ಇರಾನ್‌ನಲ್ಲಿ ನಡೆಯುತ್ತಿರುವ ಆಡಳಿತ ವಿರೋಧಿ ದಂಗೆಯಲ್ಲಿ ಸಾವುಗಳು ಹೆಚ್ಚಾದರೆ ಅಮೆರಿಕ ಮಧ್ಯಪ್ರವೇಶಿಸಲಿದೆ ಎಂದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಇರಾನ್ ತಿರುಗೇಟು ನೀಡಿದೆ.
ಇರಾನ್‌ನ ಸಂಸತ್ತಿನ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್ “ಅಮೆರಿಕ ಇರಾನ್ ಮೇಲೆ ಸೇನಾ ದಾಳಿ ನಡೆಸಿದರೆ, ಅಮೆರಿಕದ ಸೈನ್ಯ ಮತ್ತು ಇಸ್ರೇಲ್ ಎರಡೂ ನಮ್ಮ ಕಾನೂನುಬದ್ಧ ಗುರಿಗಳಾಗುತ್ತವೆ” ಎಂದು ಎಚ್ಚರಿಸಿದ್ದಾರೆ.
ಸಂಸತ್ ಅಧ್ಯಕ್ಷರು ಈ ರೀತಿ ಹೇಳುತ್ತಿದ್ದಂತೆ, ಸಂಸದರು ಅಧ್ಯಕ್ಷರ ಪೀಠ ಏರಿ “ಅಮೆರಿಕಕ್ಕೆ ಮರಣ!” (Death to America!) ಎಂದು ಜೋರಾಗಿ ಕೂಗಿದ್ದಾರೆ.
“ಇರಾನ್‌ನ ಶಾಂತಿಯುತ ಪ್ರತಿಭಟನಾಕಾರರ ಹತ್ಯೆ ಮುಂದುವರಿದರೆ, ಅವರನ್ನು ರಕ್ಷಿಸಲು ಅಮೆರಿಕ ಮಧ್ಯ ಪ್ರವೇಶಿಸಲಿದೆ. ಹಿಂದೆಂದಿಗಿಂತಲೂ ಹೆಚ್ಚಾಗಿ ಇರಾನ್ ಸ್ವಾತಂತ್ರ್ಯ ಬಯಸುತ್ತಿದೆ. ಅದಕ್ಕೆ ಸಹಾಯ ಮಾಡಲು ಯುಎಸ್ ಸಿದ್ದವಾಗಿದೆ” ಎಂದು ಟ್ರಂಪ್ ಹೇಳಿದ್ದಾರೆ.
ಪ್ರತಿಭಟನಾಕಾರರು ವಿದೇಶಿ ಶಕ್ತಿಗಳ (ವಿಶೇಷವಾಗಿ ಅಮೆರಿಕ ಮತ್ತು ಇಸ್ರೇಲ್) ಬೆಂಬಲಿಗರು ಎಂದು ಇರಾನ್ ಆರೋಪಿಸಿದೆ. ದೇಶದಲ್ಲಿ ಆಡಳಿತ ವಿರೋಧಿ ದಂಗೆ ಏಳಿಸಿದ್ದೇ ಅಮೆರಿಕ ಮತ್ತು ಇಸ್ರೇಲ್ ಎಂದು ಹೇಳಿದೆ. ಇದನ್ನು ಪುಷ್ಠೀಕರಿಸುವಂತೆ ಇರಾನ್‌ನ ಮಾಜಿ ದೊರೆಯ ಮಗ ರೆಝಾ ಪಹ್ಲವಿ ಇರಾನ್‌ನ ಆಂತರಿಕ ವಿಚಾರದಲ್ಲಿ ಮಧ್ಯ ಪ್ರವೇಶಿಸುವಂತೆ ಟ್ರಂಪ್‌ಗೆ ಮನವಿ ಮಾಡಿದ್ದಾರೆ.
ಪ್ರತಿಭಟನಾಕಾರರು ಇರಾನ್ ಇಸ್ಲಾಮಿಕ್ ಗಣರಾಜ್ಯದ ಸರ್ವೋಚ್ಚ ನಾಯಕ ಅಯಾತೊಲ್ಲ ಖಮೇನಿಯನ್ನು ಪಟ್ಟದಿಂದ ಕೆಳಗಿಳಿಸುವ ಘೋಷಣೆಗಳನ್ನು ಕೂಗುತ್ತಿದ್ದಾರೆ ಮತ್ತು ಪಹ್ಲವಿ ರಾಜಾಡಳಿತವನ್ನು ಬಯಸುತ್ತಿದ್ದಾರೆ. ಇವೆಲ್ಲವೂ ಅಮೆರಿಕ ಮತ್ತು ಇಸ್ರೇಲ್‌ನ ಕುತಂತ್ರ. ಪಹ್ಲವಿ ಟ್ರಂಪ್‌ನ ಸಾಕು ನಾಯಿ ಎಂದು ಇರಾನ್ ಹೇಳಿದೆ.
