2024ರ ನವೆಂಬರ್‌ನಲ್ಲಿ ಶಾಹಿ ಜಾಮಾ ಮಸೀದಿ ಬಳಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪಾತ್ರವಿದೆ ಎಂಬ ಆರೋಪದ ಮೇಲೆ ಹಿರಿಯ ಅಧಿಕಾರಿಗಳು ಸೇರಿದಂತೆ 12 ಪೊಲೀಸ್ ಸಿಬ್ಬಂದಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಉತ್ತರ ಪ್ರದೇಶದ ಸಂಭಾಲ್ ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಸಂಭಾಲ್‌ನ ಸರ್ಕಲ್ ಆಫೀಸರ್ ಆಗಿದ್ದ ಮತ್ತು ಪ್ರಸ್ತುತ ಫಿರೋಝಾಬಾದ್‌ನಲ್ಲಿ ಹೆಚ್ಚುವರಿ ಪೊಲೀಸ್ ಸೂಪರಿಂಟೆಂಡೆಂಟ್ (ಗ್ರಾಮೀಣ) ಆಗಿ ನೇಮಕಗೊಂಡಿರುವ ಅನುಜ್ ಚೌಧರಿ ಮತ್ತು ಸಂಭಾಲ್ ಕೊತ್ವಾಲಿ ಚಂದೌಸಿಯ ಆಗಿನ ಸ್ಟೇಷನ್ ಹೌಸ್ ಆಫೀಸರ್ ಅನುಜ್ ತೋಮರ್ ಆರೋಪಿತರಲ್ಲಿ ಸೇರಿದ್ದಾರೆ. ಹಲವಾರು ಗುರುತಿಸಲಾಗದ ಪೊಲೀಸ್ ಸಿಬ್ಬಂದಿಗಳ ವಿರುದ್ಧವೂ ಪ್ರಕರಣಗಳನ್ನು ದಾಖಲಿಸಲು ನ್ಯಾಯಾಲಯ ನಿರ್ದೇಶಿಸಿದೆ.
ಹಿಂದುತ್ವ ಗುಂಪುಗಳ ವಲಯದಲ್ಲಿ ಪ್ರಸಿದ್ಧ ಪೊಲೀಸ್ ಅಧಿಕಾರಿಯಾಗಿದ್ದ ಅನುಜ್ ಚೌಧರಿ, ಹಿಂಸಾಚಾರದ ನಂತರ ಹೋಳಿ ಆಚರಣೆಗೆ ಸಂಬಂಧಿಸಿದಂತೆ ಮುಸ್ಲಿಂ ವಿರೋಧಿ ಹೇಳಿಕೆಗಳನ್ನು ನೀಡಿ ಸುದ್ದಿಯಾಗಿದ್ದರು.
ಖಗ್ಗು ಸರೈ ಅಂಜುಮಾನ್ ಪ್ರದೇಶದ ನಿವಾಸಿ ಯಾಮೀನ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವಿಭಾಂಶು ಸುಧೀರ್ ಈ ಆದೇಶ ಹೊರಡಿಸಿದ್ದಾರೆ.
2024ರ ನವೆಂಬರ್ 24 ರಂದು ಶಾಹಿ ಜಾಮಾ ಮಸೀದಿ ಪ್ರದೇಶದಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ನನ್ನ ಮಗ ಆಲಂ ಮೇಲೆ ಪೊಲೀಸರು ಗುಂಡು ಹಾರಿಸಿದ್ದರು ಎಂದು ಯಾಮೀನ್ ಆರೋಪಿಸಿದ್ದರು. ಅರ್ಜಿಯ ಪ್ರಕಾರ, ಆಲಂ ರಸ್ಕ್ ಮತ್ತು ಬಿಸ್ಕತ್ತುಗಳನ್ನು ಮಾರಾಟ ಮಾಡಲು ತೆರಳಿದ್ದಾಗ ಗಲಭೆಯ ನಡುವೆ ಸಿಲುಕಿದ್ದರು. ಪೊಲೀಸರು ಅವರ ಮೇಲೆ ಗುಂಡು ಹಾರಿಸಿದ್ದರು.
