ಇರಾನ್‌ನಲ್ಲಿ ಆಡಳಿತ ವಿರೋಧಿ ಪ್ರತಿಭಟನಾಕಾರರ ‘ಹತ್ಯೆಗಳು ನಿಂತಿವೆ’ ಎಂದು ಬುಧವಾರ (ಜ.14) ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ಎಂಬಂತೆ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ಕೂಡ ಪ್ರತಿಭಟನಾಕಾರರನ್ನು ಸರ್ಕಾರ ಗಲ್ಲಿಗೇರಿಸಲು ಯೋಜಿಸಿದೆ ಎಂಬುವುದನ್ನು ತಳ್ಳಿ ಹಾಕಿದ್ದಾರೆ.
ಆಡಳಿತ ವಿರೋಧಿ ಪ್ರತಿಭಟನಾಕಾರರು ವಿದೇಶಿ ಶಕ್ತಿಗಳ (ವಿಶೇಷವಾಗಿ ಅಮೆರಿಕ ಮತ್ತು ಇಸ್ರೇಲ್) ಬೆಂಬಲಿಗರು ಎಂದು ಆರಂಭದಲ್ಲಿ ಇರಾನ್ ಸರ್ಕಾರ ಹೇಳಿತ್ತು. ಕಠಿಣ ಕ್ರಮದ ಎಚ್ಚರಿಕೆ ನೀಡಿತ್ತು. ಅದಾಗ್ಯೂ ಪ್ರತಿಭಟನೆಗಳು ತೀವ್ರಗೊಂಡಾಗ ಪ್ರತಿಭಟನಾಕಾರರು ದೇವರ ಶತ್ರುಗಳು ಎಂದಿತ್ತು. ಅವರನ್ನು ಗಲ್ಲಿಗೇರಿಸುವ ಘೋಷಣೆ ಮಾಡಿತ್ತು.
ಈ ಹಿಂದಿನಿಂದಲೂ ಹಲವು ನೆಪ ಹೇಳಿ ಇರಾನ್ ಮೇಲೆ ದಾಳಿ ನಡೆಸುವ ಹಪಹಪಿಯಲ್ಲಿದ್ದ ಟ್ರಂಪ್‌ಗೆ ಈ ಘೋಷಣೆ ದೊಡ್ಡ ಬಲ ನೀಡಿತ್ತು. ಇರಾನ್ ಪ್ರತಿಭಟನಾಕಾರರನ್ನು ಕ್ರೂರವಾಗಿ ಧಮನಿಸಲು ಮುಂದಾದರೆ, ಅಥವಾ ಹತ್ಯೆಗಳು ಮುಂದುವರಿದರೆ ಅಮೆರಿಕ ಮಧ್ಯ ಪ್ರವೇಶಿಸಲಿದೆ ಎಂದಿದ್ದರು. ಈ ಮೂಲಕ ಇರಾನ್‌ನ ಆಂತರಿಕ ದಂಗೆಗೆ ಪರೋಕ್ಷ ಬೆಂಬಲ ನೀಡಿದ್ದರು.
ಆದರೆ, ಬುಧವಾರ ಇರಾನ್ ಮತ್ತು ಅಮೆರಿಕ ಎರಡೂ ಕಡೆಯ ವರಸೆ ಬದಲಾಗಿದೆ. ಅತ್ತ ಕಡೆಯಿಂದ ಟ್ರಂಪ್ ‘ಇರಾನ್‌ನಲ್ಲಿ ಹತ್ಯೆಗಳು ನಿಂತಿವೆ’ ಎಂದರೆ, ಇತ್ತ ಫಾಕ್ಸ್ ನ್ಯೂಸ್ ಜೊತೆ ಮಾತನಾಡಿರುವ ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಘ್ಚಿ ‘ಪ್ರತಿಭಟನಾಕಾರರನ್ನು ಗಲ್ಲಿಗೇರಿಸುವುದಿಲ್ಲ’ ಎಂದಿದ್ದಾರೆ.
