ವಿಧಾನಸಭೆ ಅಧಿವೇಶನದಲ್ಲಿ ರಾಜ್ಯಪಾಲರು ವಾರ್ಷಿಕ ಭಾಷಣ ಮಾಡುವ ಸಂಪ್ರದಾಯವನ್ನು ರದ್ದುಗೊಳಿಸುವ ಸಾಂವಿಧಾನಿಕ ತಿದ್ದುಪಡಿಗೆ ಒತ್ತಾಯಿಸುವುದಾಗಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಘೋಷಿಸಿದ್ದಾರೆ.
ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲ ಆರ್.ಎನ್ ರವಿ ನಡುವೆ ಜಟಾಪಟಿ ನಡೆದು, ಮಂಗಳವಾರ (ಜ.20) ಸತತ ಮೂರನೇ ಬಾರಿಗೆ ರಾಜ್ಯಪಾಲರು ಸರ್ಕಾರ ಸಿದ್ದಪಡಿಸಿದ ಭಾಷಣ ಓದದೆ ಸದನದಿಂದ ಹೊರ ನಡೆದಿದ್ದಾರೆ. ಆ ಬಳಿಕ ಮಾತನಾಡಿದ ಸಿಎಂ ಸ್ಟಾಲಿನ್ ರಾಜ್ಯಪಾಲರ ಭಾಷಣವನ್ನೇ ರದ್ದುಗೊಳಿಸಲು ಒತ್ತಾಯಿಸುವುದಾಗಿ ಹೇಳಿದ್ದಾರೆ.
“ಪ್ರತಿ ವರ್ಷ ಸರ್ಕಾರ ಸಿದ್ಧಪಡಿಸುವ ಭಾಷಣವನ್ನು ರಾಜ್ಯಪಾಲರು ನಿರಾಕರಿಸುವುದು ಸರಿಯಲ್ಲ. ಬಿಜೆಪಿಯೇತರ ಆಡಳಿತವಿರುವ ಇತರ ರಾಜ್ಯಗಳಲ್ಲಿಯೂ ಇದೇ ರೀತಿಯ ಸಮಸ್ಯೆಗಳು ಕಂಡುಬರುತ್ತಿವೆ” ಎಂದು ಸಿಎಂ ಸ್ಟಾಲಿನ್ ವಿಧಾನಸಭೆಯಲ್ಲಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪದೇ ಪದೇ ಉಲ್ಲಂಘಿಸಲ್ಪಡುವ ಪದ್ಧತಿಯ ಪ್ರಸ್ತುತತೆಯನ್ನು ಸ್ಟಾಲಿನ್ ಪ್ರಶ್ನಿಸಿದ್ದು, ಸಂವಿಧಾನದಲ್ಲಿ ಈ ಪದ್ದತಿಯ ಸ್ಥಾನವನ್ನು ಮರುಪರಿಶೀಲಿಸುವ ಸೂಕ್ತ ಸಮಯ ಇದೇ ಅಗಿರಬಹುದು ಎಂದಿದ್ದಾರೆ.
ಸಂವಿಧಾನಕ್ಕೆ ತಿದ್ದುಪಡಿ ತಂದು ರಾಜ್ಯಪಾಲರ ವಾರ್ಷಿಕ ಭಾಷಣವನ್ನು ತೆಗೆದುಹಾಕಲು ಡಿಎಂಕೆ ಸಂಸತ್ತಿನಲ್ಲಿ ಸಮಾನ ಮನಸ್ಕ ಪಕ್ಷಗಳ ಬೆಂಬಲವನ್ನು ಕೋರಲಿದೆ ಎಂದಿರುವ ಸ್ಟಾಲಿನ್, “ರಾಜ್ಯಪಾಲರ ಭಾಷಣ ಅನಗತ್ಯ ಎಂಬ ಸಾಂವಿಧಾನಿಕ ತಿದ್ದುಪಡಿಗೆ ನಾವು ಒತ್ತಾಯಿಸೋಣ” ಎಂದು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕ್ರಮದಿಂದ ಎಲ್ಲಾ ವಿರೋಧ ಪಕ್ಷಗಳ ಆಡಳಿತದ ರಾಜ್ಯಗಳಿಗೆ ಪ್ರಯೋಜನವಾಗಲಿದೆ ಎಂದಿದ್ದಾರೆ.
ದ್ರಾವಿಡ ಮಾದರಿಯನ್ನು ಅನುಸರಿಸಿದ ನಮ್ಮ ಸರ್ಕಾರದ ನಾಲ್ಕು ವರ್ಷಗಳ ಸಾಧನೆಗಳನ್ನು ರಾಜ್ಯಪಾಲರು ನೀತಿ ಭಾಷಣ ಮಾಡಲು ನಿರಾಕರಿಸಿದ್ದರಿಂದ ಮರೆಮಾಚಬಾರದು ಎಂದು ಸ್ಟಾಲಿನ್ ಹೇಳಿದ್ದಾರೆ.


