ರಾಷ್ಟ್ರ ರಾಜಧಾನಿಯಲ್ಲಿ ಮಸೀದಿ ಮತ್ತು ದರ್ಗಾಗಳು ಅತಿಕ್ರಮಣ ಮಾಡುತ್ತಿವೆ ಎಂದು ಆರೋಪಿಸಿ ಪದೇ ಪದೇ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಿದ್ದಕ್ಕಾಗಿ ಸೇವ್ ಇಂಡಿಯಾ ಫೌಂಡೇಶನ್ ಎಂಬ ಸಂಸ್ಥೆಯನ್ನು ದೆಹಲಿ ಹೈಕೋರ್ಟ್ ಬುಧವಾರ (ಜ.14) ತರಾಟೆಗೆ ತೆಗೆದುಕೊಂಡಿದೆ ಎಂದು ಬಾರ್ & ಬೆಂಚ್ ವರದಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ತೇಜಸ್ ಕರಿಯಾ ಅವರಿದ್ದ ವಿಭಾಗೀಯ ಪೀಠವು, ಸಂಸ್ಥೆಯ ನಡವಳಿಕೆಯನ್ನು ಮೆಚ್ಚುವುದಿಲ್ಲ, ಅದು ನ್ಯಾಯಾಲಯದ ಪಿಐಎಲ್ ವ್ಯಾಪ್ತಿಯನ್ನು ದುರುಪಯೋಗಪಡಿಸಿಕೊಳ್ಳುತ್ತಿದೆ ಎಂದು ಹೇಳಿದೆ.
“ನೀವು ಒಂದೇ ರೀತಿಯ ಅತಿಕ್ರಮಣವನ್ನು ನೋಡುತ್ತಿದ್ದೀರಾ? ನಾವು ಇದನ್ನು ಮೆಚ್ಚುವುದಿಲ್ಲ. ನೀವು ನ್ಯಾಯಾಲಯದ ಪ್ರಕ್ರಿಯೆಯನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದೀರಿ. ಪ್ರತಿ ವಾರ ನೀವು ನಗರವನ್ನು ಸುತ್ತಿ ಕೆಲವು ಧಾರ್ಮಿಕ ರಚನೆಗಳನ್ನು ನೋಡಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸುತ್ತೀರಿ” ಎಂದು ಮುಖ್ಯ ನ್ಯಾಯಮೂರ್ತಿ ಉಪಾಧ್ಯಾಯ ಟೀಕಿಸಿದ್ದಾರೆ. ಮಾನವೀಯ ಸೇವೆ ಸಲ್ಲಿಸಲು ಇತರ ಮಾರ್ಗಗಳಿವೆ ಎಂದು ಅವರು ಒತ್ತಿ ಹೇಳಿದ್ದಾರೆ.
“ನೀವು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್‌ನಲ್ಲಿ ನಿಮ್ಮ ಹೆಸರನ್ನು ಬರಲು ಬಯಸುತ್ತಿದ್ದೀರಾ? ಸಮಾಜದಲ್ಲಿ ಬೇರೆ ಯಾವುದೇ ಅನಾರೋಗ್ಯ ಪೀಡಿತರು ನಿಮಗೆ ಕಾಣುತ್ತಿಲ್ಲವೇ? ಶುದ್ಧ ನೀರು ಸಿಗದ ಜನರು, ಹಸಿವಿನಿಂದ ಬಳಲುತ್ತಿರುವ ಜನರು, ನಿಮಗೆ ಕಾಣಿಸುತ್ತಿಲ್ಲವೇ? ನೀವು ಅತಿಕ್ರಮಣವನ್ನು ಮಾತ್ರ ನೋಡುತ್ತಿದ್ದೀರಾ? ದಯವಿಟ್ಟು ಈ ರೀತಿ ಪಿಐಎಲ್‌ಗಳನ್ನು ದುರುಪಯೋಗಪಡಿಸಿಕೊಳ್ಳಬೇಡಿ. ಈ ಅರ್ಜಿಗಳು ನಮ್ಮನ್ನು ತೊಂದರೆಗೊಳಿಸುತ್ತಿವೆ” ಎಂದು ಮುಖ್ಯ ನ್ಯಾಯಮೂರ್ತಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸೇವ್ ಇಂಡಿಯಾ ಫೌಂಡೇಶನ್ ಸಲ್ಲಿಸಿದ್ದ ಎರಡು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಬುಧವಾರ ನ್ಯಾಯಾಲಯದ ಮುಂದೆ ವಿಚಾರಣೆಗೆ ಬಂದಿತ್ತು. ಅವುಗಳಲ್ಲಿ ಒಂದು ಜಾಮಾ ಮಸೀದಿ ಮತ್ತು ಮದರಸಾ ಗಿರಿ ನಗರಕ್ಕೆ ಸಂಬಂಧಿಸಿದೆ. ಸರ್ಕಾರಕ್ಕೆ ಸೇರಿದ “ಹಸಿರು, ಜಾತ್ಯತೀತ” ಭೂಮಿಯನ್ನು ಈ ರಚನೆ (ಮಸೀದಿ, ಮದ್ರಸಾ) ಅತಿಕ್ರಮಿಸಿದೆ ಎಂದು ಸಂಸ್ಥೆ ಆರೋಪಿಸಿತ್ತು.
