ಕಾಂಗ್ರೆಸ್‌ಗೆ ಮರಳುವ ಇಂಗಿತ ವ್ಯಕ್ತಪಡಿಸಿದ ಎರಡು ದಿನಗಳ ಬಳಿಕ ಬಿಜೆಪಿ ನಾಯಕ ಮತ್ತು ಮಾಜಿ ಸಚಿವ ಮಹೇಂದ್ರಜೀತ್ ಸಿಂಗ್ ಮಾಳವೀಯ ಅವರ ಮನೆ ಮೇಲೆ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ದಾಳಿ ನಡೆಸಿದೆ ರಾಜಸ್ಥಾನ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಆರೋಪಿಸಿದ್ದಾರೆ.
ಕಾಂಗ್ರೆಸ್ ಮೂಲಗಳ ಪ್ರಕಾರ, ಮಂಗಳವಾರ ಬೆಳಿಗ್ಗೆ 9 ಗಂಟೆಯ ಸುಮಾರಿಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಮಾಳವೀಯ ಅವರಿಗೆ ಸಂಬಂಧಿಸಿದ ಮೂರು ಆಸ್ತಿಗಳ ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಅಶೋಕ್ ಗೆಹ್ಲೋಟ್ ಸರ್ಕಾರದಲ್ಲಿ ಸಚಿವರಾಗಿದ್ದ ಮತ್ತು ರಾಜಸ್ಥಾನದ ಬುಡಕಟ್ಟು ಕ್ಷೇತ್ರವಾದ ಬನ್ಸ್ವಾರಾದ ಮಾಜಿ ಸಂಸದರಾಗಿರುವ ಮಾಳವೀಯ, ಜೈಪುರದ ಕಾನ್ಸಿಟ್ಯೂಷನ್ ಕ್ಲಬ್‌ನಲ್ಲಿ ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ, ಪ್ರಧಾನ ಕಾರ್ಯದರ್ಶಿ ಸುಖಜಿಂದರ್ ಸಿಂಗ್ ರಾಂಧವಾ ಮತ್ತು ವಿರೋಧ ಪಕ್ಷದ ನಾಯಕ ಟಿಕಾರಾಮ್ ಜುಲ್ಲಿ ಅವರನ್ನು ಇತ್ತೀಚೆಗೆ ಭೇಟಿಯಾಗಿದ್ದರು.
ಎಸಿಬಿ ದಾಳಿಯ ಬಗ್ಗೆ ಪ್ರತಿಕ್ರಿಯಿಸಲು ಮಾಳವೀಯ ನಿರಾಕರಿಸಿದ್ದಾರೆ. ಆದರೆ, ಕಾಂಗ್ರೆಸ್ ರಾಜ್ಯಾಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರಾ ಇದನ್ನು ದೃಢಪಡಿಸಿದ್ದಾರೆ. ಇದು ‘ಪ್ರಜಾಪ್ರಭುತ್ವಕ್ಕೆ ಅವಮಾನ’ ಮತ್ತು ‘ರಾಜಕೀಯ ಸೇಡಿಗಾಗಿ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುವ ಒಂದು ಉದಾಹರಣೆ’ ಎಂದು ಹೇಳಿದ್ದಾರೆ.
“ಮಾಳವೀಯ ಅವರು ಬಿಜೆಪಿಯಲ್ಲಿ ಸಮಸ್ಯೆ ಅನುಭವಿಸುತ್ತಿದ್ದರು. ಅವರು ತಮ್ಮ ಮಾತೃ ಪಕ್ಷಕ್ಕೆ (ಕಾಂಗ್ರೆಸ್) ಮರಳಲು ಬಯಸಿದ್ದರು. ಇಲ್ಲಿ ಅವರಿಗೆ ಗೌರವ ಸಿಗುತ್ತದೆ. ಬಿಜೆಪಿಯಲ್ಲಿ ವಂಚನೆ, ಸುಳ್ಳು ಮತ್ತು ಅಪ್ರಾಮಾಣಿಕತೆಯನ್ನು ಬಿಟ್ರೆ ಬೇರೇನೂ ನಡೆಯುತ್ತಿಲ್ಲ” ಎಂದಿದ್ದಾರೆ.
ದಾಳಿಯ ಕುರಿತು ಭ್ರಷ್ಟಾಚಾರ ನಿಗ್ರಹ ದಳಕ್ಕೆ ಮಾಡಿದ ಕರೆಗಳು ಮತ್ತು ಸಂದೇಶಗಳಿಗೆ ಉತ್ತರ ಸಿಕ್ಕಿಲ್ಲ ಎಂದು ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಈ ವಾರದ ಆರಂಭದಲ್ಲಿ ತಮ್ಮ ನಿರ್ಧಾರ ಬದಲಾಯಿಸುವ (ಕಾಂಗ್ರೆಸ್‌ಗೆ ಮರಳುವ) ಇಂಗಿತ ವ್ಯಕ್ತಪಡಿಸಿದ್ದ ಮಾಳವೀಯ, ‘ಬಿಜೆಪಿ ಸರ್ಕಾರದ ಅಡಿಯಲ್ಲಿ ಕೆಲಸ ಮಾಡಲು ಅಸಮರ್ಥತೆ’ ಇದಕ್ಕೆ ಕಾರಣ ಎಂದು ಉಲ್ಲೇಖಿಸಿದ್ದರು. “ಬಿಜೆಪಿ ಸರ್ಕಾರದಲ್ಲಿ ಬಡವರ ಮಾತು ಕೇಳುವವರು ಯಾರೂ ಇಲ್ಲ. ನರೇಗಾ ಪಾವತಿಗಳು ತಿಂಗಳುಗಳಿಂದ ಬಾಕಿ ಉಳಿದಿವೆ ಮತ್ತು ರೈತರಿಗೆ ರಸಗೊಬ್ಬರಗಳು ಸಿಗುತ್ತಿಲ್ಲ. ನಾನು ಮುಖ್ಯಮಂತ್ರಿ ಮತ್ತು ರಾಜ್ಯಾಧ್ಯಕ್ಷರಿಗೆ ಹಲವಾರು ಬಾರಿ ಪತ್ರ ಬರೆದಿದ್ದೇನೆ, ಆದರೆ ಯಾವುದೇ ಪರಿಹಾರ ದೊರೆತಿಲ್ಲ. ಆದ್ದರಿಂದ, ಬುಡಕಟ್ಟು ಪ್ರದೇಶಗಳಲ್ಲಿ ಕಾಂಗ್ರೆಸ್ ಮಾತ್ರ ಸಾರ್ವಜನಿಕರನ್ನು ಮೇಲೆತ್ತಬಲ್ಲದು ಎಂದು ನಾನು ಒಪ್ಪಿಕೊಂಡಿದ್ದೇನೆ” ಎಂದು ಅವರು ಮಾಧ್ಯಮಗಳಿಗೆ ತಿಳಿಸಿದ್ದರು.
ಮಾಳವೀಯ ಅವರ ಮರಳುವಿಕೆಯ ಕುರಿತು ನಿರ್ಧಾರ ತೆಗೆದುಕೊಳ್ಳುವುದನ್ನು ನಾವು ಶಿಸ್ತು ಸಮಿತಿಗೆ ಬಿಟ್ಟಿದ್ದೇವೆ ಕಾಂಗ್ರೆಸ್ ರಾಜ್ಯಾಧ್ಯಕ್ಷ ದೋತಾಸ್ರಾ ಹೇಳಿದ್ದಾರೆ.


