ಸಾಕ್ಷಿಗಳ ಹೇಳಿಕೆಗಳು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ, 2018 ರ ಸೆಕ್ಷನ್ 3(1)(ಆರ್) ಮತ್ತು 3(1)(ಎಸ್) ಅಡಿಯಲ್ಲಿ ಅಪರಾಧದ ಅಂಶಗಳನ್ನು ಬಹಿರಂಗಪಡಿಸುವುದಿಲ್ಲ ಎಂಬ ಕಾರಣಕ್ಕೆ ಆರೋಪಿಯನ್ನು ದೋಷಮುಕ್ತಗೊಳಿಸಲು ಸಾಧ್ಯವಿಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.
ಸಂತ್ರಸ್ತ ವ್ಯಕ್ತಿಯ ಹೇಳಿಕೆಯು ಮೇಲ್ನೋಟಕ್ಕೆ ಅಪರಾಧವನ್ನು ಬಹಿರಂಗಪಡಿಸಿದರೆ, ಆರೋಪ ರೂಪಿಸಲು ಅದು ಸಾಕಾಗುತ್ತದೆ ಎಂದು ನ್ಯಾಯಮೂರ್ತಿ ಎ. ಬದ್ರುದ್ದೀನ್ ಸ್ಪಷ್ಟಪಡಿಸಿದ್ದಾರೆ.
ಕಾನೂನಿಗೆ ಬಹು ಸಾಕ್ಷಿಗಳ ಅಗತ್ಯವಿಲ್ಲ ಮತ್ತು ಸಂಪೂರ್ಣ ವಿಶ್ವಾಸಾರ್ಹ ಏಕೈಕ ಸಾಕ್ಷಿಯ ಸಾಕ್ಷ್ಯವು ಸಾಕಾಗುತ್ತದೆ ಎಂದು ಹೇಳಿದ ನ್ಯಾಯಾಲಯವು, ಸಾಕ್ಷಿಗಳ ಹೇಳಿಕೆಗಳು ಪ್ರಾಸಿಕ್ಯೂಷನ್ ಪ್ರಕರಣವನ್ನು ಬೆಂಬಲಿಸದ ಕಾರಣ ತಾನು ಬಿಡುಗಡೆಗೆ ಅರ್ಹನಾಗಿದ್ದೇನೆ ಎಂಬ ಮೇಲ್ಮನವಿದಾರನ ವಾದವನ್ನು ತಿರಸ್ಕರಿಸಿದೆ.
ಸೆಕ್ಷನ್ 3(1)(ಆರ್) ಇತರ ಸಮುದಾಯದವರಿಂದ ಎಸ್‌ಸಿ/ಎಸ್‌ಟಿ ಸಮುದಾಯದ ಸದಸ್ಯರ ಉದ್ದೇಶಪೂರ್ವಕ ಅವಮಾನ ಅಥವಾ ಬೆದರಿಕೆಗೆ ಸಂಬಂಧಿಸಿದ್ದರೆ, ಸೆಕ್ಷನ್ 3(1)(ಎಸ್) ಜಾತಿಯ ಹೆಸರಿನಲ್ಲಿ ನಿಂದಿಸುವುದನ್ನು ಅಪರಾಧವೆಂದು ಪರಿಗಣಿಸುತ್ತದೆ.
ಬಿಡುಗಡೆ ಅರ್ಜಿಯನ್ನು ಪರಿಶೀಲಿಸುವಾಗ ಮೇಲ್ನೋಟಕ್ಕೆ ಪ್ರಕರಣವು ಅಸ್ತಿತ್ವದಲ್ಲಿದೆಯೇ ಅಥವಾ ಆರೋಪಗಳನ್ನು ರೂಪಿಸಲು ಅಗತ್ಯವಿರುವ ಕನಿಷ್ಠ ಒಂದಾದರೂ ಬಲವಾದ ಶಂಕಿತ ಅಂಶವಿದೆಯೇ ಎನ್ನುವುದನ್ನು ನಿರ್ಧರಿಸುವುದು ನ್ಯಾಯಾಲಯದ ಕೆಲಸವಾಗಿದೆ ಎಂದು ಹೈಕೋರ್ಟ್ ಹೇಳಿದೆ.
ಎಸ್‌ಸಿ/ಎಸ್‌ಟಿ ಸಮುದಾಯಕ್ಕೆ ಸೇರಿರದ ಆರೋಪಿಯು ಸಭೆಯೊಂದರಲ್ಲಿ ಸ್ವಚ್ಛತಾ ಸಿಬ್ಬಂದಿಯ ಎದುರು ಸಂತ್ರಸ್ತೆಯನ್ನು ಜಾತಿಯ ಹೆಸರಿನಿಂದ ಕರೆದು ಅವಮಾನಿಸಿದ್ದಾಗಿ ಪ್ರಾಸಿಕ್ಯೂಷನ್ ಆರೋಪಿಸಿದೆ.
ಪ್ರಕರಣವು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಹೇಳಿದ್ದ ವಿಶೇಷ ನ್ಯಾಯಾಲಯ, ಆರೋಪಿಯ ಬಿಡುಗಡೆ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಆತ ಹೈಕೋರ್ಟ್ ಮೆಟ್ಟಿಲೇರಿದ್ದ.