ಅರ್ಜಿದಾರರ ಪರ ವಕೀಲ ಉಮೇಶ್ ಚಂದ್ರ ಶರ್ಮಾ ವಾದ ಮಂಡಿಸಿ, ದೂರುಗಳು ದಾಖಲಾಗಿದ್ದರೂ ಮಸೀದಿಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಹೇಳಿದ್ದರು.
ದೆಹಲಿ ಸರ್ಕಾರದ ಪರ ವಕೀಲ ಸಮೀರ್ ವಶಿಷ್ಠ ವಾದ ಮಂಡಿಸಿ, ಸ್ಥಳೀಯ ಅಧಿಕಾರಿಗಳ ಪ್ರಕಾರ ಈ ರಚನೆಯು ಅತಿಕ್ರಮಣವಾಗಿದೆ ಎಂದು ತಿಳಿಸಿದ್ದಾರೆ.
ದೆಹಲಿ ವಕ್ಫ್ ಮಂಡಳಿಯ ಪರವಾಗಿ ಹಿರಿಯ ವಕೀಲ ಸಂಜಯ್ ಘೋಷ್ ವಾದ ಮಂಡಿಸಿ, ಮಸೀದಿಯು ಅಧಿಸೂಚಿತ ರಚನೆಯಾಗಿದ್ದು, ದೆಹಲಿ ಅಭಿವೃದ್ಧಿ ಪ್ರಾಧಿಕಾರ (ಡಿಡಿಎ) ಕೂಡ ಭೂಮಿಯ ಗಡಿ ಗುರುತಿಸುವಿಕೆಯಲ್ಲಿ ಭಾಗವಹಿಸಿದೆ ಎಂದು ವಾದಿಸಿದ್ದಾರೆ.
ಅರ್ಜಿದಾರರ ಸಂಸ್ಥೆ ಸಲ್ಲಿಸಿದ ಅರ್ಜಿಗಳನ್ನು ಮತ್ತು ಒಂದು ಸಮುದಾಯದ ಧಾರ್ಮಿಕ ರಚನೆಗಳನ್ನು ಗುರಿಯಾಗಿಸುವ ಮಾದರಿಯನ್ನು ಹೈಕೋರ್ಟ್‌ನ ಏಕ ಸದಸ್ಯ ನ್ಯಾಯಾಧೀಶರು ಗಮನಿಸಿದ್ದಾರೆ ಎಂದು ಘೋಷ್ ತಿಳಿಸಿದ್ದಾರೆ.
ಸ್ವಲ್ಪ ಸಮಯದವರೆಗೆ ಪ್ರಕರಣದ ವಿಚಾರಣೆ ನಡೆಸಿದ ನಂತರ, ನ್ಯಾಯಾಲಯವು ಜನವರಿ 21ಕ್ಕೆ ಮುಂದಿನ ವಿಚಾರಣೆಯನ್ನು ನಿಗದಿಪಡಿಸಿದೆ.


