಪಿ (ಎಸ್‌ಪಿ) ನಾಯಕರು ಪ್ರಣಾಳಿಕೆ ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು.
ಪತ್ರಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅಜಿತ್ ಪವಾರ್, ಪ್ರಣಾಳಿಕೆಯು ಪುಣೆಯ ಪ್ರಮುಖ ನಾಗರಿಕ ಸಮಸ್ಯೆಗಳ ಮೇಲೆ ಕೇಂದ್ರೀಕರಿಸುತ್ತದೆ ಎಂದು ಹೇಳಿದ್ದಾರೆ. ಪ್ರಣಾಳಿಕೆಯಲ್ಲಿ ನಳ್ಳಿ ನೀರು ಸರಬರಾಜು, ಸಂಚಾರ ದಟ್ಟಣೆಯನ್ನು ನಿವಾರಿಸುವುದು, ಗುಂಡಿ-ಮುಕ್ತ ರಸ್ತೆಗಳು, ಸ್ವಚ್ಛತೆ, ಹೈಟೆಕ್ ಆರೋಗ್ಯ ಸೇವೆಗಳು, ಮಾಲಿನ್ಯ ನಿಯಂತ್ರಣ ಮತ್ತು ಕೊಳೆಗೇರಿ ಪುನರ್ವಸತಿಯ ಭರವಸೆಗಳನ್ನು ನೀಡಿದೆ ಎಂದು ವರದಿಗಳು ಹೇಳಿವೆ.
ಪ್ರಣಾಳಿಕೆಯು ಪಿಎಂಪಿಎಂಎಲ್ ಬಸ್‌ಗಳು ಮತ್ತು ಮೆಟ್ರೋದಲ್ಲಿ ಉಚಿತ ಪ್ರಯಾಣ, 500 ಚದರ ಅಡಿವರೆಗಿನ ಮನೆಗಳಿಗೆ ಆಸ್ತಿ ತೆರಿಗೆ ಮನ್ನಾ ಮತ್ತು ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ಟ್ಯಾಬ್ಲೆಟ್‌ಗಳನ್ನು ನೀಡುವ ಭರವಸೆಯನ್ನೂ ನೀಡಿದೆ.
ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯೊಂದಿಗೆ ಅಧಿಕಾರದಲ್ಲಿದ್ದರೂ, ಸ್ಥಳೀಯ ಬಿಜೆಪಿ ನಾಯಕತ್ವವನ್ನು ಗುರಿಯಾಗಿಸಿಕೊಂಡ ಅಜಿತ್ ಪವಾರ್, ಎರಡೂ ಸರ್ಕಾರಗಳಿಂದ ಗಣನೀಯ ಪ್ರಮಾಣದ ಹಣವನ್ನು ಪಡೆದಿದ್ದರೂ ಸಹ, ಬಿಜೆಪಿ ಪುಣೆ ಮತ್ತು ಪಿಂಪ್ರಿ ಚಿಂಚ್‌ವಾಡ್ ಅಭಿವೃದ್ಧಿಯನ್ನು ಹಳಿತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ.


