ಉತ್ತರ ಪ್ರದೇಶದ ಮೀರತ್‌ನಲ್ಲಿ ದಲಿತ ಮಹಿಳೆಯನ್ನು ಕೊಂದು, ಆಕೆಯ ಮಗಳನ್ನು ಅಪಹರಿಸಿದ ಆರೋಪಿಯನ್ನು ಪೊಲೀಸರು ಶನಿವಾರ (ಜ.10) ಬಂಧಿಸಿದ್ದಾರೆ.
ಬಂಧಿತನನ್ನು 22 ವರ್ಷದ ಪರಾಸ್ ಸೋಮ್ (ಪರಾಸ್ ಠಾಕೂರ್) ಎಂದು ಗುರುತಿಸಲಾಗಿದೆ. ರಜಪೂತ ಸಮುದಾಯದ ಈತ ಕಾಂಪೌಂಡರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಮೀರತ್ ಮತ್ತು ಸಹರಾನ್ಪುರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಹರಿದ್ವಾರ ಸಮೀಪ ಆರೋಪಿಯನ್ನು ಬಂಧಿಸಿದ್ದಾರೆ. ಆತನ ವಶದಲ್ಲಿದ್ದ ಯುವತಿಯನ್ನು ರಕ್ಷಿಸಿದ್ದಾರೆ. ಇಬ್ಬರನ್ನೂ ಮೀರತ್‌ಗೆ ಕರೆತರಲಾಗಿದೆ ಎಂದು ವರದಿಯಾಗಿದೆ.
ಯುವತಿಯ ಹೇಳಿಕೆ ಪಡೆಯುವುದು ಸೇರಿದಂತೆ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಯುವತಿ ಮತ್ತು ಆರೋಪಿ ಯುವಕನ ನಡುವೆ ಕಳೆದ ಮೂರು ವರ್ಷಗಳಿಂದ ಪ್ರೇಮ ಸಂಬಂಧವಿತ್ತು. ಈ ನಡುವೆ ಯುವತಿಯ ಕುಟುಂಬಸ್ಥರು ಆಕೆಗೆ ಬೇರೆ ಯುವಕನ ಜೊತೆ ಮದುವೆ ಮಾಡಲು ಮುಂದಾಗಿದ್ದರು. ಈ ವಿಷಯ ತಿಳಿದು ಆಕೆಯನ್ನು ಕರೆದೊಯ್ಯಲು ಯುವಕ ಮುಂದಾಗಿದ್ದ. ಇದಕ್ಕೆ ಅಡ್ಡಿಯಾದ ಆಕೆಯ ತಾಯಿಯನ್ನು ಕೊಲೆ ಮಾಡಿದ್ದಾನೆ ಎಂದು ಕೆಲ ವರದಿಗಳು ಹೇಳಿವೆ. ಅಪರಾಧದ ನಿಖರ ಕಾರಣ ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.
ಘಟನೆಯ ಹಿನ್ನೆಲೆ : ಮೀರತ್‌ನ ಸರ್ಧಾನ ಪೊಲೀಸ್ ಠಾಣೆ ವ್ಯಾಪ್ತಿಯ ಕಪ್ಸದ್ ಗ್ರಾಮದಲ್ಲಿ ಜನವರಿ 8ರಂದು ಬೆಳಿಗ್ಗೆ ಘಟನೆ ನಡೆದಿದೆ. ಯುವತಿ ಮತ್ತು ಆಕೆಯ ತಾಯಿ ಹೊಲಕ್ಕೆ ಕೆಲಸಕ್ಕೆ ಹೋಗುತ್ತಿದ್ದಾಗ, ಮಾರ್ಗ ಮಧ್ಯೆ ಅವರನ್ನು ತಡೆದ ಆರೋಪಿ ಪರಾಸ್ ಸೋಮ್, ಯುವತಿ ಜೊತೆ ಅನುಚಿತವಾಗಿ ವರ್ತಿಸಿದ್ದಾನೆ ಎಂದು ಆರೋಪಿಸಲಾಗಿದೆ. ಯುವತಿ ತಾಯಿ ಮಗಳನ್ನು ರಕ್ಷಿಸಲು ಮುಂದಾದಾಗ ಆರೋಪಿ ಪರಾಸ್ ಆಕೆಯ ತಲೆಗೆ ಹರಿತವಾಗಿ ಆಯುಧದಿಂದ ಹೊಡೆದಿದ್ದ. ಪರಿಣಾಮ ಆಕೆಗೆ ಗಂಭೀರ ಗಾಯವಾಗಿತ್ತು. ಸ್ಥಳೀಯರು ಅವರನ್ನು ತಕ್ಷಣ ಆಸ್ಪತ್ರೆಗೆ ಕರೆದೊಯ್ದರೂ, ತೀವ್ರ ರಕ್ತಸ್ರಾವದಿಂದ ಅವರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.
