ಬೆಂಗಳೂರಿನ ರಾಮಮೂರ್ತಿ ನಗರದ ಸುಬ್ರಹ್ಮಣ್ಯ ಬಡಾವಣೆಯಲ್ಲಿ 2026ರ ಜನವರಿ 3ರಂದು ರಾತ್ರಿ ನಡೆದ ಮಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಶರ್ಮಿಳಾ ಕುಶಾಲಪ್ಪ (34) ಅವರ ಕೊಲೆ ಪ್ರಕರಣವನ್ನು ಪೊಲೀಸರು ಬೇಧಿಸಿದ್ದಾರೆ.
ಆರಂಭದಲ್ಲಿ, ಫ್ಲ್ಯಾಟ್‌ಗೆ ಬೆಂಕಿ ತಗುಲಿದ ಪರಿಣಾಮ ಹೊಗೆಯಿಂದ ಉಸಿರುಗಟ್ಟಿ ಶರ್ಮಿಳಾ ಅವರು ಸಾವಿಗೀಡಾಗಿದ್ದರು ಎಂದು ನಂಬಲಾಗಿತ್ತು. ಆದರೆ, ಪೊಲೀಸರ ತನಿಖೆಯಿಂದ ಅದು ಆಕಸ್ಮಿಕ ಸಾವಲ್ಲ, ಕೊಲೆ ಎಂದು ಗೊತ್ತಾಗಿದೆ. ಶರ್ಮಿಳಾ ಅವರನ್ನು ಕತ್ತು ಹಿಸುಕಿ ಕೊಂದು, ನಂತರ ಸಾಕ್ಷ್ಯಗಳನ್ನು ನಾಶಮಾಡಲು ಆಕೆಯ ಫ್ಲ್ಯಾಟ್‌ಗೆ ಬೆಂಕಿ ಹಚ್ಚಿದ ಆರೋಪದ ಮೇಲೆ 18 ವರ್ಷದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ಕೊಡಗು ಜಿಲ್ಲೆಯ ವಿರಾಜಪೇಟೆ ಮೂಲದ ಪಿಯುಸಿ ವಿದ್ಯಾರ್ಥಿ ಕರ್ನಲ್ ಕುರೈ ಕೆ ಎಂದು ಗುರುತಿಸಲಾಗಿದೆ. ಈತ ಶರ್ಮಿಳಾ ಅವರ ಪಕ್ಕದ ಫ್ಲಾಟ್‌ನಲ್ಲಿ ತನ್ನ ತಾಯಿಯೊಂದಿಗೆ ವಾಸಿಸುತ್ತಿದ್ದ.
ಶರ್ಮಿಳಾ ಅವರ ಸ್ನೇಹಿತರ ಹೇಳಿಕೆಗಳು ಮತ್ತು ವಿಧಿವಿಜ್ಞಾನ ಪರೀಕ್ಷೆಯ ಆಧಾರದ ಮೇಲೆ, ಪೊಲೀಸರು ಕರ್ನಲ್‌ನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ. ಪೊಲೀಸರ ಪ್ರಕಾರ, ಜನವರಿ 3ರಂದು ರಾತ್ರಿ 9 ಗಂಟೆಯ ಸುಮಾರಿಗೆ ಆರೋಪಿ ಕರ್ನಲ್ ಶರ್ಮಿಳಾ ಅವರ ಫ್ಲ್ಯಾಟ್‌ಗೆ ಸ್ಲೈಡಿಂಗ್ ಕಿಟಕಿ ಮೂಲಕ ಪ್ರವೇಶಿಸಿದ್ದ. ಶರ್ಮಿಳಾ ಮುಖಾಮುಖಿಯಾದಾಗ ಆಕೆಯೊಂದಿಗೆ ಲೈಂಗಿಕವಾಗಿ ಸಹಕರಿಸುವಂತೆ ಕೇಳಿದ್ದ. ಆಕೆ ವಿರೋಧಿಸಿದಾಗ ಬಾಯಿ ಮತ್ತು ಮೂಗನ್ನು ಒತ್ತಿ ಹಿಡಿದಿದ್ದಾನೆ. ಇದರಿಂದ ಶರ್ಮಿಳಾ ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.
ಶರ್ಮಿಳಾ ಅವರ ಮನೆಗೆ ಹೋಗಿರುವುದನ್ನು ಆರೋಪಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ, ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆಯೇ ಎಂಬುವುದು ಇನ್ನೂ ದೃಢವಾಗಿಲ್ಲ. ಕೆಲ ಮಾಧ್ಯಮಗಳು ಅತ್ಯಾಚಾರ ನಡೆದಿದೆ ಎಂದು ವರದಿ ಮಾಡಿವೆ.