ಪ್ರತ್ಯಕ್ಷದರ್ಶಿಗಳು ಮತ್ತು ಕುಟುಂಬಸ್ಥರ ಪ್ರಕಾರ, ಹಿಂಸಾಚಾರದಲ್ಲಿ ಕನಿಷ್ಠ ಐವರು ಮುಸ್ಲಿಮರು ಸಾವನ್ನಪ್ಪಿದ್ದು, ಅವರಲ್ಲಿ ಹೆಚ್ಚಿನವರು ಪೊಲೀಸರ ಗುಂಡಿಗೆ ಬಲಿಯಾಗಿದ್ದಾರೆ.
ಭಯದಿಂದ ನನ್ನ ಮಗ ತಲೆಮರೆಸಿಕೊಂಡು ವೈದ್ಯಕೀಯ ಚಿಕಿತ್ಸೆ ಪಡೆದಿದ್ದಾನೆ. ನಂತರ ಗುಂಡಿನ ದಾಳಿಯಲ್ಲಿ ಭಾಗಿಯಾಗಿರುವ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾನೆ ಎಂದು ಯಾಮೀನ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಜನವರಿ 9ರಂದು ನಡೆದ ವಿಚಾರಣೆಯ ನಂತರ, ನ್ಯಾಯಾಲಯವು ಎಲ್ಲಾ ಹೆಸರಿಸಲಾದ ಮತ್ತು ಹೆಸರಿಸದ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ನಿರ್ದೇಶಿಸಿದೆ.
ಮಂಗಳವಾರ ಸಂಜೆ ನ್ಯಾಯಾಲಯದ ನಿರ್ಧಾರದ ಬಗ್ಗೆ ಕುಟುಂಬಕ್ಕೆ ತಿಳಿಸಲಾಗಿದೆ. ತಡವಾಗಿ ಆದೇಶ ಹೊರಡಿಸಿದ್ದರಿಂದ ಅದರ ಲಿಖಿತ ಪ್ರತಿ ಇನ್ನೂ ಬಂದಿಲ್ಲ ಎಂದು ಯಾಮೀನ್ ಅವರ ವಕೀಲ ಚೌಧರಿ ಅಖ್ತರ್ ಹುಸೇನ್ ತಿಳಿಸಿರುವುದಾಗಿ ಮಕ್ತೂಬ್ ಮೀಡಿಯಾ ವರದಿ ಮಾಡಿದೆ.
ಶಾಹಿ ಜಾಮಾ ಮಸೀದಿ ಮೂಲತಃ ದೇವಸ್ಥಾನವಾಗಿತ್ತು ಎಂಬ ಸಿವಿಲ್ ಮೊಕದ್ದಮೆಯ ನಂತರ, ನ್ಯಾಯಾಲಯದ ಆದೇಶದ ಮೇರೆಗೆ ಶಾಹಿ ಜಾಮಾ ಮಸೀದಿಯ ಸಮೀಕ್ಷೆಯ ಸಮಯದಲ್ಲಿ ಸಂಭಾಲ್‌ನಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. 2024ರ ನವೆಂಬರ್ 19 ಮತ್ತು ನವೆಂಬರ್ 24 ರಂದು ಎರಡು ಹಂತಗಳಲ್ಲಿ ಮಸೀದಿ ಸಂಕೀರ್ಣದಲ್ಲಿ ಸಮೀಕ್ಷೆಯನ್ನು ನಡೆಸಲಾಗಿತ್ತು. ಈ ಸಮಯದಲ್ಲಿ ದೊಡ್ಡ ಜನಸಮೂಹ ಜಮಾಯಿಸಿತ್ತು. ಹಿಂಸಾತ್ಮಕ ಪ್ರತಿಭಟನೆ ನಡೆದಿತ್ತು.