ಈ ನಡುವೆ ಬುಧವಾರ-ಗುರುವಾರದ ಮಧ್ಯೆ ಎರಡು ಮಹತ್ವದ ಬೆಳವಣಿಗೆಳು ಆಗಿವೆ. ಅಮೆರಿಕ ಮತ್ತು ಯುಕೆ ಎರಡೂ ಕತಾರ್‌ನಲ್ಲಿರುವ ಅಲ್-ಉದೈದ್ ವಾಯುನೆಲೆಯಲ್ಲಿ ಸಿಬ್ಬಂದಿ ಸಂಖ್ಯೆಯನ್ನು ಕಡಿಮೆ ಮಾಡುತ್ತಿವೆ. ಅಂದರೆ, ಅಲ್ಲಿನ ಸಿಬ್ಬಂದಿಯನ್ನು ವಾಪಸ್ ಕರೆಸಿಕೊಳ್ಳುತ್ತಿವೆ ಎಂದು ಬುಧವಾರ ಸಂಜೆ ವರದಿಯಾಗಿತ್ತು.
ಅಮೆರಿಕ ಇರಾನ್ ಮೇಲೆ ದಾಳಿ ನಡೆಸುವುದು ನಿಚ್ಚಳವಾಗಿದೆ. ಅದರ ಪೂರ್ವಭಾವಿಯಾಗಿ ತಮ್ಮ ಸೈನಿಕರನ್ನು ವಾಪಸ್ ಕರೆಸಿಕೊಳ್ಳುತ್ತಿದೆ. ಮುಂದಿನ 24 ಗಂಟೆಗಳಲ್ಲಿ ಏನು ಬೇಕಾದರು ಆಗಬಹುದು ಎಂದು ಬುಧವಾರ ಸಂಜೆ ಜಗತ್ತು ಆತಂಕಗೊಂಡಿತ್ತು. ಆದರೆ, ಅಮೆರಿಕ ಮುನ್ನೆಚ್ಚರಿಕಾ ಕ್ರಮವಾಗಿ ಮಾತ್ರ ತಮ್ಮ ಸೈನಿಕರನ್ನು ವಾಪಸ್ ಕರೆಸಿಕೊಂಡಿದೆ ಎಂದು ವರದಿಗಳು ಹೇಳಿವೆ.
ಮತ್ತೊಂದೆಡೆ, ಅಮೆರಿಕದ ದಾಳಿ ಸಾಧ್ಯತೆ ಹಿನ್ನೆಲೆ ಬುಧವಾರ ಸಂಜೆಯಿಂದ ಇರಾನ್ ತನ್ನ ವಾಯು ಪ್ರದೇಶವನ್ನು ಮುಚ್ಚಿತ್ತು. ಅದರೆ, ಗುರುವಾರ ಮುಂಜಾನೆ ತೆರೆದಿದೆ ಎಂದು ತಿಳಿದು ಬಂದಿದೆ.
ಇತ್ತೀಚಿನ ವರದಿಗಳ ಪ್ರಕಾರ, ಇರಾನ್‌ನಲ್ಲಿ ಹತ್ಯೆಗಳು ನಿಂತಿವೆ. ಆದರೆ, ನಾವು ಸೇನಾ ಕಾರ್ಯಾಚರಣೆಯ ಆಯ್ಕೆಯನ್ನು ವಾಪಸ್ ತೆಗೆದುಕೊಂಡಿಲ್ಲ. ಮುಂದಿನ ಬೆಳವಣಿಗೆಯನ್ನು ಕಾದು ನೋಡುತ್ತೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
ಇತ್ತ ಇರಾನ್‌ನಲ್ಲಿ ಪ್ರತಿಭಟನೆಗಳು ಕೊಂಚ ತಣ್ಣಗಾಗಿವೆ ಎಂದು ವರದಿಯಾಗಿದೆ. ಕೆಲ ಮಾನವ ಹಕ್ಕು ಸಂಘಟನೆಗಳು ಇರಾನ್‌ನಲ್ಲಿ ಇದುವರೆಗೆ ಸುಮಾರು 2,500ರಿಂದ 3000 ಜನರು ಸಾವಿಗೀಡಾಗಿದ್ದಾರೆ ಎಂದು ಹೇಳುತ್ತಿವೆ. ಈ ಕುರಿತು ಖಚಿತ ಮಾಹಿತಿಯನ್ನು ಇರಾನ್ ಹೊರ ಬಿಟ್ಟಿಲ್ಲ.