ಶರ್ಮಿಳಾ ಅವರ ಮೃತದೇಹದ ಮೇಲೆ ರಕ್ತದ ಕಲೆಗಳು ಕಂಡು ಬಂದಿವೆ. ಆರೋಪಿ ಕೊಲೆ ಮಾಡಿದ ಬಳಿಕ ಸಾಕ್ಷ್ಯ ನಾಶ ಮಾಡಲು ಬಟ್ಟೆಗೆ ಬೆಂಕಿ ಹಚ್ಚಿದ್ದಾನೆ. ಬಳಿಕ ಒಳಗಡೆ ಪ್ರವೇಶಿಸಿದ ಅದೇ ಕಿಟಕಿಯ ಮೂಲಕ ಪರಾರಿಯಾಗಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ವಿಧಿವಿಜ್ಞಾನ ಮತ್ತು ಮರಣೋತ್ತರ ಪರೀಕ್ಷೆಯ ವರದಿಗಳು ಶರ್ಮಿಳಾ ಬೆಂಕಿ ಅವಘಡಕ್ಕೆ ಬಲಿಯಾಗಿದ್ದಾರೆ ಎಂಬ ಆರಂಭಿಕ ನಂಬಿಕೆಗೆ ವಿರುದ್ಧವಾಗಿ ಬಂದಿವೆ. ಆ ಬಳಿಕ ಪ್ರಕರಣ ತಿರುವು ಪಡೆದುಕೊಂಡಿದೆ. ಶರ್ಮಿಳಾ ಅವರ ಕೈಗಳ ಮೇಲಿದ್ದ ಗಾಯಗಳು, ಕೊನೆ ಕ್ಷಣದಲ್ಲಿ ಜೀವ ಉಳಿಸಿಕೊಳ್ಳಲು ಆಕೆ ಹೋರಾಟ ನಡೆಸಿದ್ದನ್ನು ಎತ್ತಿ ತೋರಿಸಿವೆ. ಮರಣೋತ್ತರ ಪರೀಕ್ಷೆಯ ವರದಿ ಬೆಂಕಿ ಆವರಿಸಿಕೊಳ್ಳುವ ಮುನ್ನವೇ ದೇಹದ ಮೇಲೆ ಗಾಯಗಳಾಗಿವೆ ಎಂಬುವುದಾಗಿ ಹೇಳಿವೆ ಎಂದು ತಿಳಿಸಿದ್ದಾರೆ.
ಕೊಲೆ ಮತ್ತು ಸಾಕ್ಷ್ಯ ನಾಶದ ಆರೋಪದ ಮೇಲೆ ಕರ್ನಲ್‌ನನ್ನು ಬಂಧಿಸಲಾಗಿದ್ದು, ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಪ್ರಕರಣದ ಹಿನ್ನೆಲೆ : ಜನವರಿ 3ರಂದು ರಾತ್ರಿ 10.30ರ ಸುಮಾರಿಗೆ ಶರ್ಮಿಳಾ ಅವರ ಫ್ಲ್ಯಾಟ್‌ನಿಂದ ಹೊಗೆ ಬರುತ್ತಿರುವುದನ್ನು ನೋಡಿದ ಅಪಾರ್ಟ್‌ಮೆಂಟ್ ಮಾಲೀಕ, ಅಗ್ನಿಶಾಮಕ ಸಿಬ್ಬಂದಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ತೆರಳಿದ ಅಗ್ನಿಶಾಮಕ ಸಿಬ್ಬಂದಿ ಫ್ಲ್ಯಾಟ್ ಬಾಗಿಲು ಒಡೆದು ಒಳನುಗ್ಗಿ ಬೆಂಕಿ ನಂದಿಸಿದ್ದರು. ಈ ವೇಳೆ ಅವರಿಗೆ ಶರ್ಮಿಳಾ ಅವರು ಅಡುಗೆ ಕೋಣೆ ಬಳಿ ಪ್ರಜ್ಞಾಹೀನರಾಗಿ ಬಿದ್ದಿರುವುದು ಕಂಡು ಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು, ಫ್ಲ್ಯಾಟ್‌ನಲ್ಲಿ ಬೆಂಕಿ ಹೊತ್ತಿಕೊಂಡು ಹೊಗೆ ಆವರಿಸಿದ ಕಾರಣ ಉಸಿರುಗಟ್ಟಿ ಶರ್ಮಿಳಾ ಸಾವಿಗೀಡಾಗಿರಬಹುದು ಎಂದು ಅಂದಾಜಿಸಿದ್ದರು. ಘಟನೆ ಸಂಬಂದ ಶರ್ಮಿಳಾ ಅವರ ಸ್ನೇಹಿತ ಕೆ. ರೋಹಿತ್ ಎಂಬವರು ದೂರು ದಾಖಲಿಸಿದ್ದರು. ಈ ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿದ್ದಾರೆ.