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಸಂಭಾಲ್ ಕೊತ್ವಾಲಿ ಮತ್ತು ನಖಾಸಾ ಪೊಲೀಸ್ ಠಾಣೆಗಳಲ್ಲಿ ಪೊಲೀಸರು 12 ಪ್ರಕರಣಗಳನ್ನು ದಾಖಲಿಸಿದ್ದು, ಸಮಾಜವಾದಿ ಪಕ್ಷದ ಶಾಸಕ ಝಿಜಿಯಾವುರ್ ರೆಹಮಾನ್ ಬಾರ್ಕ್ ಮತ್ತು ಅದೇ ಪಕ್ಷದ ಶಾಸಕ ಇಕ್ಬಾಲ್ ಮಹಮೂದ್ ಅವರ ಪುತ್ರ ಸುಹೈಲ್ ಇಕ್ಬಾಲ್ ಸೇರಿದಂತೆ ಹಲವಾರು ವ್ಯಕ್ತಿಗಳ ವಿರುದ್ಧ ಪ್ರಕರಣಗಳು ದಾಖಲಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಲ್ಲಿಯವರೆಗೆ, ಶಾಹಿ ಜಾಮಾ ಮಸೀದಿ ಅಧ್ಯಕ್ಷ ಮತ್ತು ವಕೀಲ ಜಾಫರ್ ಅಲಿ ಸೇರಿದಂತೆ 134 ಆರೋಪಿಗಳನ್ನು ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. ಬಂಧಿತರಲ್ಲಿ ಮೂವರು ಮಹಿಳೆಯರು ಕೂಡ ಸೇರಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿರುವ ಗ್ಯಾಂಗ್‌ಸ್ಟರ್ ಶಾರಿಕ್ ಸಾಥಾ ಅವರ ಮೂವರು ಸಹಚರರಾದ ಮುಲ್ಲಾ ಅಫ್ರೋಝ್, ವಾರಿಸ್ ಮತ್ತು ಗುಲಾಮ್ ಅವರನ್ನೂ ಪೊಲೀಸರು ಜೈಲಿಗೆ ತಳ್ಳಿದ್ದಾರೆ.
ಅಲಹಾಬಾದ್ ಹೈಕೋರ್ಟ್ ಜಾಮೀನು ನೀಡಿದ ನಂತರ ಜಾಫರ್ ಅಲಿಯನ್ನು ಆಗಸ್ಟ್ 2024ರಲ್ಲಿ ಮೊರಾದಾಬಾದ್ ಜೈಲಿನಿಂದ ಬಿಡುಗಡೆ ಮಾಡಲಾಗಿದೆ.
ಗಲಭೆಯ ಸಮಯದಲ್ಲಿ ಪೊಲೀಸರಿಂದ ನಡೆದ ಹತ್ಯೆಗಳಲ್ಲಿ ನ್ಯಾಯ ದೊರಕಿಸುವ ಸಲುವಾಗಿ ಕಾನೂನು ಹೋರಾಟ ನಡೆಸಲು ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್) ಸಹಾಯ ಮಾಡಿದೆ. ಎಪಿಸಿಆರ್‌ನ ನದೀಮ್ ಖಾನ್ ನ್ಯಾಯಾಲಯದ ಆದೇಶವನ್ನು ಸ್ವಾಗತಿಸಿದ್ದಾರೆ. ಹೆಚ್ಚಿನ ಕುಟುಂಬಗಳು ಪೊಲೀಸ್ ಹಿಂಸಾಚಾರದ ಬಗ್ಗೆ ಹೇಳಿಕೊಳ್ಳುವ ಸಲುವಾಗಿ ಮುಂದೆ ಬರಲು ಈ ಆದೇಶ ಅನುಕೂಲ ಮಾಡಿಕೊಡಲಿದೆ ಎಂದಿದ್ದಾರೆ.


