ಪೊಲೀಸ್ ತುರ್ತು ಸೇವೆ (112) ವಾಹನದ ಚಾಲಕ ಸೇರಿದಂತೆ ಐವರು ಪುರುಷರು 19 ವರ್ಷದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿರುವ ಘಟನೆ ಛತ್ತೀಸ್‌ಗಢದ ಕೋರ್ಬಾ ಜಿಲ್ಲೆಯ ಬಂಕಿಮೊಂಗ್ರ ಪ್ರದೇಶದಲ್ಲಿ ನಡೆದಿದೆ. ಜನವರಿ 8ರಂದು ರಾತ್ರಿ ಘಟನೆ ನಡೆದಿದ್ದು, ತಡವಾಗಿ ವರದಿಯಾಗಿದೆ.
ಆರೋಪಿಗಳಲ್ಲಿ ಒಬ್ಬ ಸಂತ್ರಸ್ತೆಯ ಪರಿಚಯಸ್ಥನಾಗಿದ್ದು, ಆಮಿಷವೊಡ್ಡಿ ಆಕೆಯನ್ನು ಸ್ಥಳಕ್ಕೆ ಕರೆಸಿಕೊಂಡಿದ್ದಾನೆ. ಬಳಿಕ ಆತನೂ ಸೇರಿದಂತೆ ಐವರು ಯುವತಿ ಮೇಲೆ ಎರಗಿದ್ದಾರೆ ಎಂದು ತಿಳಿದು ಬಂದಿದೆ.
ದೌರ್ಜನ್ಯದ ಬಳಿಕ ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿಯನ್ನು ಬಿಟ್ಟು ಆರೋಪಿಗಳು ಸ್ಥಳದಿಂದ ತೆರಳಿದ್ದರು. ಸ್ವಲ್ಪ ಹೊತ್ತಿನ ಬಳಿಕ ಚೇತರಿಸಿಕೊಂಡ ಆಕೆ ಮನೆಗೆ ತಲುಪಿದ್ದಾರೆ. ಮನೆಯವರಿಗೆ ನಡೆದ ವಿಷಯ ತಿಳಿಸಿದ್ದಾರೆ. ಅವರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿರುವ ಪೊಲೀಸರು ಈವರೆಗೆ ಗುತ್ತಿಗೆ ಆಧಾರಿತ ಉದ್ಯೋಗಿಯಾಗಿರುವ ತುರ್ತು ಸೇವೆ ವಾಹನದ ಚಾಲಕ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ. ಉಳಿದ ಮೂವರ ಬಂಧನಕ್ಕೆ ಬಲೆ ಬೀಸಿದ್ದಾರೆ.
ಘಟನೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ಉಂಟು ಮಾಡಿದೆ. ಗುತ್ತಿಗೆ ಆಧಾರದಲ್ಲಿ ಪೊಲೀಸ್ ತುರ್ತು ಸೇವೆಗಳಂತಹ ಕೆಲಸಗಳಿಗೆ ಸಿಬ್ಬಂದಿಯನ್ನು ನೇಮಿಸಿಕೊಳ್ಳುವಾಗ ಅವರ ಹಿನ್ನೆಲೆ ಸರಿಯಾಗಿ ಪರಿಶೀಲಿಸುತ್ತಿಲ್ಲ ಎಂದು ಸಾರ್ವಜನಿಕರು ದೂರಿದ್ದಾರೆ.
ತುರ್ತು ಸಂದರ್ಭಗಳಲ್ಲಿ ವಿಶೇಷವಾಗಿ ಮಹಿಳೆಯ ಸುರಕ್ಷತೆಯ ವಿಷಯದಲ್ಲಿ ತುರ್ತಾಗಿ ಪ್ರತಿಕ್ರಿಯಿಸಿ ಸಹಾಯ ಒದಗಿಸುವ ವಾಹನದ ಚಾಲಕನೇ, ಇಂತಹ ಹೀನ ಕೃತ್ಯಗಳಲ್ಲಿ ತೊಡಗಿದರೆ ಜನರು ಯಾರನ್ನು ನಂಬುವುದು ಎಂದು ಸಾರ್ವಜನಿಕರು ಪ್ರಶ್ನಿಸಿದ್ದಾರೆ.