ಪ್ರತಿಭಟನಾಕಾರರನ್ನು ‘ದೇವರ ವಿರೋಧಿಗಳು’ ಎಂದು ಇರಾನ್ ಸರ್ಕಾರ ಘೋಷಣೆ ಮಾಡಿದ್ದು, ಅವರಿಗೆ ಮರಣದಂಡನೆ ವಿಧಿಸಲು ಸಿದ್ದತೆ ನಡೆಸಿದೆ. ಈಗಾಗಲೇ 116ರಕ್ಕೂ ಹೆಚ್ಚು ಪ್ರತಿಭಟನಾಕಾರರು ಭದ್ರತಾ ಪಡೆಯ ಗುಂಡಿಗೆ ಬಲಿಯಾಗಿದ್ದಾರೆ.
ಇರಾನ್ ಸರ್ಕಾರದ ಅಧೀನದ ದೂರದರ್ಶನ ಸಂಸತ್ತಿನ ಅಧಿವೇಶನವನ್ನು ನೇರ ಪ್ರಸಾರ ಮಾಡಿದೆ. ಅದರಲ್ಲಿ ಕಂಡಂತೆ ಈ ಹಿಂದೆ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಸಂಸತ್ತಿನ ಹಾಲಿ ಅಧ್ಯಕ್ಷ ಮೊಹಮ್ಮದ್ ಬಾಗರ್ ಖಲೀಬಾಫ್, ಪ್ರತಿಭಟನೆಯ ಸಮಯದಲ್ಲಿ ಸರ್ಕಾರದ ಪರ ನಿಂತ ಪೊಲೀಸರು, ಇಸ್ಲಾಮಿಕ್ ಪ್ಯಾರಾಮಿಲಿಟರಿ ಪಡೆ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ (ಐಆರ್‌ಜಿಸಿ), ಅದರ ಸ್ವಯಂಸೇವಕ ತಂಡ ಬಸಿಜ್‌ಗೆ ಧನ್ಯವಾದ ಹೇಳಿದ್ದಾರೆ.
“ಪ್ರತಿಭಟನಾ ನಿರತ ಇರಾನಿನ ಜನರೇ, ನಾವು ನಿಮ್ಮನ್ನು ಬಂಧಿಸುತ್ತೇವೆ, ಕಠಿಣ ಕ್ರಮ ಕೈಗೊಳ್ಳುತ್ತೇವೆ” ಎಂದು ಖಲೀಬಾಫ್ ಎಚ್ಚರಿಕೆ ನೀಡಿದ್ದಾರೆ. ಆಕ್ರಮಿತ ಪ್ರದೇಶ ಎಂದ ಇಸ್ರೇಲ್ ಅನ್ನು ಉಲ್ಲೇಖಿಸಿರುವ ಖಲೀಬಾಫ್, ಇಸ್ರೇಲ್ ಮತ್ತು ಅಮೆರಿಕ ಮಿಲಿಟರಿ ಮೇಲೆ ನೇರ ದಾಳಿ ನಡೆಸುವ ಬೆದರಿಕೆ ಹಾಕಿದ್ದಾರೆ.
“ಇರಾನ್ ಮೇಲೆ ದಾಳಿಗೆ ಮುಂದಾದರೆ, ಆಕ್ರಮಿತ ಪ್ರದೇಶ ಮತ್ತು ಅದರೊಳಗಿರುವ ಅಮೆರಿಕದ ಎಲ್ಲಾ ಸೇನಾ ನೆಲೆಗಳು ಮತ್ತು ಹಡಗುಗಳು ನಮ್ಮ ಕಾನೂನುಬದ್ದ ಗುರಿಯಾಗಲಿದೆ. ನಾವು ದಾಳಿ ನಡೆದ ಮೇಲೆ ಪ್ರತಿದಾಳಿ ನಡೆಸುವುದಿಲ್ಲ. ದಾಳಿಯ ಸಣ್ಣ ಸೂಚನೆ ಸಿಕ್ಕರೂ ಕಠಿಣವಾಗಿ ಪ್ರತಿಕ್ರಿಯಿಸುತ್ತೇವೆ ಎಂದಿದ್ದಾರೆ.
2025ರ ಜೂನ್‌ನಲ್ಲಿ ಇಸ್ರೇಲ್ ಜೊತೆಗಿನ 12 ದಿನಗಳ ಸಂಘರ್ಷದಲ್ಲಿ ತನ್ನ ವಾಯು ರಕ್ಷಣಾ ಪಡೆಗಳು ನಾಶವಾದ ನಂತರ, ದಾಳಿ ನಡೆಸುವುದರ ಬಗ್ಗೆ ಇರಾನ್ ಎಷ್ಟು ಗಂಭೀರವಾಗಿದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಯುದ್ಧಕ್ಕೆ ಹೋಗುವ ಯಾವುದೇ ನಿರ್ಧಾರವು ಇರಾನ್‌ನ 86 ವರ್ಷದ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಮೇಲೆ ಅವಲಂಬಿತವಾಗಿದೆ.


