ತಮಿಳುನಾಡು ವಿಧಾನಸಭೆಯಲ್ಲಿ ಮತ್ತೊಮ್ಮೆ ರಾಜ್ಯಪಾಲ ಆರ್.ಎನ್ ರವಿ ಮತ್ತು ಸರ್ಕಾರದ ನಡುವೆ ಜಟಾಪಟಿ ನಡೆದಿದೆ. ಸತತ 3ನೇ ಬಾರಿಗೆ ರಾಜ್ಯಪಾಲರು ಅಧಿವೇಶನದ ಆರಂಭದಲ್ಲಿ ಮಾಡಬೇಕಾದ ಸಾಂಪ್ರದಾಯಿಕ ಭಾಷಣ ಮಾಡದೆ ಮಂಗಳವಾರ (ಜ.20) ವಿಧಾನಸಭೆಯಿಂದ ಹೊರನಡೆದಿದ್ದಾರೆ.
ಡಿಎಂಕೆ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ ‘ತಪ್ಪುಗಳಿವೆ’ ಎಂದು ಆರೋಪಿಸಿ, ಅದನ್ನು ಓದಲು ರಾಜ್ಯಪಾಲರು ನಿರಾಕರಿಸಿದ್ದು, ವರ್ಷದ ಮೊದಲ ಅಧಿವೇಶನದ ಆರಂಭದಲ್ಲೇ ಗದ್ದಲ ಉಂಟಾಗಿದೆ.
ವರದಿಗಳ ಪ್ರಕಾರ, ಸದನಕ್ಕೆ ಪ್ರವೇಶಿಸಿದ ಕೂಡಲೇ, ರಾಷ್ಟ್ರಗೀತೆಗೆ ಸರಿಯಾದ ಗೌರವ ನೀಡಲಾಗಿಲ್ಲ ಎಂದು ರಾಜ್ಯಪಾಲ ರವಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನನಗೆ ನಿರಾಶೆಯಾಗಿದೆ. ರಾಷ್ಟ್ರಗೀತೆಯನ್ನು ಸರಿಯಾಗಿ ಗೌರವಿಸಬೇಕು” ಎಂದು ಹೇಳಿದ್ದಾರೆ.
ಈ ವೇಳೆ ಮಧ್ಯಪ್ರವೇಶಿಸಿದ ಸ್ಪೀಕರ್ ಅಪ್ಪಾವು ಅವರು, ರಾಜ್ಯ ಸರ್ಕಾರ ಸಿದ್ಧಪಡಿಸಿದ ಸಾಂಪ್ರದಾಯಿಕ ಭಾಷಣ ಓದುವುದಕ್ಕೆ ಮಾತ್ರ ರಾಜ್ಯಪಾಲರು ತಮ್ಮನ್ನು ಸೀಮಿತಗೊಳಿಸಬೇಕು. ಸದನದ ಸ್ಥಾಪಿತ ನಿಯಮಗಳು ಮತ್ತು ಸಂಪ್ರದಾಯಗಳನ್ನು ಅನುಸರಿಸಬೇಕು. ವಿಧಾನಸಭೆಯಲ್ಲಿ ಚುನಾಯಿತ ಸದಸ್ಯರು ಮಾತ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಅನುಮತಿ ಇದೆ ಎಂದು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ರಾಜ್ಯಪಾಲರು, “ನನ್ನ ಭಾಷಣಕ್ಕೆ ಅಡ್ಡಿಪಡಿಸಲಾಗಿದೆ. ಮೈಕ್ರೊಫೋನ್ (ಮೈಕ್) ಸ್ವಿಚ್ ಆಫ್ ಮಾಡಲಾಗಿದೆ. ಇದರಿಂದ ನನಗೆ ಅವಮಾನವಾಗಿದೆ. ತಪ್ಪುಗಳಿಂದ ತುಂಬಿರುವ ಭಾಷಣವನ್ನು ನಾನು ಓದಲು ಸಾಧ್ಯವಿಲ್ಲ” ಎಂದು ವಿಧಾನಸಭೆಯಿಂದ ಹೊರನಡೆದಿದ್ದಾರೆ.
ರಾಜ್ಯಪಾಲರ ನಡೆಯನ್ನು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಟೀಕಿಸಿದ್ದು, ರಾಜ್ಯಪಾಲರು ಸಂಪ್ರದಾಯ ಮತ್ತು ನಿಯಮಗಳನ್ನು ಉಲ್ಲಂಘಿಸಿ ಹೊರನಡೆದಿದ್ದಾರೆ ಎಂದಿದ್ದಾರೆ. ನಂತರ ಭಾಷಣದ ಇಂಗ್ಲಿಷ್ ಆವೃತ್ತಿಯನ್ನು ಓದಲಾಗಿದೆ ಎಂದು ಭಾವಿಸಲಾಗಿದೆ ಎಂದು ಹೇಳುವ ನಿರ್ಣಯವನ್ನು ಮಂಡಿಸಿದ್ದಾರೆ.
“ರಾಜ್ಯಪಾಲರು ಸಂಪ್ರದಾಯಗಳು ಮತ್ತು ನಿಯಮಗಳನ್ನು ಉಲ್ಲಂಘಿಸಿ ಹೊರನಡೆದಿದ್ದಾರೆ. ರಾಜ್ಯ ಸರ್ಕಾರ ಸಿದ್ಧಪಡಿಸಿದ ಭಾಷಣದಲ್ಲಿ, ರಾಜ್ಯಪಾಲರು ತಮ್ಮ ಅಭಿಪ್ರಾಯಗಳನ್ನು ಸೇರಿಸಲು ಅಥವಾ ಬೇರೆ ಏನನ್ನಾದರೂ ಹೇಳಲು ಯಾವುದೇ ಅವಕಾಶವಿಲ್ಲ” ಎಂದು ಸ್ಟಾಲಿನ್ ಹೇಳಿದ್ದಾರೆ.
ರಾಜ್ಯಪಾಲರ ರವಿ ಅವರು ಉದ್ದೇಶಪೂರ್ವಕವಾಗಿ ಇಂತಹ ಕೆಲಸಗಳನ್ನು ಮಾಡುತ್ತಿದ್ದಾರೆ. ಅವರ ನಡವಳಿಕೆ ಸದನವನ್ನು ಅವಮಾನಿಸಿದಂತೆ ಎಂದು ಸಿಎಂ ಸ್ಟಾಲಿನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯಪಾಲರ ಅಗತ್ಯವಿಲ್ಲ ಎಂಬ ಆಡಳಿತಾರೂಢ ಡಿಎಂಕೆಯ ನಿಲುವನ್ನು ಸ್ಟಾಲಿನ್ ಪುನರುಚ್ಚರಿಸಿದ್ದು, ಈ ಹಿಂದಿನ ಮುಖ್ಯಮಂತ್ರಿಗಳಾದ ದಿವಂಗತ ಸಿಎನ್ ಅಣ್ಣಾದೊರೈ ಮತ್ತು ಎಂ ಕರುಣಾನಿಧಿ ಅವರು ರಾಜ್ಯಪಾಲರ ಸ್ಥಾನವನ್ನು ಗೌರವಿಸಿದ್ದರು. ಹಾಗಾಗಿ, ನಾವು ಅದನ್ನು ಅನುಸರಿಸುತ್ತಿದ್ದೇವೆ ಎಂದಿದ್ದಾರೆ.


