ಇರಾನ್ ಜೊತೆ ವ್ಯಾಪಾರ ನಡೆಸುವ ಯಾವುದೇ ದೇಶದ ಮೇಲೆ ಶೇಕಡ 25ರಷ್ಟು ಸುಂಕ ವಿಧಿಸುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ (ಜ.12) ಘೋಷಿಸಿದ್ದಾರೆ.
“ತಕ್ಷಣದಿಂದಲೇ ಜಾರಿಗೆ ಬರುವಂತೆ, ಇರಾನ್ ಇಸ್ಲಾಮಿಕ್ ಗಣರಾಜ್ಯದೊಂದಿಗೆ ವ್ಯವಹಾರ ನಡೆಸುವ ಯಾವುದೇ ದೇಶವು ಅಮೆರಿಕ ಸಂಯುಕ್ತ ಸಂಸ್ಥಾನದೊಂದಿಗೆ ಮಾಡುವ ಎಲ್ಲಾ ವ್ಯವಹಾರಗಳ ಮೇಲೆ ಶೇಕಡ 25 ಸುಂಕವನ್ನು ಪಾವತಿಸಬೇಕು. ಈ ಆದೇಶವು ಅಂತಿಮ ಮತ್ತು ನಿರ್ಣಾಯಕವಾಗಿದೆ” ಎಂದು ಟ್ರಂಪ್ ಟ್ರುತ್ ಸೋಶಿಯಲ್‌ನಲ್ಲಿ ಹೇಳಿದ್ದಾರೆ.
ಟ್ರೇಡಿಂಗ್ ಎಕನಾಮಿಕ್ಸ್ ಎಂಬ ಆರ್ಥಿಕ ಡೇಟಾಬೇಸ್ ಪ್ರಕಾರ, ಚೀನಾ, ಟರ್ಕಿ, ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಇರಾಕ್ ಇರಾನ್‌ನ ಪ್ರಮುಖ ವ್ಯಾಪಾರ ಪಾಲುದಾರ ರಾಷ್ಟ್ರಗಳಾಗಿವೆ. ನಂತರ ಸ್ಥಾನದಲ್ಲಿ ಭಾರತವಿದೆ. ಹಾಗಾಗಿ, ಟ್ರಂಪ್‌ನ ಹೊಸ ಸುಂಕ ಭಾರತದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಇರಾನ್ ವಿರುದ್ಧ ಸಂಭಾವ್ಯ ಮಿಲಿಟರಿ ಕ್ರಮದ ಬಗ್ಗೆ ಟ್ರಂಪ್ ಚಿಂತಿಸುತ್ತಿರುವಾಗಲೇ ಈ ಸುಂಕ ಘೋಷಣೆ ಹೊರಬಿದ್ದಿದೆ. ಮಾನವ ಹಕ್ಕುಗಳ ಗುಂಪುಗಳು ಇರಾನ್‌ನಲ್ಲಿ ಸಾವಿನ ಸಂಖ್ಯೆ ಹೆಚ್ಚುತ್ತಿದೆ ಎಂದು ವರದಿ ಮಾಡಿವೆ.
ಇರಾನ್ ಮೇಲೆ ದಾಳಿ ನಡೆಸುವುದು ಅಮೆರಿಕ ಮುಂದಿರುವ ಹಲವು ಆಯ್ಕೆಗಳಲ್ಲಿ ಒಂದಾಗಿವೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಸೋಮವಾರ ಹೇಳಿದ್ದಾರೆ.
ಇರಾನ್ ಹೊರಗೆ (ಪ್ರಪಂಚಕ್ಕೆ) ಕಠಿಣವಾಗಿ, ಬಲಿಷ್ಠವಾಗಿ ಮಾತನಾಡುತ್ತಿದ್ದರೂ, ಒಳಗೆ (ಖಾಸಗಿಯಾಗಿ) ಟ್ರಂಪ್ ಪ್ರತಿನಿಧಿಯೊಂದಿಗೆ ಮಾತುಕತೆ ನಡೆಸಲು ಮುಕ್ತ ಮನಸ್ಸಿನಿಂದ, ಸೌಮ್ಯವಾದ ಧೋರಣೆಯನ್ನು ತೋರಿಸುತ್ತಿದೆ ಎಂದಿದ್ದಾರೆ.