ತಾಯಿಯ ತಲೆಗೆ ಹೊಡೆದ ಬಳಿಕ, ಆರೋಪಿ ಪರಾಸ್ ಆತನ ಸಹಚರರ ಜೊತೆಗೂಡಿ ಯುವತಿಯನ್ನು ಅಪಹರಿಸಿದ್ದ. ಆರೋಪಿಯ ಸಹಚರರ ಪೈಕಿ ಓರ್ವನ ಹೆಸರು ಸುನಿಲ್ ಕುಮಾರ್ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.
ರಾಜಕೀಯ ನಾಯಕರಿಂದ ಖಂಡನೆ
ದಲಿತ ಮಹಿಳೆಯ ಕೊಲೆ ಮತ್ತು ಆಕೆಯ ಮಗಳ ಅಪಹರಣ ಪ್ರಕರಣ ಉತ್ತರ ಪ್ರದೇಶದ ಮಾತ್ರವಲ್ಲದೆ, ದೇಶದಾದ್ಯಂತ ಸುದ್ದಿಯಾಗಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಭೀಮ್ ಆರ್ಮಿ ಸೇರಿದಂತೆ ದಲಿತ ಸಂಘಟನೆಗಳು ಘಟನೆಯನ್ನು ಖಂಡಿಸಿ ಪ್ರತಿಭಟನೆ ನಡೆಸಿವೆ.
ಮಾಯಾವತಿ, ಅಖಿಲೇಶ್ ಯಾದವ್, ಚಂದ್ರಶೇಖರ್ ಆಝಾದ್ ಸೇರಿದಂತೆ ರಾಜಕೀಯ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. ಸಂತ್ರಸ್ತ ಕುಟುಂಬವನ್ನು ಭೇಟಿಯಾಗಲು ತೆರಳುತ್ತಿದ್ದ ಚಂದ್ರಶೇಖರ್ ಆಝಾದ್ ಅವರನ್ನು ಶನಿವಾರ ಪೊಲೀಸರು ತಡೆದಿದ್ದಾರೆ.
ಪೊಲೀಸರು ಕೊಲೆ, ಅಪಹರಣ ಮತ್ತು ಎಸ್‌ಸಿ/ಎಸ್‌ಟಿ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಗ್ರಾಮದಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ. ರಾಜಕೀಯ ಭೇಟಿಗಳನ್ನು ತಡೆಯಲು ರಸ್ತೆಗಳನ್ನು ಮುಚ್ಚಲಾಗಿದೆ. ಸಂತ್ರಸ್ತೆಯ ಕುಟುಂಬವು ಆರಂಭದಲ್ಲಿ ಅಂತ್ಯಕ್ರಿಯೆ ನಡೆಸಲು ನಿರಾಕರಿಸಿತ್ತು. ಆರೋಪಿಗಳ ಬಂಧನ ಮತ್ತು ಕಠಿಣ ಕ್ರಮಕ್ಕೆ ಒತ್ತಾಯಿಸಿತ್ತು.
ಕೊಲೆಯಾದ ಮಹಿಳೆಯ ಕುಟುಂಬಕ್ಕೆ ಆರಂಭದಲ್ಲಿ 10 ಲಕ್ಷ ರೂಪಾಯಿ ಪರಿಹಾರ ಮತ್ತು ಭದ್ರತೆಯನ್ನು ಒದಗಿಸುವುದಾಗಿ ಸರ್ಕಾರ ಭರವಸೆ ನೀಡಿದೆ.


